BCI and Supreme Court 
ಸುದ್ದಿಗಳು

ಹೊಸ ಕಾನೂನು ಕಾಲೇಜುಗಳ ಸ್ಥಾಪನೆಗೆ ನಿರ್ಬಂಧ: ಬಿಸಿಐ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ಹೊಸ ಕಾನೂನು ಕಾಲೇಜುಗಳ ಸ್ಥಾಪನೆಗೆ ಮೂರು ವರ್ಷಗಳ ನಿರ್ಬಂಧವೂ ಸೇರಿದಂತೆ ಕಳಪೆ ಗುಣಮಟ್ಟದ ಕಾನೂನು ಸಂಸ್ಥೆಗಳ ಅನಿಯಂತ್ರಿತ ಬೆಳವಣಿಗೆ ತಡೆಯಲು ಬಿಸಿಐ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿತ್ತು.

Bar & Bench

ದೇಶಾದ್ಯಂತ ಹೊಸ ಕಾನೂನು ಕಾಲೇಜುಗಳ ಸ್ಥಾಪನೆಯನ್ನು ಮೂರು ವರ್ಷಗಳ ಕಾಲ ನಿರ್ಬಂಧಿಸಿದ್ದ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಪ್ರತಿಕ್ರಿಯೆಯನ್ನು ಕೋರಿದೆ [ಜತಿನ್ ಶರ್ಮಾ ವಿರುದ್ಧ ಭಾರತೀಯ ಬಾರ್ ಕೌನ್ಸಿಲ್ ಮತ್ತು ಇತರರು].

ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ಪೀಠವು ಕಾನೂನು ಶಿಕ್ಷಣ ಕೇಂದ್ರಗಳಿಗೆ ಸಂಬಂಧಿಸಿದಂತೆ ಕಾನೂನು ಶಿಕ್ಷಣದ ನಿಯಮಗಳು, ನಿಲುಗಡೆ (ಮೂರು ವರ್ಷಗಳ ನಿಲುಗಡೆ) 2025 ಅನ್ನು ಪ್ರಶ್ನಿಸಿ ವಕೀಲ ಜತಿನ್ ಶರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.

ಕಳಪೆ ಗುಣಮಟ್ಟದ ಕಾನೂನು ಸಂಸ್ಥೆಗಳ ಅನಿಯಂತ್ರಿತ ಬೆಳವಣಿಗೆ ತಡೆಯಲು ಮತ್ತು ಕಾನೂನು ಶಿಕ್ಷಣದ ಸಮಗ್ರತೆಯನ್ನು ಕಾಪಾಡಲು ಬಿಸಿಐ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿತ್ತು. ಆಗಸ್ಟ್ 13ರಂದು ಬಿಸಿಐ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಮೂರು ವರ್ಷಗಳ ಅವಧಿಯಲ್ಲಿ ಮಂಡಳಿಯ ಪೂರ್ವಾನುಮತಿ ಇಲ್ಲದೆ ಯಾವುದೇ ಅಸ್ತಿತ್ವದಲ್ಲಿರುವ ಕಾನೂನು ಶಿಕ್ಷಣ ಕೇಂದ್ರಗಳು, ಹೊಸ ವಿಭಾಗಗಳು, ಕೋರ್ಸ್‌ಗಳು ಅಥವಾ ಬ್ಯಾಚ್‌ಗಳನ್ನು ಪರಿಚಯಿಸಲು ಅನುಮತಿಸಲಾಗುವುದಿಲ್ಲ ಎಂದು ಸಹ ತಿಳಿಸಿತ್ತು.

ಬಿಸಿಐನ ನಿರ್ಧಾರವನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್‌ ಮುಂದೆ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ, ಕಾನೂನು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ವಿಚಾರದಲ್ಲಿ ಹೇರಲಾಗಿರುವ ನಿಲುಗಡೆಯು ಸಂಪೂರ್ಣವಾಗಿ ಸ್ವೇಚ್ಛೆಯಿಂದ ಕೂಡಿದ್ದು, ಸಂವಿಧಾನದ 14, 19(1)(ಜಿ), ಮತ್ತು 21 ನೇ ವಿಧಿಗಳ ಉಲ್ಲಂಘನೆಯಾಗಿದೆ ಏಕೆಂದರೆ ಇದು ಅರ್ಹ ಆಕಾಂಕ್ಷಿಗಳು ಕಾನೂನು ಶಿಕ್ಷಣ ಪಡೆಯುವುದನ್ನು ವಂಚಿಸಲಿದ್ದು, ಶಿಕ್ಷಣ ನೀಡುವ ಸಂಸ್ಥೆಗಳಿಗೆ ದಂಡ ವಿಧಿಸುತ್ತದೆ ಎಂದು ಹೇಳಲಾಗಿದೆ.

ಈ ರೀತಿ ಏಕರೂಪವಾಗಿ ಕಾನೂನು ಶಿಕ್ಷಣ ಸಂಸ್ಥೆಗಳ ಸ್ಥಾಪನೆಯನ್ನು ಸ್ಥಗಿತಗೊಳಿಸುವ ಬದಲು, ಗುರಿ ನಿರ್ದೇಶಿತವಾದ, ಪ್ರದೇಶ ನಿಷ್ಟವಾದ, ಪಾರದರ್ಶಕ ನಿಯಂತ್ರಕ ಕ್ರಮಗಳಿಗೆ ನೈಜ ಪ್ರಸ್ತಾಪಗಳು ಮುಂದೆ ಬರಲು ಅವಕಾಶ ನೀಡುವಾಗ ಕಳಪೆ ಗುಣಮಟ್ಟದ ಸಂಸ್ಥೆಗಳನ್ನು ಪರಿಹರಿಸಲು ಉದ್ದೇಶಿತ, ಪಾರದರ್ಶಕ ಮತ್ತು ಪ್ರದೇಶ-ನಿರ್ದಿಷ್ಟ ನಿಯಂತ್ರಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಶೈಕ್ಷಣಿಕ ಗುಣಮಟ್ಟ ಕುಸಿಯಲು ನಿಜವಾದ ಕಾರಣಗಳಾದ ಪರೀಕ್ಷಾ ಅಕ್ರಮಗಳು, ಹಾಜರಾತಿ ನಿಯಮಗಳ ಸಡಿಲ ಜಾರಿ, ಎಲ್‌ಎಲ್‌ಎಂ ಹಾಗೂ ಪಿಎಚ್‌ಡಿ ಪದವಿಗಳ ವಾಣಿಜ್ಯೀಕರಣ ಮುಂತಾದ ಕ್ರಮಗಳನ್ನು ತಡೆಗಟ್ಟಲು ನಿಯಮಿತವಾಗಿ ತಪಾಸಣೆ, ಹೊಣೆಗಾರಿಕೆಯ ಜಾರಿ ಕ್ರಮಗಳ ಮೂಲಕ ಪರಿಹರಿಸಬಹುದು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.