Bombay High Court 
ಸುದ್ದಿಗಳು

ಐಐಟಿ ಜೆಇಇ ಮುಖ್ಯ ಪರೀಕ್ಷೆ ಮುಂದೂಡಿ; ಶೇ.75 ಅಂಕಗಳಿಕೆ ಮಾನದಂಡ ಸಡಿಲಿಸಿ ಎಂದು ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಈ ಸಂಬಂಧ ಡಿಸೆಂಬರ್ 15 ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಪ್ರಶ್ನಿಸಿದೆ.

Bar & Bench

ಜನವರಿ 2023 ರಲ್ಲಿ ನಡೆಯಲಿರುವ ಐಐಟಿ ಜೆಇಇ ಮುಖ್ಯ ಪರೀಕ್ಷೆ ಮುಂದೂಡುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್‌) ಸಲ್ಲಿಕೆಯಾಗಿದೆ [ಅನುಭಾ ಸಹಾಯ್ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಇನ್ನಿತರರ ನಡುವಣ ಪ್ರಕರಣ].

ಪರೀಕ್ಷೆಯನ್ನು ಏಪ್ರಿಲ್ 2023 ಕ್ಕೆ ಮುಂದೂಡಬೇಕೆಂದು ವಿನಂತಿಸಿ ಸಾಮಾಜಿಕ ಹೋರಾಟಗಾರ್ತಿ ಅನುಭಾ ಶ್ರೀವಾಸ್ತವ ಸಹಾಯ್ ಅವರು ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. ಐಐಟಿ ಪರೀಕ್ಷೆಗೆ  ಅರ್ಹತೆಯ ಮಾನದಂಡವಾಗಿ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಶೇ 75ರಷ್ಟು ಅಂಕ ಪಡೆದಿರಬೇಕೆಂಬ ನಿಯಮ ಸಡಿಲಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಈ ಸಂಬಂಧ ಡಿಸೆಂಬರ್ 15 ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಪಿಐಎಲ್ ಪ್ರಶ್ನಿಸಿದೆ. ಅಧಿಸೂಚನೆಯ ಪ್ರಕಾರ, ಜೆಇಇ ಮುಖ್ಯ ಪರೀಕ್ಷೆಯನ್ನು 2023ರ ಜನವರಿ 24 ರಿಂದ 31ರ ನಡುವೆ ನಡೆಸಲು ನಿರ್ಧರಿಸಲಾಗಿತ್ತು.

ಸಾಮಾನ್ಯವಾಗಿ ಪರೀಕ್ಷೆಗಳನ್ನು ವೇಳಾಪಟ್ಟಿಗಿಂತ 3-4 ತಿಂಗಳ ಮೊದಲು ಘೋಷಿಸಲಾಗುತ್ತದೆ. ಆದರೆ ಈ ಬಾರಿ ಹಾಗೆ ನಡೆದಿಲ್ಲ. ಕಡಿಮೆ ಅವಧಿಯಲ್ಲಿ ಅಧಿಸೂಚನೆ ಹೊರಡಿಸಿ ವೇಳಾಪಟ್ಟಿ ಪ್ರಕಟಿಸಲಾಗಿದೆ. ಈ ಪರೀಕ್ಷೆ ನಡೆಯುವಾಗ 12 ನೇ ತರಗತಿಯ ಮಂಡಳಿ ಪರೀಕ್ಷೆಗಳು, ಪೂರ್ವಭಾವಿ ಮಂಡಳಿ ಪರೀಕ್ಷೆಗಳು, ಸಿಬಿಎಸ್‌ಇ ಐಸಿಎಸ್‌ಇಯ ವೈವಾ- ವೋಸ್‌ ಹಾಗೂ ಹಲವು ರಾಜ್ಯ ಮಂಡಳಿ ಪರೀಕ್ಷೆಗಳನ್ನು ಏರ್ಪಡಿಸಲಾಗಿದ್ದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.  

ಕಳೆದ ಸಾಲಿನ ಪರೀಕ್ಷೆಯವರೆಗೆ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಶೇ 75ರಷ್ಟು ಅಂಕ ಪಡೆದಿರಬೇಕೆಂಬ ನಿಯಮ ಇರಲಿಲ್ಲ. ಈ ಹಠಾತ್‌ ಬದಲಾವಣೆಯಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆಗೀಡಾಗಲಿದ್ದಾರೆ. ಮಂಡಳಿ ಪರೀಕ್ಷೆಗಳಲ್ಲಿ ಶೇ 75ರಷ್ಟು ಅಂಕಗಳಿಸಿರದ ಆದರೆ ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಬಹುದಾದ ವಿದ್ಯಾರ್ಥಿಗಳಿಗೆ ಇದು ಹೊಡೆತ ನೀಡಲಿದೆ ಎಂದು ಕೂಡ ಅರ್ಜಿ ಆತಂಕ ವ್ಯಕ್ತಪಡಿಸಿದೆ.