Lawyers 
ಸುದ್ದಿಗಳು

ವಕೀಲರಿಗೆ ಸಮಗ್ರ ಆರೋಗ್ಯ ವಿಮೆ; ಅಲಾಹಾಬಾದ್ ಹೈಕೋರ್ಟ್‌ಗೆ ಮನವಿ

Bar & Bench

ಉತ್ತರ ಪ್ರದೇಶದ ವಕಿಲರ ಪರಿಷತ್‌ನಲ್ಲಿ ನೋಂದಾಯಿಸಿಕೊಂಡಿರುವ ವಕೀಲರಿಗೆ ಸಮಗ್ರ ಆರೋಗ್ಯ ವಿಮೆ ಕೋರಿ ಅಲಾಹಾಬಾದ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ವೈದ್ಯಕೀಯ ವಿಮಾ ರಕ್ಷಣೆ ಇಲ್ಲದಿರುವುದರಿಂದ ಸಾಕಷ್ಟು ಅನಾರೋಗ್ಯ ಸಮಸ್ಯೆ ಮತ್ತು ಹಣಕಾಸಿನ ಹೊರೆಯನ್ನು ಆಗಾಗ್ಗೆ ಎದುರಿಸುವ ಕಾನೂನು ವೃತ್ತಿಪರರಿಗೆ ಸೂಕ್ತ ಆರೋಗ್ಯ ಸೌಲಭ್ಯ ಒದಗಿಸುವ ಅಗತ್ಯವನ್ನು ಅಲೋಕ್ ಕುಮಾರ್ ಮಿಶ್ರಾ ಎಂಬುವವರು ಸಲ್ಲಿಸಿದ ಮನವಿ ಒತ್ತಿಹೇಳಿದೆ.

ಉತ್ತರ ಪ್ರದೇಶದ ವಕಿಲರ ಪರಿಷತ್‌ನಲ್ಲಿ ನೋಂದಾಯಿಸಿಕೊಂಡಿರುವ ವಕೀಲರಿಗೆ ಸೂಕ್ತ ವಿಮೆ ಸೌಲಭ್ಯ ದೊರೆಯುತ್ತಿಲ್ಲ. ಅನೇಕ ವಕೀಲರು ಅಪಘಾತ ಮತ್ತಿತರ ಆರೋಗ್ಯ ಸಮಸ್ಯೆ ಅನುಭವಿಸಿದರೂ ಸರ್ಕಾರದಿಂದ ಯಾವುದೇ ಸಹಾಯ ದೊರೆತಿಲ್ಲ. ಅಂತಹವರು ಸಂಬಂಧಿತ ವಕೀಲರ ಸಂಘಗಳಿಂದ ಸೀಮಿತ ಹಣಕಾಸಿನ ನೆರವನ್ನಷ್ಟೇ ಪಡೆಯುತ್ತಿದ್ದಾರೆ ಎಂದು ಮನವಿ ತಿಳಿಸಿದೆ.

ಮಧ್ಯಪ್ರದೇಶದ ಅಧಿವಕ್ತ ಕಲ್ಯಾಣ್ ಯೋಜನೆ ಮತ್ತು ದೆಹಲಿಯ ವಕೀಲರ ಕಲ್ಯಾಣ ಯೋಜನೆಗಳಂತೆಯೇ ರಾಜ್ಯದ ವಕೀಲರಿಗೂ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ವಿಮಾ ಸೌಲಭ್ಯ, ಆರೋಗ್ಯ ಕಾರ್ಡ್‌ ಅಥವಾ ಆರೋಗ್ಯ ಭಧ್ರತೆ ಒದಗಿಸುವ ನೀತಿ ರೂಪಿಸಲು ಕೇಂದ್ರ ಸರ್ಕಾರ, ಉತ್ತರ ಪ್ರದೇಶ ವಕೀಲರ ಪರಿಷತ್‌ ಹಾಗೂ ಭಾರತೀಯ ವಕೀಲರ ಪರಿಷತ್‌ಗೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.