COVID-19 vaccine 
ಸುದ್ದಿಗಳು

ಗಂಭೀರ ಸಾಕ್ಷ್ಯಗಳಿಲ್ಲದೆ ಕೋವಿಶೀಲ್ಡ್‌ ಬಳಕೆಗೆ ನಿರ್ಬಂಧ ವಿಧಿಸಲಾಗದು ಎಂದ ಮದ್ರಾಸ್‌ ಹೈಕೋರ್ಟ್‌

ಕೋವಿಶೀಲ್ಡ್‌ ಲಸಿಕೆ ಪಡೆದ ನಂತರ ಹಲವಾರು ಅಡ್ಡ ಪರಿಣಾಮಗಳಿಗೆ ತುತ್ತಾಗಿರುವುದಾಗಿ ಚೆನ್ನೈ ಮೂಲದ ಉದ್ಯಮಿ ಸಲ್ಲಿಸಿದ್ದ ಮನವಿ ವಿಚಾರಣೆಯನ್ನು ನ್ಯಾಯಮೂರ್ತಿ ಅಬ್ದುಲ್‌ ಖುದ್ದೋಸ್‌ ನಡೆಸಿದರು.

Bar & Bench

ಸಿರಮ್‌ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಕೊರೊನಾ ಲಸಿಕೆ ಅಸುರಕ್ಷಿತ ಎಂಬುದನ್ನು ಸಾಬೀತುಪಡಿಸುವ ಗಂಭೀರ ಸಾಕ್ಷ್ಯಗಳನ್ನು ಪ್ರಸ್ತುತಪಡಿಸದ ಹೊರತು ಅದನ್ನು ಲಸಿಕೆಯಾಗಿ‌ ನೀಡುವುದನ್ನು ನಿಲ್ಲಿಸಲಾಗದು ಎಂದು ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ಸ್ಪಷ್ಟವಾಗಿ ಹೇಳಿದೆ.

ಕೋವಿಶೀಲ್ಡ್‌ ಲಸಿಕೆ ಪಡೆದ ನಂತರ ಹಲವಾರು ಅಡ್ಡ ಪರಿಣಾಮಗಳಿಗೆ ತುತ್ತಾಗಿರುವುದಾಗಿ ತಿಳಿಸಿ ಚೆನ್ನೈ ಮೂಲದ ಉದ್ಯಮಿ ಸಲ್ಲಿಸಿದ್ದ ಮನವಿ ವಿಚಾರಣೆಯನ್ನು ನ್ಯಾಯಮೂರ್ತಿ ಅಬ್ದುಲ್‌ ಖುದ್ದೋಸ್‌ ನಡೆಸಿದರು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಲಸಿಕೆ ಪಡೆದ ಬಳಿಕ ಗಂಭೀರವಾದ ನರ ಹಾಗೂ ಮಿದುಳಿನ ಸಮಸ್ಯೆ ಎದುರಿಸಿರುವುದಾಗಿ ಅರ್ಜಿದಾರರು ಮನವಿಯಲ್ಲಿ ಉಲ್ಲೇಖಿಸಿದ್ದರು.

ಕಳೆದ ವಿಚಾರಣೆಯ ಸಂದರ್ಭದಲ್ಲಿ ನೋಟಿಸ್‌ ಜಾರಿಗೊಳಿಸಿದ ಬಳಿಕ ಕೆಲವೊಂದು ಬೆಳವಣಿಗೆಗಳು ಘಟಿಸಿವೆ ಎಂದು ಅರ್ಜಿದಾರರ ಪರ ವಕೀಲ ಎನ್ ‌ಜಿ ಆರ್‌ ಪ್ರಸಾದ್‌ ಹೇಳಿದರು. “ಲಸಿಕೆಯಿಂದ ಎದುರಾಗುತ್ತಿರುವ ಸಮಸ್ಯೆಗಳಿಂದಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಅದರ ಬಳಕೆಯನ್ನು ನಿರ್ಬಂಧಿಸಿವೆ. ಅವರಿಗೆ ಇದು ಹಣದ ವಿಚಾರವಾದರೆ ನನಗೆ ಇದು ಜೀವಗಳ ಪ್ರಶ್ನೆಯಾಗಿದೆ… ಪಾಶ್ಚಿಮಾತ್ಯ ರಾಷ್ಟ್ರಗಳು ಲಸಿಕೆ ನೀಡುವುದನ್ನು ಮುಂದೂಡಿವೆ” ಎಂದು ಪ್ರಸಾದ್‌ ವಾದಿಸಿದರು.

ಲಸಿಕೆ ಉಂಟುಮಾಡುತ್ತಿರುವ ಸಮಸ್ಯೆಗಳನ್ನು ಪರಿಗಣಿಸಿ ಇದೇ ಕ್ರಮಗಳನ್ನು ಭಾರತ ತೆಗೆದುಕೊಳ್ಳಬೇಕು ಎಂದು ಅವರು ಕೋರಿದ್ದರು. “ಈಗ ಅದನ್ನು ಮಾಡಲಾಗದು. ಅದಕ್ಕೆ ನಮಗೆ ಗಂಭೀರವಾದ ಸಾಕ್ಷ್ಯಗಳು ಬೇಕಾಗುತ್ತವೆ” ಎಂದು ನ್ಯಾಯಮೂರ್ತಿ ಖುದ್ದೋಸ್‌ ಹೇಳಿದರು.

ದಾವೆಯ ಊರ್ಜಿತತ್ವದ ಬಗ್ಗೆಯೇ ಕೆಲವು ಆತಂಕಗಳಿವೆ. ಅರ್ಜಿಯಲ್ಲಿ ಐದು ಕೋಟಿ ರೂಪಾಯಿ ಪರಿಹಾರ ಕೋರಲಾಗಿದೆ ಎಂದು ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಪಿ ಎಸ್‌ ರಮಣ್‌ ಹೇಳಿದರು. ದಾವೆಯ ಊರ್ಜಿತತ್ವ ಮತ್ತು ಅರ್ಹತೆಯ ಕುರಿತು ಪ್ರತ್ಯುತ್ತರ ಮನವಿ ಸಲ್ಲಿಸುವಂತೆ ರಮಣ್‌ ಅವರಿಗೆ ನ್ಯಾಯಾಲಯ ಸೂಚಿಸಿತು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಜಿ ಶಂಕರನಾರಾಯಣನ್‌ ಅವರು ಪ್ರಕರಣದ ಸಂಬಂಧ ನೈತಿಕ ಸಮಿತಿಯ ವರದಿಗಾಗಿ ಕಾಯಲಾಗುತ್ತಿದೆ ಹೇಳಿದರು. ಪ್ರತಿಕ್ರಿಯೆ ದಾಖಲಿಸುವುದಕ್ಕೂ ಮುನ್ನ ಕಾಲಾವಕಾಶ ನೀಡುವಂತೆ ಕೋರಿದರು. ಪೀಠವು ವಿಚಾರಣೆಯನ್ನು ಜೂನ್‌ 9ಕ್ಕೆ ಮುಂದೂಡಿದೆ.