ಭಾರತೀಯ ಕುಸ್ತಿ ಒಕ್ಕೂಟದ ವ್ಯವಹಾರಗಳನ್ನು ನಿರ್ವಹಿಸಲು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ರಚಿಸಿರುವ ಅಡ್‌ಹಾಕ್ ಸಮಿತಿ (ತಾತ್ಕಾಲಿಕ ಆಯ್ಕೆ ಸಮಿತಿ) ಮರುನೇಮಕಕ್ಕೆ ದೆಹಲಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ಸಮಿತಿಯನ್ನು ವಿಸರ್ಜಿಸುವುದು ಅನಗತ್ಯ ಎಂದಿರುವ ನ್ಯಾ. ಸಚಿನ್ ದತ್ತಾ ಆದರೂ ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯೂಡಬ್ಲ್ಯೂ) ಆತಂಕವನ್ನು ನಿವಾರಿಸಲು ಅಂತಾರಾಷ್ಟ್ರೀಯ ಒಕ್ಕೂಟಗೊಳೊಂದಿಗೆ ವ್ಯವಹರಿಸಲು ಸೂಕ್ತ ಪರಿಣತಿ ಪಡೆದಿರುವ ಪ್ರಖ್ಯಾತ ಕ್ರೀಡಾಪಟುಗಳು ಮತ್ತು ಇಲ್ಲವೇ ತಜ್ಞರನ್ನು ಒಳಗೊಂಡ ಸಮಿತಿಯನ್ನು ಮರುನಿಯೋಜಿಸಲು ಐಒಎ ಮುಕ್ತವಾಗಿರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅಡ್‌ಹಾಕ್ ಸಮಿತಿ ರಚಿಸುವಂತೆ ಐಒಎಗೆ ಆದೇಶಿಸಿ ತಾನು 2023ರ ಡಿಸೆಂಬರ್ 12ರಂದು ನೀಡಿದ್ದ ಆದೇಶವನ್ನು ಹಿಂಪಡೆಯಲು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಸ್ವತಂತ್ರವಾಗಿದೆ ಎಂದು ಕೂಡ ನ್ಯಾಯಾಲಯ ಹೇಳಿದೆ .
ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಹಾಗೂ ಸತ್ಯವ್ರತ್ ಕಡಿಯಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಆದರೆ ಡಬ್ಲ್ಯೂಎಫ್‌ಐ ಆಡಳಿತ ನಿರ್ವಹಿಸಲು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಏಕವ್ಯಕ್ತಿ ಸಮಿತಿ ನೇಮಿಸುವಂತೆ ಕುಸ್ತಿಪಟುಗಳು ಮಾಡಿದ್ದ ಮನವಿಯನ್ನು ಅದು ಪುರಸ್ಕರಿಸಲಿಲ್ಲ.
ಡಬ್ಲ್ಯೂಎಫ್‌ಐ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಅರ್ಜಿ ಸಲ್ಲಿಸಿರುವ ಕುಸ್ತಿಪಟುಗಳು ಮುಂಚೂಣಿಯಲ್ಲಿದ್ದರು. ಸಿಂಗ್ ಅವರ ಅಧಿಕಾರಾವಧಿಯ ನಂತರ, ಸಂಜಯ್ ಸಿಂಗ್ ಕುಸ್ತಿ ಒಕ್ಕೂಟದ ಮುಖ್ಯಸ್ಥರಾದರು. ಅವರನ್ನು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿಕಟವರ್ತಿ ಎನ್ನಲಾಗಿದೆ.
ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತನ್ನದೇ ನಿಯಮಾವಳಿ ಪಾಲಿಸದ ಕಾರಣ, ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ ಕೇವಲ ಮೂರು ದಿನಗಳ ನಂತರ, ಡಿಸೆಂಬರ್ 24, 2023ರಂದು ಕೇಂದ್ರ ಸರ್ಕಾರ ಡಬ್ಲ್ಯೂಎಫ್‌ಐ ಅನ್ನು ಅಮಾನತುಗೊಳಿಸಿತ್ತು.
ತನ್ನ ವ್ಯವಹಾರಗಳನ್ನು ನಿರ್ವಹಿಸಲು ಮತ್ತು ನಿಯಂತ್ರಿಸಲು ತಾತ್ಕಾಲಿಕ ಸಮಿತಿ ರಚಿಸುವಂತೆ ಸರ್ಕಾರ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ಗೆ (ಐಒಎ) ವಿನಂತಿಸಿತು. ಆದರೆ, ಫೆಬ್ರವರಿ 2024ರಲ್ಲಿ ವಿಶ್ವ ಕುಸ್ತಿ ಸಂಸ್ಥೆ ಡಬ್ಲ್ಯೂಎಫ್‌ಐಯ ಅಮಾನತ್ತನ್ನು ತೆರವುಗೊಳಿಸಿದ್ದರಿಂದ ಐಒಎ ತನ್ನ ತಾತ್ಕಾಲಿಕ ಸಮಿತಿಯನ್ನು ವಿಸರ್ಜಿಸಿತ್ತು.
ಫೋಗಟ್, ಪುನಿಯಾ, ಮಲಿಕ್ ಹಾಗೂ ಕಡಿಯಾನ್ ಅವರು ಡಬ್ಲ್ಯುಎಫ್ಐ ಅಮಾನತ್ತನ್ನು ಹಿಂತೆಗೆದುಕೊಳ್ಳದಂತೆ ಮತ್ತು ಒಕ್ಕೂಟದ ಆಡಳಿತ ನಿರ್ವಹಣೆಗಾಗಿ ಭಾರತದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ನೇಮಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.