Swami Prabodhanand Giri with Uttarakhand High Court
ಕಳೆದ ತಿಂಗಳು ಹರಿದ್ವಾರದಲ್ಲಿ ನಡೆದಿದ್ದ ಧರ್ಮ ಸಂಸತ್‌ನಲ್ಲಿ ದ್ವೇಷ ಭಾಷಣ ಮಾಡಿದ್ದ ಯತಿ ನರಸಿಂಗಾನಂದ ಮತ್ತಿತರರ ವಿರುದ್ಧ ದಾಖಲಿಸಲಾಗಿರುವ ಪ್ರಥಮ ಮಾಹಿತಿ ವರದಿಯನ್ನು ರದ್ದುಪಡಿಸುವಂತೆ ಕೋರಿ ಉತ್ತರಾಖಂಡ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಸೂಚನೆ ಪಡೆಯುವಂತೆ ನ್ಯಾಯಮೂರ್ತಿ ಎನ್ ಎಸ್ ಧನಿಕ್ ನೇತೃತ್ವದ ಏಕಸದಸ್ಯ ರಜಾಕಾಲೀನ ಪೀಠವು ಶುಕ್ರವಾರ ರಾಜ್ಯ ಸರ್ಕಾರದ ವಕೀಲರಿಗೆ ಸೂಚಿಸಿದ್ದು, ವಿಚಾರಣೆಯನ್ನು ಜನವರಿ 25ಕ್ಕೆ ಮುಂದೂಡಿದೆ.
ಸ್ವಾಮಿ ಪ್ರಬೋಧಾನಂದ ಗಿರಿ ಸೇರಿದಂತೆ ಹಲವರು ಪ್ರಚೋದನಾಕಾರಿ ಭಾಷಣ ಮಾಡಿದ್ದು, ಮುಸ್ಲಿಮರ ಹತ್ಯಾಕಾಂಡಕ್ಕೆ ಮೂರು ದಿನಗಳ ಧರ್ಮ ಸಂಸತ್‌ನಲ್ಲಿ ಕರೆ ನೀಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಎರಡು ಎಫ್‌ಐಆರ್ ದಾಖಲಿಸಲಾಗಿದೆ.
ದಸ್ನಾ ಅರ್ಚಕ ಯತಿ ನರಸಿಂಗಾನಂದ ಮತ್ತು ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿ (ವಾಸಿಂ ರಿಜ್ವಿ) ಅವರನ್ನು ಪೊಲೀಸರು ಬಂಧಿಸಿದ್ದು, ಹರಿದ್ವಾರದಲ್ಲಿನ ಸ್ಥಳೀಯ ನ್ಯಾಯಾಲಯವು ಅವರಿಗೆ ಜಾಮೀನು ನಿರಾಕರಿಸಿತ್ತು.
ಹತ್ಯಾಕಾಂಡಕ್ಕೆ ಕರೆ ನೀಡಿದವರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದು, ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಮತ್ತು ಉತ್ತರಾಖಂಡ ಸರ್ಕಾರಕ್ಕೆ ಜನವರಿ 12ರಂದು ನೋಟಿಸ್ ಜಾರಿ ಮಾಡಿದೆ. ಸುಪ್ರೀಂ ಕೋರ್ಟ್ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ನರಸಿಂಗಾನಂದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಈಚೆಗೆ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅನುಮತಿಸಿದ್ದಾರೆ.