ಅಲಾಹಾಬಾದ್ ಹೈಕೋರ್ಟ್, ಲಖನೌ ಪೀಠ 
ಸುದ್ದಿಗಳು

ಜಾತಿ ಆಧಾರಿತ ರಾಜಕೀಯ ಸಮಾವೇಶ ನಿಷೇಧಿಸಲು ಮನವಿ: ವಿವಿಧ ಪಕ್ಷಗಳ ಪ್ರತಿಕ್ರಿಯೆ ಕೇಳಿದ ಅಲಾಹಾಬಾದ್ ಹೈಕೋರ್ಟ್

ಜಾತಿ ಆಧಾರಿತ ಸಮಾವೇಶ ಆಯೋಜಿಸುವ ಎಲ್ಲ ರಾಜಕೀಯ ಪಕ್ಷಗಳನ್ನು ಸಂಪೂರ್ಣ ನಿಷೇಧಿಸುವಂತೆ ಕೋರಿ 2013ರಲ್ಲಿ ಪಿಐಎಲ್‌ ಸಲ್ಲಿಸಲಾಗಿತ್ತು. ಅಂತಹ ಎಲ್ಲಾ ರಾಜಕೀಯ ಪಕ್ಷಗಳನ್ನು ಮಾನ್ಯತಾ ಪಟ್ಟಿಯಿಂದ ತೆಗೆಯುವಂತೆ ಮನವಿ ಮಾಡಲಾಗಿತ್ತು.

Bar & Bench

ಜಾತಿ ಆಧಾರದಲ್ಲಿ ರಾಜಕೀಯ ಸಮಾವೇಶ ನಡೆಸುವುದನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಬಿಜೆಪಿ, ಕಾಂಗ್ರೆಸ್‌, ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಕ್ಕೆ ಅಲಾಹಾಬಾದ್‌ ಹೈಕೋರ್ಟ್‌ ಮಾರ್ಚ್‌ 18ರಂದು ಹೊಸದಾಗಿ ನೋಟಿಸ್‌ ನೀಡಿದೆ (ಮೋತಿಲಾಲ್‌ ಯಾದವ್‌ ಮತ್ತು ಸಿಇಸಿ ಇನ್ನಿತರರ ನಡುವಣ ಪ್ರಕರಣ).

ಜಾತಿ ಆಧಾರಿತ ಸಮಾವೇಶಗಳನ್ನು ಆಯೋಜಿಸುವ ಎಲ್ಲ ರಾಜಕೀಯ ಪಕ್ಷಗಳ ಮೇಲೆ ನಿಷೇಧ ಹೇರಬೇಕು ಹಾಗೂ ಅವುಗಳ ಮಾನ್ಯತೆಯನ್ನು ರದ್ದುಪಡಿಸಬೇಕು ಎಂದು ಮೋತಿಲಾಲ್ ಯಾದವ್ ಎಂಬುವವರು 2013ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿತ್ತು.

ಈ ಹಿಂದೆಯೂ ಪ್ರತಿವಾದಿಗಳಿಗೆ ನೋಟಿಸ್‌ ನೀಡಲಾಗಿತ್ತು. ಅವರಿಗೆ ಪ್ರತಿಕ್ರಿಯೆ ನೀಡಲು ಸಾಕಷ್ಟು ಸಮಯಾವಕಾಶ ಒದಗಿಸಲಾಗಿತ್ತು ಎನ್ನುವುದನ್ನು ಮುಖ್ಯ ನ್ಯಾಯಮೂರ್ತಿ ಅರುಣ್ ಬನ್ಸಾಲಿ ಮತ್ತು ನ್ಯಾಯಮೂರ್ತಿ ಜಸ್‌ಪ್ರೀತ್‌ ಸಿಂಗ್ ಅವರಿದ್ದ ಪೀಠ ಗಮನಿಸಿತು. ಆದಾಗ್ಯೂ ರಾಜಕೀಯ ಪಕ್ಷಗಳು ತಮ್ಮ ಪ್ರತಿಕ್ರಿಯೆ ಸಲ್ಲಿಸಲು ನ್ಯಾಯಾಲಯ ಕಡೆಯ ಅವಕಾಶ ನೀಡಿತು.

ಈ ಸಂಬಂಧ ಕಳೆದ ವರ್ಷ ಮಾರ್ಚ್‌ನಲ್ಲಿ ಹೈಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದ ಭಾರತೀಯ ಚುನಾವಣಾ ಆಯೋಗ, ಚುನಾವಣೆ ಇಲ್ಲದ ಅವಧಿಯಲ್ಲಿ ರಾಜಕೀಯ ಪಕ್ಷಗಳು ಆಯೋಜಿಸುವ ಜಾತಿ ಆಧಾರಿತ ಸಮಾವೇಶಗಳನ್ನು ನಿಷೇಧಿಸುವ ಅಧಿಕಾರ ತನಗಿಲ್ಲ ಎಂದಿತ್ತು.

ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 10ರಂದು ನಡೆಯಲಿದೆ. ಅರ್ಜಿದಾರ ಮೋತಿಲಾಲ್ ಯಾದವ್ ಖುದ್ದು ಹಾಜರಿದ್ದರು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Moti Lal Yadav v CEC & Ors.pdf
Preview