Karnataka High Court 
ಸುದ್ದಿಗಳು

ಪಿಲಿಕುಳ ಮೃಗಾಲಯ ಅರಣ್ಯ ಇಲಾಖೆಗೆ ವರ್ಗಾವಣೆ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಮೃಗಾಲಯ ವರ್ಗಾವಣೆ ಹೇಗಿರಲಿದೆ, ಕೇವಲ ಮೃಗಾಲಯ ಇರುವ ಸೀಮಿತ ಭೌಗೋಳಿಕ ಪ್ರದೇಶ & ಪ್ರಾಣಿಗಳಿಗೆ ಮಾತ್ರ ಸಿಮೀತವಾಗಿರಲಿದೆಯೇ? ಒಟ್ಟಾರೆ ಜೈವಿಕ ಉದ್ಯಾನವನದ ವಿಚಾರ ಏನಾಗಲಿದೆ ಎಂಬ ವಿವರಣೆಯನ್ನು ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಾಲಯ.

Bar & Bench

ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳ ಮೃಗಾಲಯವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಈಚೆಗೆ ತಿಳಿಸಿದೆ.

ಪಿಲಿಕುಳ ಜೈವಿಕ ಉದ್ಯಾನದ ಬಳಿ ಕಂಬಳ ಆಯೋಜನೆಗೆ ಅನುಮತಿ ನೀಡಬಾರದು ಎಂದು ಕೋರಿ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ (ಪೆಟಾ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಪರ ಹಾಜರಾದ ಅಡ್ವೋಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಪಿಲಿಕುಳ ಮೃಗಾಲಯವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗುವುದು, ನಿರ್ವಹಣೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ, ಪಿಲಿಕುಳ ಅಭಿವೃದ್ದಿ ಪ್ರಾಧಿಕಾರ ಹಾಗೂ ರಾಜ್ಯ ಮೃಗಾಯಲಯ ಪ್ರಾಧಿಕಾರದ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಮೃಗಾಲಯದಲ್ಲಿರುವ 652 ಪ್ರಾಣಿಗಳ ಸುರಕ್ಷತೆ ಮತ್ತು ಕಾಳಜಿ ಸರ್ಕಾರದ ಆದ್ಯತೆಯಾಗಿದೆ” ಎಂದರು.

ಇದಕ್ಕೆ ರಾಷ್ಟ್ರೀಯ ಮೃಗಾಲಯ ಪ್ರಾಧಿಕಾರದ ಪರ ವಕೀಲರು “ಪಿಲಿಕುಳ ಮೃಗಾಲಯವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿದರೆ ತಮ್ಮದೇನು ಅಭ್ಯಂತರವಿಲ್ಲ” ಎಂದರು.

ಮೃಗಾಲಯ ವರ್ಗಾವಣೆ ಹೇಗಿರಲಿದೆ, ಕೇವಲ ಮೃಗಾಲಯ ಇರುವ ಸೀಮಿತ ಭೌಗೋಳಿಕ ಪ್ರದೇಶ ಮತ್ತು ಪ್ರಾಣಿಗಳಿಗೆ ಮಾತ್ರ ಸಿಮೀತವಾಗಿರಲಿದೆಯೇ? ಒಟ್ಟಾರೆ ಜೈವಿಕ ಉದ್ಯಾನವನದ ವಿಚಾರ ಏನಾಗಲಿದೆ ಎಂಬ ವಿವರಣೆಯನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಾಲಯ ವಿಚಾರಣೆಯನ್ನು ಸೆಪ್ಟೆಂಬರ್‌ 1ಕ್ಕೆ ಮುಂದೂಡಿತು.