Bombay High Court and cigaretts
Bombay High Court and cigaretts 
ಸುದ್ದಿಗಳು

ಧೂಮಪಾನದಿಂದ ಕೋವಿಡ್‌ಗೆ ತುತ್ತಾಗುವ ಸಾಧ್ಯತೆ ಕಡಿಮೆ ಮಾಡಬಹುದು ಎಂದು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ

Bar & Bench

ಸಿಗರೇಟ್‌ ಸೇರಿದಂತೆ ನಿಕೋಟಿನ್‌ ಉತ್ಪನ್ನಗಳ ಧೂಮಪಾನಿಗಳು ಕೋವಿಡ್‌ಗೆ ತುತ್ತಾಗುವ ಸಾಧ್ಯತೆಗಳು ಕಡಿಮೆ ಎಂದು ಬಾಂಬೆ ಹೈಕೋರ್ಟ್‌ ಮುಂದೆ ಬೀಡಿ ಮತ್ತು ತಂಬಾಕು ವರ್ತಕರ ಹಾಗೂ ಚಿಲ್ಲರೆ ವ್ಯಾಪಾರಿಗಳ ಒಕ್ಕೂಟವು ಅರ್ಜಿ ಸಲ್ಲಿಸಿದೆ (ಸ್ನೇಹ ಮರ್ಜಾದಿ ವರ್ಸಸ್ ಮಹಾರಾಷ್ಟ್ರ ಸರ್ಕಾರ ಮತ್ತು ಇತರರು).

ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾ.ಜಿ ಎಸ್‌ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ಮಹಾರಾಷ್ಟ್ರದಲ್ಲಿನ ಕೋವಿಡ್‌ ನಿರ್ವಹಣೆಯಲ್ಲಿ ಅಸಮರ್ಪಕತೆಯ ಕುರಿತಾದ ಪ್ರಕರಣವನ್ನು ಏಪ್ರಿಲ್‌ನಲ್ಲಿ ಆಲಿಸುತ್ತಿದ್ದ ವೇಳೆ, ಕೋವಿಡ್‌ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಬೀಡಿ ಮತ್ತು ಸಿಗರೇಟ್‌ಗಳನ್ನು ನಿಷೇಧಿಸುವ ಬಗ್ಗೆ ಪ್ರಸ್ತಾಪಿಸಿತ್ತು. ಗಂಭೀರ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳದ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿನ ತೀವ್ರತೆ‌ ಹಾಗೂ ಧೂಮಪಾನದ ನಡುವೆ ಸಂಬಂಧ ಇರಬಹುದು ಎನ್ನುವ ಹಿನ್ನೆಲೆಯಲ್ಲಿ ಈ ಅಭಿಪ್ರಾಯವನ್ನು ಪೀಠವು ವ್ಯಕ್ತಪಡಿಸಿತ್ತು.

ವಿಚಾರಣೆಯ ಸಂದರ್ಭದಲ್ಲಿ ಅಡ್ವೊಕೇಟ್‌ ಜನರಲ್‌ ಅಶುತೋಷ್‌ ಕುಂಭಕೋಣಿ ಅವರು ಕೇಂದ್ರ ಅಣುಶಕ್ತಿ ಇಲಾಖೆಯಡಿ ಬರುವ ಟಾಟಾ ಸ್ಮಾರಕ ಕೇಂದ್ರದ ನಿರ್ದೇಶಕರು ತಮ್ಮ ವರದಿಯಲ್ಲಿ ಧೂಮಪಾನಿಗಳು ಕೋವಿಡ್‌ಗೆ ಸುಲಭವಾಗಿ ತುತ್ತಾಗುವ ವರ್ಗಕ್ಕೆ ಸೇರುತ್ತಾರೆ ಎಂದು ಹೇಳಿರುವುದನ್ನು ಉಲ್ಲೇಖಿಸಿದ್ದರು. ಅಲ್ಲದೆ, ಬಹುತೇಕ ಅಧ್ಯಯನಗಳು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ ಎಂದೂ ಸಹ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಚಿಲ್ಲರೆ ವ್ಯಾಪಾರಿಗಳ ಒಕ್ಕೂಟವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ರವಿ ಕದಂ ಅವರು ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯವುಳ್ಳ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿಯ (ಸಿಎಸ್‌ಐಆರ್‌) ವರದಿಯನ್ನು ಉಲ್ಲೇಖಿಸಿದ್ದರು. ಧೂಮಪಾನಿಗಳು ಕೋವಿಡ್‌ ಸೋಂಕಿಗೆ ತುತ್ತಾಗುವ ಸಾಧ್ಯತೆ ಕಡಿಮೆ ಎನ್ನುವ ಸಿಎಸ್‌ಐಆರ್‌ ವರದಿಯನ್ನು ಅವರು ಸಲ್ಲಿಸಿದ್ದರು. ಮುಂದುವರೆದು, ಧೂಮಪಾನವು ಕೋವಿಡ್‌ನಿಂದ ಜನರನ್ನು ರಕ್ಷಿಸುತ್ತದೆ ಎಂದು ಲೇಖನದಲ್ಲಿರುವುದಾಗಿ ಅವರು ವಾದಿಸಿದ್ದರು.

ಕದಂ ಅವರ ವಾದವನ್ನು ವ್ಯಾಪಾರಿ ಸಂಘವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆವಿಕ್‌ ಸೆಟಲ್‌ವಾಡ್ ಸಹ ಅನುಮೋದಿಸಿದ್ದರು.

ಇತ್ತ, ಒಕ್ಕೂಟದಿಂದ ಸಲ್ಲಿಕೆಯಾಗಿರುವ ಅಫಿಡವಿಟ್‌ನಲ್ಲಿ ಕೋವಿಡ್‌ ವೈರಸ್‌ ಶ್ವಾಸಕೋಶವನ್ನು ಪ್ರವೇಶಿಸುವುದನ್ನು ನಿಕೋಟಿನ್‌ ಆಧಾರಿತ ಪದಾರ್ಥಗಳು ತಡೆಯುತ್ತವೆ ಎನ್ನುವುದಾಗಿ ಹೇಳಲಾಗಿದೆ.

ಅಫಿಡವಿಟ್‌ನಲ್ಲಿನ ಈ ಹೇಳಿಕೆಯು ಕೋವಿಡ್‌ ಹಾಗೂ ಧೂಮಪಾನಕ್ಕೆ ನೇರ ಸಂಬಂಧವಿಲ್ಲ ಎನ್ನುವ ಇಂಗಿತ ವ್ಯಕ್ತಪಡಿಸುತ್ತಿದೆ ಎನ್ನುವುದನ್ನು ನ್ಯಾಯಾಲಯವು ಗಮನಿಸಿತು. ಇದೇ ವೇಳೆ, ವೈದ್ಯಕೀಯ ವಿಷಯದ ಬಗ್ಗೆ ಸಿಎಸ್‌ಐಆರ್‌ ನೀಡಿರುವ ವರದಿಯು ಎಷ್ಟು ನಂಬಲರ್ಹ ಎನ್ನುವ ಬಗ್ಗೆಯೂ ನ್ಯಾಯಾಲಯವು ಅನುಮಾನ ವ್ಯಕ್ತಪಡಿಸಿತು.

ಆದರೆ, ಪೀಠದ ಅನುಮಾನಕ್ಕೆ ಪ್ರತಿಕ್ರಿಯಿಸಿದ ಪಕ್ಷಕಾರರ ಪರ ವಕೀಲರು ವೈದ್ಯರೊಂದಿಗಿನ ಸಮಾಲೋಚನೆಯ ನಂತರವೇ ವರದಿಯನ್ನು ತಯಾರಿಸಲಾಗಿದೆ ಎಂದು ಸಮಜಾಯಿಷಿ ನೀಡಿದ್ದರು. ಅಂತಿಮವಾಗಿ ನ್ಯಾಯಾಲಯವು ಕೋವಿಡ್‌ ಮೇಲೆ ಧೂಮಪಾನದ ಪರಿಣಾಮಗಳ ಕುರಿತಾಗಿ ಜುಲೈ 8ರಂದು ಪ್ರಕರಣವನ್ನು ಆಲಿಸಲು ತೀರ್ಮಾನಿಸಿತು.