ಜಾರ್ಖಂಡ್ ಹೈಕೋರ್ಟ್
ಜಾರ್ಖಂಡ್ ಹೈಕೋರ್ಟ್ 
ಸುದ್ದಿಗಳು

ವೃದ್ಧ ತಂದೆ ಹಣ ಸಂಪಾದಿಸುತ್ತಿದ್ದರೂ ಅವರನ್ನು ನೋಡಿಕೊಳ್ಳುವುದು ಮಗನ ಪವಿತ್ರ ಕರ್ತವ್ಯ: ಜಾರ್ಖಂಡ್ ಹೈಕೋರ್ಟ್

Bar & Bench

ವೃದ್ಧ ತಂದೆಯ ಪೋಷಣೆ ಮಾಡುವುದು ಮತ್ತು ತಂದೆ ಸಂಪಾದಿಸುತ್ತಿದ್ದರೂ ಜೀವನಾಂಶ ಪಾವತಿಸುವುದು ಮಗನ ಪವಿತ್ರ ಕರ್ತವ್ಯ ಎಂದು ಈಚೆಗೆ ತಿಳಿಸಿರುವ ಜಾರ್ಖಂಡ್‌ ಹೈಕೋರ್ಟ್‌ ತನ್ನ ವೃದ್ಧ ತಂದೆಗೆ ಜೀವನಾಂಶ ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ. [ಮನೋಜ್‌ ಕುಮಾರ್‌ ಅಲಿಯಾಸ್‌ ಮನೋಜ್‌ ಸಾವೋ ಮತ್ತು ಜಾರ್ಖಂಡ್‌ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ತನ್ನ ತಂದೆಗೆ ಮಾಸಿಕ ಜೀವನಾಂಶವಾಗಿ ₹ 3,000 ಪಾವತಿಸುವಂತೆ ಸೂಚಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಸುಭಾಷ್ ಚಂದ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೆತ್ತವರ ಮಹತ್ವವನ್ನು ತಿಳಿಸಲು ನ್ಯಾಯಮೂರ್ತಿಗಳು ಹಿಂದೂ ಧರ್ಮಗ್ರಂಥಗಳು ಹಾಗೂ ಮಹಾಭಾರತವನ್ನು ಉಲ್ಲೇಖಿಸಿದರು.

"ಹಿಂದೂ ಧರ್ಮದಲ್ಲಿ ಪೋಷಕರ ಪ್ರಾಮುಖ್ಯತೆಯನ್ನು ತೋರಿಸಲಾಗಿದೆ, ಅದನ್ನು ಈ ಕೆಳಗಿನಂತೆ ಉಲ್ಲೇಖಿಸಲಾಗಿದೆ: 'ನಿಮ್ಮ ಪೋಷಕರು ಆತ್ಮವಿಶ್ವಾಸದಿಂದಿದ್ದರೆ ನೀವು ಆತ್ಮವಿಶ್ವಾಸದಿಂದ ಇರುತ್ತೀರಿ, ಅವರು ದುಃಖಿತರಾಗಿದ್ದರೆ ನೀವು ದುಃಖಿತರಾಗಿರುತ್ತೀರಿ. ತಂದೆ ನಿಮ್ಮ ದೈವ, ತಾಯಿ ನಿಮ್ಮ ಸ್ವಭಾವ. ಅವರು ಬೀಜ ನೀವು ಸಸಿ. ಅವರಲ್ಲಿ ಒಳ್ಳೆಯದು ಅಥವಾ ಕೆಟ್ಟದ್ದು ಏನೇ ಇರಲಿ, ನಿಷ್ಕ್ರಿಯವಾಗಿದ್ದರೂ ಅವರು ನಿಮ್ಮೊಳಗೆ ವೃಕ್ಷವಾಗಿರುತ್ತಾರೆ. ಆದ್ದರಿಂದ ನೀವು ನಿಮ್ಮ ಹೆತ್ತವರ ಒಳಿತು ಕೆಡಕು ಎರಡನ್ನೂ ಆನುವಂಶಿಕವಾಗಿ ಪಡೆಯುತ್ತೀರಿ. ಒಬ್ಬ ವ್ಯಕ್ತಿ ಹುಟ್ಟುತ್ತಲೇ ಕೆಲ ಸಾಲ ಪಡೆದಿದ್ದು ಅದರಲ್ಲಿ ತಂದೆ ಮತ್ತು ತಾಯಿಯ (ಅನುಭಾವಿಕ) ಸಾಲವೂ ಸೇರಿದೆ, ಅದನ್ನು ನಾವು ತೀರಿಸಬೇಕಿದೆ" ಎಂದು ನ್ಯಾಯಾಲಯ ನುಡಿಯಿತು.

ಇದಲ್ಲದೆ, ಮಹಾಭಾರತದಲ್ಲಿ, ಭೂಮಿಗಿಂತ ಶಕ್ತಿಶಾಲಿ ಮತ್ತು ಸ್ವರ್ಗಕ್ಕಿಂತ ಮಿಗಿಲಾದುದು ಯಾವುದು ಎಂದು ಕೇಳಿದಾಗ, ಯುಧಿಷ್ಠಿರ, ʼಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿʼ ಎಂದ ಅಂದರೆ ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಎನ್ನುತ್ತಾನೆ ಎಂದು ನ್ಯಾಯಾಲಯ ಹೇಳಿತು.

ನ್ಯಾಯಮೂರ್ತಿ ಸುಭಾಷ್ ಚಂದ್, ಜಾರ್ಖಂಡ್ ಹೈಕೋರ್ಟ್

ತಂದೆ ಸಂಪಾದನೆ ಮಾಡುತ್ತಿದ್ದಾರೆ ಎಂದು ವಾದಿಸುತ್ತಿದ್ದೀರಿ ಎಂದಿಟ್ಟುಕೊಳ್ಳೋಣ ಇದು ಹೆತ್ತವರನ್ನು ನೋಡಿಕೊಳ್ಳುವ ಮಗನ ಕರ್ತವ್ಯದ ಮೇಲೆ ಪರಿಣಾಮ, ಬೀರುವುದಿಲ್ಲ ಎಂದು ಅದು ನುಡಿಯಿತು.

ತನ್ನ ಇಬ್ಬರು ಮಕ್ಕಳಿಗೆ ಜಮೀನು ಪಾಲು ಮಾಡಿಕೊಟ್ಟಿದ್ದೆ. ಹಿರಿಯ ಮಗ 5 ವರ್ಷಗಳಿಂದ ತಮ್ಮನ್ನು ನೋಡಿಕೊಳ್ಳುತ್ತಿದ್ದರೆ, ಕಿರಿಯ ಮಗ ಮನೋಜ್ ಕುಮಾರ್ ಅವರನ್ನು ನೋಡಿಕೊಳ್ಳುತ್ತಿಲ್ಲ, ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹೀಗಾಗಿ ಕಿರಿಯ ಮಗ ತನಗೆ ಮಾಸಿಕ ರೂ 10,000 ಜೀವನಾಂಶ ಪಾವತಿಸುವಂತೆ ತಂದೆ ದಿಯೋಕಿ ಸಾವೊ ಅವರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಾಸಿಕ ಜೀವನಾಂಶವಾಗಿ ₹ 3,000 ಪಾವತಿಸಲು ಕಿರಿಯ ಪುತ್ರನಿಗೆ ಆದೇಶಿಸಿತ್ತು. ಈ ಆದೇಶವನ್ನು ಪುತ್ರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ತಾನು ತಂದೆಯನ್ನು ನಿರ್ಲಕ್ಷಿಸುತ್ತಿಲ್ಲ. ಅವರಿಗೆ ಕೃಷಿ ಭೂಮಿಯಿದ್ದು ಇಟ್ಟಿಗೆ ಗೂಡಿನ ವ್ಯವಹಾರದಿಂದಲೂ ಆದಾಯ ಬರುತ್ತದೆ. ತನ್ನನ್ನು ಸಂಭಾಳಿಸಿಕೊಳ್ಳಲು ಅವರು ಸಮರ್ಥರಾಗಿದ್ದಾರೆ. ತನಗೆ ಕಿರುಕುಳ ನೀಡಲೆಂದೇ ಜೀವನಾಂಶ ಅರ್ಜಿ ಸಲ್ಲಿಸಲಾಗಿದೆ ಎಂದು ಕಿರಿಯ ಪುತ್ರ ವಾದಿಸಿದ್ದರು.

ಆದರೆ ಈ ವಾದ ಒಪ್ಪದ ನ್ಯಾಯಾಲಯ "ತಂದೆಗೆ ಕೃಷಿ ಭೂಮಿ ಇದ್ದರೂ ಅವರಿಗೆ ಕೃಷಿಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರು ಹಿರಿಯ ಮಗನೊಂದಿಗೆ ವಾಸಿಸುತ್ತಿದ್ದು ಕಿರಿಯಮಗನಿಗೆ ಸಮಾನವಾಗಿ ಆಸ್ತಿಯಲ್ಲಿ ಪಾಲು ನೀಡಿದ್ದರೂ 15 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಆತ ತಂದೆಯನ್ನು ನೋಡಿಕೊಳ್ಳುತ್ತಿಲ್ಲ. ತಂದೆ ಸಂಪಾದನೆ ಮಾಡುತ್ತಿದ್ದಾರೆ ಎಂದೇ ವಾದಿಸಿದರೂ ವೃದ್ಧ ತಂದೆಯನ್ನು ನೋಡಿಕೊಳ್ಳುವುದು ಮಗನ ಪವಿತ್ರ ಕರ್ತವ್ಯ" ಎಂದು ನುಡಿಯಿತು. ಈ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿಹಿಡಿದ ಅದು ಕಿರಿಯ ಪ್ರತ್ರನ ಅರ್ಜಿ ವಜಾಗೊಳಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Manoj Kumar Alias Manoj Sao.pdf
Preview