ಸುದ್ದಿಗಳು

{ಲೈವ್ ಅಪಡೇಟ್‌} ಸುಪ್ರೀಂ ಕೋರ್ಟ್‌ನಲ್ಲಿ ವಿವಾದಿತ ಸುದರ್ಶನ್ ಟಿವಿಯ ಯುಪಿಎಸ್‌ಸಿ ಜಿಹಾದ್ ಪ್ರಕರಣದ ವಿಚಾರಣೆ ಆರಂಭ

ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಕೆ ಎಂ ಜೋಸೆಫ್ ಮತ್ತು ಇಂದೂ ಮಲ್ಹೋತ್ರಾ ಅವರನ್ನೊಳಗೊಂಡ ಪೀಠದಿಂದ ಪ್ರಕರಣದ ವಿಚಾರಣೆ.

Bar & Bench

ಸುದರ್ಶನ್‌ ಟಿವಿ ವಿಚಾರಣೆ: ಯುಪಿಎಸ್‌ಸಿ ಜಿಹಾದ್ ಹೆಸರಿನ ಕಾರ್ಯಕ್ರಮದ ಪ್ರಸರಣದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನ್ಯಾ. ಡಿ ವೈ ಚಂದ್ರಚೂಡ್‌ ನೇತೃತ್ವದ ಪೀಠದಲ್ಲಿ ನಡೆಯಲಿದೆ. ವಾಹಿನಿಯ ಪರವಾಗಿ ಹಿರಿಯ ವಕೀಲ ಶ್ಯಾಮ್‌ ದಿವಾನ್ ಈ ಹಿಂದೆ ನೀಡಿದ್ದ ತಡೆಯನ್ನು ತೆರವುಗೊಳಿಸುವಂತೆ ವಾದ ಮಂಡಿಸಲಿದ್ದಾರೆ.

ಭಾರತೀಯ ಜಕಾತ್ ಫೌಂಡೇಶನ್ ಪರ ವಾದಿಸಲಿರುವ ಹಿರಿಯ ವಕೀಲ ಸಂಜಯ್ ಹೆಗ್ಡೆ.

ಮೊದಲ ಬಾರಿಗೆ ವಿಚಾರಣೆಯಲ್ಲಿ ಪಾಲ್ಗೊಳ್ಳುತ್ತಿರುವ ಸುದರ್ಶನ್ ಟಿವಿಯ ಪ್ರಧಾನ ಸಂಪಾದಕ ಮತ್ತು ಯುಪಿಎಸ್‌ಸಿ ಜಿಹಾದ್ ಕಾರ್ಯಕ್ರಮದ ನಿರೂಪಕ ಸುರೇಶ್ ಚವ್ಹಾಣ್ಕೆ.

ದಿವಾನ್: ಸುರೇಶ್ ಚವ್ಹಾಣ್ಕೆ ಯಾವುದೇ ನಿರ್ದಿಷ್ಟ ಗುಂಪಿನ ವಿರುದ್ಧವಿಲ್ಲ. ವಾಸ್ತವಾಂಶಗಳನ್ನು ಅಫಿಡವಿಟ್ ಮೂಲಕ ಸಲ್ಲಿಸಲಾಗಿದ್ದು, ತಾತ್ಕಾಲಿಕ ತಡೆಯನ್ನು ರದ್ದುಗೊಳಿಸುವಂತೆ ಕೋರಲಾಗಿದೆ. ಕಳೆದ 15 ವರ್ಷಗಳಿಂದ ಸುದರ್ಶನ್ ಟಿವಿ ಪ್ರಸಾರವಾಗುತ್ತಿದೆ… ಚವ್ಹಾಣಕೆ ವಿರುದ್ಧ ಯಾವುದೇ ಆರೋಪವಿಲ್ಲ.

ದಿವಾನ್: ಜಕಾತ್ ಫೌಂಡೇಶನ್ ಗೆ ಕೊಡುಗೆ ನೀಡಿದವರೆಲ್ಲರೂ ಉಗ್ರರ ಸಂಪರ್ಕ ಹೊಂದಿದ್ದಾರೆ ಎಂದಲ್ಲ. ಕೆಲವರು ಇದ್ದಾರೆ. ಅಲ್ಲಿಂದ ಸ್ವೀಕರಿಸಲಾದ ಹಣವನ್ನು ಯುಪಿಎಸ್‌ಸಿ ಆಕಾಂಕ್ಷಿಗಳ ತರಬೇತಿಗೆ ಬಳಸಲಾಗುತ್ತಿದೆ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಇದರ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯ,

ದಿವಾನ್: ಭಾರತೀಯ ಜಕಾತ್ ಫೌಂಡೇಶನ್‌ಗೆ ವಿದೇಶಿ ಹಣ ಸಂದಾಯವಾಗುತ್ತಿದೆ ಎಂಬುದಕ್ಕೆ ಸಂಬಂಧಿಸಿದಂತೆ ವಿಚಾರ ಮಂಡಿಸಿರುವ ಹಿನ್ನೆಲೆಯಲ್ಲಿ ಸದರಿ ಸಂಸ್ಥೆಯ ಚಟುವಟಿಕೆಗಳ ತನಿಖೆ ನಡೆಸಬೇಕೇ ಎಂಬುದರ ಕುರಿತು ಪತ್ರಕರ್ತ ಪ್ರಶ್ನೆ ಎತ್ತಿದ್ದಾರೆ.

ದಿವಾನ್: ಸುರೇಶ್ ಚವ್ಹಾಣ್ಕೆ ಅವರು ತಮಗೆ ದೊರೆತಿರುವ ಮೂಲಭೂತ ಹಕ್ಕುಗಳ ಮಿತಿಯೊಳಗೆ ಟಿವಿ ಚಾನೆಲ್ ಒಳಗೊಂಡು ಈ ವಿಚಾರಗಳನ್ನು ಪ್ರಸ್ತಾಪಿಸಿರುವುದಾಗಿ ನಂಬಿದ್ದಾರೆ.

ದಿವಾನ್: ಜಕಾತ್ ಫೌಂಡೇಶನ್ ವೆಬ್‌ಸೈಟಿನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ 2009 ರಿಂದ 2019ರ ವರೆಗೆ 119 ಮಂದಿ ನಾಗರಿಕ ಸೇವೆಗೆ ಸೇರ್ಪಡೆಯಾಗಿದ್ದಾರೆ. ಗೃಹ ಸಚಿವಾಲಯದಲ್ಲಿರುವ ಎಫ್‌ಆರ್‌ಸಿಎ ದಾಖಲೆಗಳ ಪ್ರಕಾರ ಜಕಾತ್ ಫೌಂಡೇಶನ್ ಇಂಗ್ಲೆಂಡ್‌ ನ ಮದೀನಾ ಟ್ರಸ್ಟ್‌ನಿಂದ ದೇಣಿಗೆ ಪಡೆದಿದೆ.

ದಿವಾನ್: ಇಂಗ್ಲೆಂಡ್ ಮತ್ತು ವೇಲ್ಸ್‌ನ ಕ್ರಿಶ್ಚಿಯನ್ ಕಮಿಷನ್ ದಾಖಲೆಗಳ ಪ್ರಕಾರ ಮದೀನಾ ಟ್ರಸ್ಟ್‌ನ ಟ್ರಸ್ಟಿ ಡಾ. ಜಹೀದ್ ಅಲಿ ಪರ್ವೇಜ್ ಅವರು ಇಸ್ಲಾಮಿಕ್ ಫೌಂಡೇಶನ್ ಟ್ರಸ್ಟಿಯೂ ಆಗಿದ್ದಾರೆ..

ದಿವಾನ್: ಟರ್ಕಿಷ್ ಮಾನವೀಯ ಪರಿಹಾರ ಸಂಸ್ಥೆಯು (ಐಎಚ್‌ಎಚ್‌) ಉಗ್ರ ಸಂರ್ಪಕದ ಹಮಾಸ್ ಸೇನಾ ಪಡೆಗೆ ನೆರವು ನೀಡಿದೆ. ಇಸ್ರೇಲ್, ಜರ್ಮನಿ ಮತ್ತು ನೆದರ್ಲೆಂಡ್ ಗಳಲ್ಲಿ ಐಎಚ್‌ಎಚ್ಅನ್ನು‌ ಉಗ್ರ ಸಂಘಟನೆ ಎಂದು ಘೋಷಿಸಲಾಗಿದೆ. ಇದರೊಂದಿಗೆ ಜಕಾತ್ ಫೌಂಡೇಶನ್ ಪದಾಧಿಕಾರಿಗಳು ಪರೋಕ್ಷವಾಗಿ ಸಂಪರ್ಕ ಹೊಂದಿದ್ದಾರೆ.

ದಿವಾನ್: ಒಂದು ದೃಷ್ಟಿಕೋನ ವ್ಯಕ್ತಿಯನ್ನು ಅಸ್ಥಿರಗೊಳಿಸಿದರೆ ಅದು ಪ್ರಜಾಪ್ರಭುತ್ವದ ಗುರಿಯಾಗಿಬಿಡುತ್ತದೆ. ಇಂಟರ್ನೆಟ್ ಯುಗದಲ್ಲಿ ನೆಟ್ ಫ್ಲಿಕ್ಸ್ ಇತ್ಯಾದಿಗಳಿಗೆ ಯಾವುದೇ ನಿರ್ಬಂಧ ಇಲ್ಲ. ಆದರೆ ಈ ರೀತಿಯ ನಿಷೇಧ ಸಂದರ್ಭಕ್ಕೆ ಹೊರತಾದುದಾಗುತ್ತದೆ.

ದಿವಾನ್: ಮಾನಹಾನಿ, ಅಸತ್ಯ ಇತ್ಯಾದಿಗಳಿಗೆ ಸಂಬಂಧಿಸಿದ ದೂರುಗಳ ವಿಚಾರಣೆಗೆ ನಮ್ಮಲ್ಲಿ ಈಗಾಗಲೇ ಶಾಸನಬದ್ಧ ವ್ಯವಸ್ಥೆ ಇದ್ದು ಅವುಗಳಿಂದ ಸಾಕಷ್ಟು ನಿಯಂತ್ರಣ ಮತ್ತು ಸಮತೋಲನ ಸಾಧ್ಯವಿದೆ. (ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ) ಇನ್ನೂ 6 ಕಂತುಗಳು ಬಾಕಿ ಉಳಿದಿವೆ. ಆ ಕಂತುಗಳನ್ನು ಪ್ರಸಾರ ಮಾಡಲು ಅನುಮತಿ ನೀಡಬೇಕು.

ದಿವಾನ್: ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶವಿದೆ ಎಂದು ಕಾರ್ಯಕ್ರಮದ ಒಂದು ಭಾಗ ಸೂಚಿಸುತ್ತದೆ. ಉರ್ದುವಿಗೆ ಸಂಬಂಧಿಸಿದಂತೆ, ಅಂತಹ ಪರೀಕ್ಷೆಗಳು ಹೆಚ್ಚು ನಡೆದಿವೆ. ನಾವು ಈ ಸಂಗತಿಗಳನ್ನು ಪರಿಶೀಲಿಸಿದ್ದೇವೆ ಮತ್ತು ವಿಶ್ವಾಸಾರ್ಹ ಮೂಲಗಳಿಂದ ಶೇಕಡಾವಾರು (ಅಂಕಗಳನ್ನು)ಪಡೆದುಕೊಂಡಿದ್ದೇವೆ.

ದಿವಾನ್: ಪೂರ್ವ ಪ್ರಸರಣ ನಿಷೇಧ ಹೇರಿದ್ದರೆ ಪ್ರದರ್ಶನವು ಸಾರ್ವಜನಿಕ ಉದ್ದೇಶಕ್ಕೆ ನೆರವಾಗುತ್ತಿತ್ತೇ. ಇಲ್ಲಿ ಜನರಿಗೆ ಮಾಹಿತಿ ನೀಡಬೇಕಾದ ಪ್ರಕರಣವಿದೆ. ಅಂತಿಮ ಕಂತಿನವರೆಗೆ ಕಾರ್ಯಕ್ರಮ ಮುಂದುವರಿಯಲಿ. ಕಾರ್ಯಕ್ರಮ ಸಂಹಿತೆಯ ಯಾವುದೇ ಉಲ್ಲಂಘನೆ ಆಗಿಲ್ಲ. ಹಿಂಸಾಚಾರಕ್ಕೆ ಪ್ರಚೋದನೆ ದೊರೆತಿಲ್ಲ.

ನ್ಯಾ. ಚಂದ್ರಚೂಡ್: ಇದೊಂದು ಅದ್ಭುತ ವಿಚಾರಣೆ ಎಂದು ನನಗೆ ಅನಿಸುತ್ತದೆ. ಇದಕ್ಕಿಂತ ಹೆಚ್ಚು ಕೇಂದ್ರೀಕೃತವಾಗಿರಲು ಸಾಧ್ಯವಿಲ್ಲ… ಇದು ತಂತ್ರಜ್ಞಾನದಿಂದ ಸಾಧ್ಯವಾಗಿದೆ.

ದಿವಾನ್: ಈ ಸಂಚಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಸ್ವಯಂ ಪ್ರಶಂಸೆ ಇದೆ ಎಂಬುದನ್ನು ನಾನು ಒಪ್ಪುತ್ತೇನೆ. ಅದು ವಾಕ್ ಸ್ವಾತಂತ್ರ್ಯದ ವ್ಯಾಪ್ತಿಯ ಒಳಗಿದೆ.

ಮಧ್ಯಾಹ್ನ 2.15ಕ್ಕೆ ವಿಚಾರಣೆ ಮುಂದುವರಿಯಲಿದೆ.

ಎಸ್‌ಜಿ ಮೆಹ್ತಾ: ಪ್ರಸ್ತುತಪಡಿಸಿದ ವಿಷಯಗಳು ಗಂಭೀರವಾಗಿರುವುದರಿಂದ ಸರ್ಕಾರ ಪ್ರತಿಕ್ರಿಯಿಸಲು ಬಯಸುತ್ತದೆ. ಇದಕ್ಕಾಗಿ ನನಗೆ ಸೋಮವಾರದವರೆಗೆ ಸಮಯ ಬೇಕಾಗುತ್ತದೆ. ನೀವು ತಡೆಯಾಜ್ಞೆಯನ್ನು ತೆರವುಗೊಳಿಸುತ್ತಿದ್ದರೆ ನನಗೆ ಇನ್ನೇನೂ ಹೇಳಲು ಇಲ್ಲ.

ವಿಚಾರಣೆ ಪುನಾರಂಭ..

ನ್ಯಾ. ಚಂದ್ರಚೂಡ್: ಸರಿ ನಾವು ಪರಿಗಣಿಸುತ್ತೇವೆ. ಈಗ ದಿವಾನ್ ಅವರೇ, ಮೊದಲು ನಾವು ಪ್ರಸರಣ ಪೂರ್ವ ತಡೆ ವಿಪರೀತ ಅವಲಂಬನೆಯ ಸಂಗತಿಯಾಗಿದೆ ಎಂದು ಬಹಳ ಜಾಗೃತರಾಗಿದ್ದೇವೆ. ತಡೆಯಾಜ್ಞೆಯನ್ನು ಅಷ್ಟು ಸುಲಭವಾಗಿ ನೀಡುವುದಿಲ್ಲ. ಇದಕ್ಕಾಗಿಯೇ ಆಗಸ್ಟ್ 28 ರಂದು ಆದೇಶ ನೀಡಿದ್ದು. ಅದು ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎಂಬುದು ತಿಳಿದಿದೆ.

ನ್ಯಾ. ಚಂದ್ರಚೂಡ್: ಯುಪಿಎಸ್‌ಸಿ ಸೇವೆಗಳಲ್ಲಿ 2011ರಿಂದ ಮುಸ್ಲಿಮರ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು (ಟಿವಿ ಕಾರ್ಯಕ್ರಮದ) ಚಾರ್ಟ್ ತೋರಿಸಲಾಗುತ್ತದೆ. ಟೊಪ್ಪಿ, ಗಡ್ಡ ಮತ್ತು ಹಸಿರು ಚರ್ಮದ ವ್ಯಕ್ತಿಯ ಗ್ರಾಫಿಕ್ ಅನ್ನು ಚಾರ್ಟಿನಲ್ಲಿ ಜ್ವಾಲೆಯೊಂದಿಗೆ ತೋರಿಸಲಾಗಿದೆ.

ನ್ಯಾ. ಚಂದ್ರಚೂಡ್: ಹೇಳಿಕೆಗಳ ಒಲವು ಗಮನಿಸಿ. ಕಾರ್ಯಕ್ರಮದಿಂದ ಹೊರಹೊಮ್ಮಿದ ಎಲ್ಲ ವಿಷಯಗಳನ್ನು ಪ್ರೇಕ್ಷಕರು ಹೇಳುತ್ತಾರೆ. ಎನ್‌ಜಿಒ ಅಥವಾ ಹಣದ ಮೂಲ ಕುರಿತಂತೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಇಡೀ ಸಮುದಾಯವೊಂದು ನಾಗರಿಕ ಸೇವೆಗಳನ್ನು ಸ್ವಾಧೀನಪಡಿಸಿಕೊಳ್ಳುವಂತೆ ನೀವು ಬಿಂಬಿಸುತ್ತಿದ್ದೀರಿ.

ದಿವಾನ್: ಕಾರ್ಯಕ್ರಮವನ್ನು ಒಟ್ಟಾಗಿ ನೋಡಬೇಕು. ಅರ್ಹತೆ ಆಧಾರದಲ್ಲಿ ಯಾವುದೇ ಸಮುದಾಯದ ಯುವಕ ಸೇವೆಗೆ ಸೇರುವುದಕ್ಕೆ ನಮ್ಮ ತಕರಾರಿಲ್ಲ. ವಿದೇಶಿ ಸಂಸ್ಥೆಗಳ ಜೊತೆ ಸಂಪರ್ಕ ಹೊಂದಿರುವ ಕೆಲವು ಸಂಸ್ಥೆಗಳು ಎನ್ ಜಿಒನಲ್ಲಿ ಹೂಡಿಕೆ ಮಾಡುತ್ತಿವೆ. ಇಂದು ಭಾರತ-ಚೀನಾ ಗಡಿಯಲ್ಲಿ ನಮ್ಮ ಸೈನಿಕರು ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದು ಒಂದು ಸಮುದಾಯ ಅಥವಾ ರಾಷ್ಟ್ರವನ್ನು ರಾಕ್ಷಸೀಕರಿಸುವುದಲ್ಲ.

ನ್ಯಾ. ಚಂದ್ರಚೂಡ್: ಇದು ನಿಜವಾದ ಸಮಸ್ಯೆ. ಅವರು ನಾಗರಿಕ ಸೇವೆಗಳಿಗೆ ಸೇರುವುದನ್ನು ನೀವು ತೋರಿಸುವಾಗಲೆಲ್ಲಾ ನೀವು ಐಸಿಸ್ ಅನ್ನು ತೋರಿಸುತ್ತೀರಿ. ಮುಸ್ಲಿಮರು ನಾಗರಿಕ ಸೇವೆಗಳಿಗೆ ಸೇರುವುದು ದೊಡ್ಡ ಸಂಚಿನ ಒಂದು ಭಾಗವಾಗಿದೆ ಎಂದು ನೀವು ಹೇಳಲು ಬಯಸುತ್ತೀರಿ. ಇಡೀ ಸಮುದಾಯವನ್ನು ಗುರಿಯಾಗಿಸಲು ಮಾಧ್ಯಮಗಳಿಗೆ ಅನುಮತಿ ನೀಡಬಹುದೇ?

ನ್ಯಾ. ಇಂದೂ ಮಲ್ಹೋತ್ರಾ: ಬೆಂಕಿಯ ಜ್ವಾಲೆ ಇತ್ಯಾದಿ… ತೆಗೆದು ಹಾಕಬೇಕು. ಒಂದು ಸಮುದಾಯ, ಟೊಪ್ಪಿ ಹಾಕಿಕೊಂಡಿರುವವ ಮತ್ತು ಹಸಿರು ಬಟ್ಟೆ ಧರಿಸಿರುವ ವ್ಯಕ್ತಿಯನ್ನು ₹500 ಕೋಟಿ ವಿಚಾರಕ್ಕೆ ತಗಲುಹಾಕಬಾರದು.

ದಿವಾನ್: ವಿಡಿಯೋಗಳನ್ನು ತಿರುಚಲಾಗಿದೆ ಎಂದು ಯಾರೂ ಹೇಳುತ್ತಿಲ್ಲ. ಅವುಗಳೆಲ್ಲವನ್ನೂ ಸೇರಿಸಿ ಚಾನೆಲ್ ಸ್ಟೋರಿ ಸಿದ್ಧಪಡಿಸಿದೆ. ಬಿಂದುಗಳನ್ನು ಸೇರಿಸುವ ಮೂಲಕ ಸುರೇಶ್ ಚೌವ್ಹಾಣ್ಕೆ ಪ್ರಬಂಧ ಸಿದ್ಧಪಡಿಸುತ್ತಿದ್ದಾರೆ ಎಂದೆನಿಸಿದರೆ ಅದನ್ನು ಪೂರ್ಣಗೊಳಿಸಲು ಅವರಿಗೆ ಅವಕಾಶ ಮಾಡಿಕೊಡಿ.

ನ್ಯಾ. ಚಂದ್ರಚೂಡ್: ಕಾರ್ಯಕ್ರಮ ಪ್ರಸಾರಕ್ಕೆ ನಾವು ಅನುಮತಿಸಿದರೆ ನೀವು ಯಾವ ಭರವಸೆಗಳನ್ನು ನೀಡುವಿರಿ? ದೇಣಿಗೆ ನೀಡಿರುವವರೆಲ್ಲರೂ ಉಗ್ರರ ಜೊತೆ ಸಂಪರ್ಕ ಹೊಂದಿಲ್ಲ. ಅರ್ಹತೆ ಇರುವ ಎಲ್ಲಾ ಸದಸ್ಯರೂ ಯುಪಿಎಸ್‌ಸಿಗೆ ಆಯ್ಕೆಯಾಗಬಹುದು. ಅದಕ್ಕೆ ತಕರಾರಿಲ್ಲ ಎಂದು ಹೇಳಿದ್ದೀರಿ.

ನ್ಯಾ. ಚಂದ್ರಚೂಡ್: ತಡೆಯಾಜ್ಞೆ ಹೇಗೆ ಇರುತ್ತದೆ ಎಂದು ನಮಗೆ ತಿಳಿದಿದೆ. ತಡೆಯಾಜ್ಞೆಗಳು ಹೆಚ್ಚುತ್ತವೆ ಎಂದು ಹೆದರಿಕೆ ಆಗುತ್ತಿದ್ದು ಇದು ಕಾನೂನುಗಳ ನೆಲ ಆಗುವುದನ್ನು ನಾವು ಬಯಸುವುದಿಲ್ಲ. ನಿಮ್ಮ ಕಕ್ಷೀದಾರರಿಗೆ ಒಳ್ಳೆ ನಂಬುಗೆಯ ಆಯ್ಕೆ ನೀಡಲು ನಾವು ಬಯಸುತ್ತೇವೆ.

ನ್ಯಾ ಚಂದ್ರಚೂಡ್: ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಲು ಸಾಧ್ಯ ಇಲ್ಲ ಎಂಬ ಸಂದೇಶ ಮಾಧ್ಯಮಗಳಿಗೆ ಹೋಗಲಿ. ಏಕತೆಯ ಮತ್ತು ವಿವಿಧತೆಯ ರಾಷ್ಟ್ರದ ಭವಿಷ್ಯದ ಬಗ್ಗೆ ನಮಗೆ ಕಾಳಜಿ ಇರಬೇಕು. ರಾಷ್ಟ್ರೀಯ ಭದ್ರತೆಯ ಬಗ್ಗೆ ನಮಗೆ ಕಾಳಜಿ ಇದೆ. ಆದರೆ ವ್ಯಕ್ತಿಗಳಿಗೆ ವೈಯಕ್ತಿಕ ಗೌರವವನ್ನೂ ನೀಡಬೇಕು.

ನ್ಯಾ. ಚಂದ್ರಚೂಡ್: ನಮ್ಮ ಕಳವಳಗಳನ್ನು ನೀಗಿಸಲು ಏನು ಮಾಡುತ್ತೀರಿ ಎಂದು ನೀವು ಸ್ವಯಂಪ್ರೇರಣೆಯಿಂದ ನಮಗೆ ತಿಳಿಸಬೇಕು. ನಾವು ಪತ್ರಿಕೋದ್ಯಮದ ಹಾದಿಯಲ್ಲಿ ಬರಲು ಬಯಸುವುದಿಲ್ಲ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಏನಾಯಿತು ಎಂದು ನಮಗೆ ತಿಳಿದಿದೆ. ಹೀಗಾಗಿ ವಾಕ್ ಸ್ವಾತಂತ್ರ್ಯ ಮತ್ತು ಆಲೋಚನೆಗಳ ಬಗ್ಗೆ ಖಾತ್ರಿಪಡಿಸುತ್ತೇವೆ.

ನ್ಯಾ. ಇಂದೂ ಮಲ್ಹೋತ್ರಾ: ನಾನು ಕಾರ್ಯಕ್ರಮದ ಕಂತುಗಳಲ್ಲಿ ಒಂದನ್ನು ನೋಡಿದ್ದೇನೆ ಮತ್ತು ಅದನ್ನು ವೀಕ್ಷಿಸುವಾಗ ಬೇಸರವಾಗುತ್ತದೆ. ನೀವು ಜ್ವಾಲೆ ಮತ್ತು ಹಸಿರು ಟಿ-ಶರ್ಟ್ ಇತ್ಯಾದಿಗಳನ್ನು ತೆಗೆದುಹಾಕಬೇಕು.

ನ್ಯಾ. ಚಂದ್ರಚೂಡ್: ನಾವು ನೀಡುವ ತಡೆಯಾಜ್ಞೆ ಆದೇಶ ಪರಮಾಣು ಕ್ಷಿಪಣಿಯಂತಿರುತ್ತದೆ ಎಂಬುದು ನಮಗೆ ತಿಳಿದಿದೆ. ಸಾಲಸಿಟರ್ ಜನರಲ್ ಅವರೇ, ನೀವು ಸ್ವಯಂ ನಿಯಂತ್ರಣವನ್ನು ಹೇಗೆ ತರುತ್ತೀರಿ ಎಂದು ನಮಗೆ ತಿಳಿಸಿ. ನೀವು ಅವರಿಗೆ ಬಲ ತುಂಬಬೇಕು.

ನ್ಯಾ. ಕೆ ಎಂ ಜೋಸೆಫ್ ಅವರು ದಿವಾನ್ ಅವರನ್ನು ಕುರಿತು‌: ಕಾರ್ಯಕ್ರಮದ ಕಂತುಗಳು ಮುಗಿಯುವವರೆಗೆ ಪ್ರಸರಣ ಪೂರ್ವ ನಿರ್ಬಂಧ ಇರಬಾರದು ಎಂದು ಹೇಳಿದ್ದೀರಿ. ಕಾರ್ಯಕ್ರಮ ಸಂಹಿತೆ ಉಲ್ಲಂಘಿಸಿದರೆ ಪರಿಣಾಮಗಳೇನು? ಕೇಬಲ್ ನೆಟ್‌ವರ್ಕ್ ಕಾಯಿದೆ ಸೆಕ್ಷನ್ 16 ಅನ್ವಯ ನಿಮ್ಮನ್ನು ಅಪರಾಧಿ ಎಂದು ತೀರ್ಪು ನೀಡಬಹುದೇ?

ನ್ಯಾ. ಕೆ ಎಂ ಜೋಸೆಫ್: ಮುಸ್ಲಿಮರಲ್ಲದೇ ಜೈನರೂ ಇದ್ದಾರೆ. ಜೈನ್ ಸಂಸ್ಥೆ ಅನುದಾನದಲ್ಲಿ ನನ್ನ ಕಾನೂನು ಗುಮಾಸ್ತ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಕ್ರಿಶ್ಚಿಯನ್ ಸಂಸ್ಥೆಗಳು ಅವರ ಅಭ್ಯರ್ಥಿಗಳಿಗೆ ನೆರವು ನೀಡುತ್ತಿವೆ. ಎಲ್ಲರೂ ಅಧಿಕಾರ ಕೇಂದ್ರದ ಭಾಗವಾಗಲು ಬಯಸುತ್ತಾರೆ. ನೀವು ಜನರನ್ನು ಮುಖ್ಯವಾಹಿನಿಯಿಂದ ಹೊರಗಿಡುತ್ತಿದ್ದೀರಿ.

ಸಾಲಿಸಿಟರ್ ಜನರಲ್ ಮೆಹ್ತಾ: ತುಳಿತಕ್ಕೊಳಗಾದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಯತ್ನವನ್ನು ನಾವು ನಿರಂತರವಾಗಿ ಮಾಡುತ್ತಿದ್ದೇವೆ.

ದಿವಾನ್: ನ್ಯಾ. ಜೋಸೆಫ್ ಅವರ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ನಮ್ಮ ಅಫಿಡವಿಟ್ ನಲ್ಲಿ ಉಲ್ಲೇಖಿಸಿರುವಂತೆ ವರದಿ ಪ್ರಸಾರ ಮಾಡಲು ಉದ್ದೇಶಲಾಗಿತ್ತು. ದ್ವೇಷವನ್ನು ಬಿತ್ತುವಂತಿದ್ದರೆ ಅದು ಇರಲೇಬಾರದು. ಮಾತುಗಾರಿಕೆಯಿಂದ ಕೆಲವೊಮ್ಮೆ ಉತ್ತಮ ವರದಿ ಪ್ರಾಮುಖ್ಯತೆ ಕಳೆದುಕೊಳ್ಳುತ್ತದೆ.

ಅರ್ಜಿದಾರರ ಪರ ವಕೀಲ ಶಾದನ್ ಫರಸತ್: ಸುರೇಶ್ ಚವ್ಹಾಣ್ಕೆ ಅವರು ಕೇಂದ್ರ ಸರ್ಕಾರಕ್ಕೆ ನೀಡಿದ ಆಶ್ವಾಸನೆಯ ಮೇಲೆಯೇ ಕಾರ್ಯಕ್ರಮ ಪ್ರಸಾರ ಮಾಡಲು ಸೆಪ್ಟೆಂಬರ್ 9ರಂದು ಅನುಮತಿಸಲಾಗಿತ್ತು. ಹೀಗಿರುವಾಗ ಇನ್ನೊಮ್ಮೆ ಆಶ್ವಾಸನೆ ಪಡೆಯುವ ಅಗತ್ಯವೇನಿದೆ? ವಿವರಣೆಗಳಿಗೆ ಕಿವಿಯಾಗದೇ 2,3 ನೇ ಕಂತುಗಳನ್ನು ವೀಕ್ಷಿಸುವಂತೆ ದಿವಾನ್ ಅವರಿಗೆ ನಾನು ಮನವಿ ಮಾಡುತ್ತೇನೆ. ಕಾರ್ಯಕ್ರಮದ ಎಲ್ಲಾ ಕಂತುಗಳನ್ನೂ ಅವರು ನೋಡಬೇಕು.

ವಕೀಲ ಶಾದನ್ ಫರಸತ್: ಎಲ್ಲಾ ಕಂತುಗಳ ಉದ್ದೇಶ ಒಂದೇ ದ್ವೇಷ ಭಾಷೆ. ಸದರಿ ಪ್ರಕಣರಣದಲ್ಲಿ ಕಾರ್ಯಕ್ರಮಕ್ಕೆ ತಡಯಾಜ್ಞೆ ವಿಧಿಸುವುದು ಸಾಂವಿಧಾನಿಕ ನ್ಯಾಯಾಲಯದ ಕರ್ತವ್ಯ.

ನ್ಯಾ. ಚಂದ್ರಚೂಡ್: ದಿವಾನ್ ಅವರ ವಾದವನ್ನು ಆಲಿಸಿದ್ದು, ಸುದರ್ಶನ್ ಟಿವಿ ಏನು ಮಾಡಲು ಬಯಸುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಲು ಅವಕಾಶ ನೀಡಿದ್ದೇವೆ.

ಹಿರಿಯ ವಕೀಲ ಅನೂಪ್ ಜಿ ಚೌಧರಿ: ಪ್ರತ್ಯುತ್ತರ ಮನವಿ ಸಲ್ಲಿಸಲು ನನಗೆ ಅವಕಾಶ ಕಲ್ಪಿಸಿ.

ನ್ಯಾ. ಚಂದ್ರಚೂಡ್: ಪ್ರತ್ಯುತ್ತರ ಮನವಿ ಸಲ್ಲಿಸಲು ನಿಮಗೆ ಯಾವಾಗ ಅನುಮತಿ ಬೇಕು? ದಯವಿಟ್ಟು ಅಫಿಡವಿಟ್‌ ಸಲ್ಲಿಸಿ. ದಿವಾನ್ ಅವರ ಅಫಿಡವಿಟ್‌ ಗಿಂತ ಉದ್ದವಾದ ಅಫಿಡವಿಟ್ ಸಲ್ಲಿಸಬೇಡಿ.

ದ್ವೇಷ ಭಾಷೆಗೆ ಸಂಬಂಧಿಸಿದಂತೆ ಅಫಿಡವಿಟ್ ಅನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ನ್ಯಾಯಾಲಯಕ್ಕೆ ವಿವರಿಸುವುದಾಗಿ ಹೇಳಿದ ಹಿರಿಯ ವಕೀಲ ಗೌತಮ್ ಭಾಟಿಯಾ. ಸಾಂವಿಧಾನಿಕ ನ್ಯಾಯಾಲಯವು ಸಂಯಮ ವಹಿಸುವ ದೃಷ್ಟಿಯಿಂದ ನ್ಯಾಯಾಲಯಕ್ಕೆ ಸಲಹೆ ಮಾಡುವಂತೆ ಭಾಟಿಯಾ ಅವರಿಗೆ ಸೂಚಿಸಿದ ನ್ಯಾ. ಚಂದ್ರಚೂಡ್.