ಜೊಮಾಟೊ ಪ್ರಾತಿನಿಧಿಕ ಉದ್ದೇಶಕ್ಕಾಗಿ ಬಳಸಲಾದ ಚಿತ್ರ
ಸುದ್ದಿಗಳು

ಜೊಮಾಟೊದ ಲೆಜೆಂಡ್ಸ್ ಅಭಿಯಾನ ದಾರಿ ತಪ್ಪಿಸುವಂತಿದೆ: ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ ಗುರುಗ್ರಾಮದ ಗ್ರಾಹಕ

ಯೋಜನೆಯಡಿ ವಿವಿಧ ನಗರಗಳಲ್ಲಿನ ಅತ್ಯುತ್ತಮ ರೆಸ್ಟೋರೆಂಟ್‌ಗಳಿಂದ ಬಿಸಿ ಆಹಾರವನ್ನು ಗ್ರಾಹಕರಿರುವ ನಗರಕ್ಕೆ ತಲುಪಿಸಲಾಗುವುದು ಎಂದು ಜೊಮಾಟೊ ಹೇಳಿಕೊಂಡಿತ್ತು.

Bar & Bench

ಬೇರೆ ನಗರಗಳ ಅತ್ಯುತ್ತಮ ರೆಸ್ಟರಂಟ್‌ಗಳಿಂದ ಕಬಾಬ್‌ ಇನ್ನಿತರ ಆಹಾರ ಪದಾರ್ಥಗಳನ್ನು ಪೂರೈಸಲಾಗುವುದು ಎಂಬ ಜೊಮಾಟೊದ ಲೆಜೆಂಡ್ಸ್‌ ಅಭಿಯಾನ ದಿಕ್ಕುತಪ್ಪಿಸವಂತಿದ್ದು ಮಿಥ್ಯೆಗಳಿಂದ ಕೂಡಿರುವುದಾಗಿ ಗುರುಗ್ರಾಮದ ನಿವಾಸಿಯೊಬ್ಬರು ದೆಹಲಿ ನ್ಯಾಯಾಲಯದ ಕದ ತಟ್ಟಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿದ ಸಿವಿಲ್ ನ್ಯಾಯಾಧೀಶ ಉಮೇಶ್ ಕುಮಾರ್ ಅವರು, ಮಾರ್ಚ್ 20ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದ್ದಾರೆ.

ಯೋಜನೆಯಡಿ ವಿವಿಧ ನಗರಗಳಲ್ಲಿನ ಅತ್ಯುತ್ತಮ ರೆಸ್ಟರಂಟ್‌ಗಳಿಂದ ಬಿಸಿ ಆಹಾರವನ್ನು ಗ್ರಾಹಕರಿರುವ ನಗರಕ್ಕೆ ತಲುಪಿಸಲಾಗುವುದು ಎಂದು ಜೊಮಾಟೊ ಹೇಳಿಕೊಂಡಿತ್ತು.

ಜೊಮಾಟೊ ಯೋಜನೆ ತಪ್ಪುದಾರಿಗೆಳೆಯುತ್ತಿದೆ ಎಂದು ಸೌರವ್ ಮಾಲ್ಎಂಬುವವರು ಆರೋಪಿಸಿದ್ದಾರೆ. ಯೋಜನೆಗೆ ಪ್ರತಿಬಂಧಕಾದೇಶ ನೀಡಬೇಕು ಹಾಗೂ ರೂ 1,00,000 ಪರಿಹಾರ ದೊರಕಿಸಿಕೊಡಬೇಕು ಎಂದು ಕೋರಿ ಅವರು ಸಾಮುದಾಯಿಕ ಕ್ರಮ ಕೋರಿಕೆ (ಕ್ಲಾಸ್‌ ಆಕ್ಷನ್‌ ಸೂಟ್‌) ಅರ್ಜಿ ಸಲ್ಲಿಸಿದ್ದಾರೆ.

ಜೊಮಾಟೊದ 'ದಿಲ್ಲಿ ಕಿ ಲೆಜೆಂಡ್ಸ್‌' ಸೇವೆಯಡಿ ದೂರುದಾರರು ಅಕ್ಟೋಬರ್ 14, 2023 ರಂದು ಆಹಾರ ಆರ್ಡರ್‌ ಮಾಡಿದ್ದರು. ಆದರೆ ಆಹಾರ ವಿತರಣಾ ಪಾಲುದಾರರಿಂದ ದೊರೆತ ಮಾಹಿತಿ ಅನ್ವಯ ಸಂಬಂಧಪಟ್ಟ ರೆಸ್ಟರಂಟ್‌ನಿಂದ ಆಹಾರವನ್ನು ಪಡೆಯದೆ ಮೂರನೇ ಪಕ್ಷಕಾರರಿಂದ ಆಹಾರವನ್ನು ಪಡೆದಿರುವುದು ಅವರಿಗೆ ತಿಳಿದುಬಂದಿತ್ತು.

ಅರ್ಜಿದಾರರು ಆರ್ಡರ್‌ ಮಾಡಿದ್ದ ನಿರ್ದಿಷ್ಟ ರೆಸ್ಟರಂಟ್‌ ಪೊಟ್ಟಣದಲ್ಲಿ ಆಹಾರ ವಿತರಿಸಿರಲಿಲ್ಲ. ಜೊಮಾಟೊ ಪ್ಯಾಕಿಂಗ್‌ ಅಡಿ ಅದು ದೊರೆತಿತ್ತು. ರೆಸ್ಟರಂಟ್‌ ಪಾಲುದಾರರ ಹೆಸರನ್ನು ಸೂಚಿಸಲಾಗಿತ್ತೇ ವಿನಾ ಬೇರಾವುದೇ ಬ್ರಾಂಡಿಂಗ್‌ ಇರಲಿಲ್ಲ. ಮೂಲ ಪ್ಯಾಕೇಜಿಂಗ್‌ ಇಲ್ಲದಿರುವುದು ಆಹಾರ ಅಧಿಕೃತವೇ ಎಂಬ ಅನುಮಾನ ಹೆಚ್ಚುವಂತೆ ಮಾಡಿದೆ" ಎಂಬುದಾಗಿ ಮನವಿಯಲ್ಲಿ ತಿಳಿಸಲಾಗಿದೆ.

"ಬಿಸಿಯಾದ ಆಹಾರ ವಿತರಿಸಲಾಗುತ್ತದೆ" ಎಂದು ಜೊಮಾಟೊ ಹೇಳಿಕೊಂಡಿದ್ದರೂ ತನಗೆ ದೊರೆತ ಆಹಾರ ತಣ್ಣಗೆ ಇತ್ತು. ಗುರುಗ್ರಾಮದ ಗೋದಾಮಿನಿಂದ ಆಹಾರ ಪೂರೈಸಿರುವುದನ್ನು ವಿತರಣಾ ಪಾಲುದಾರರು ಕೂಡ ಒಪ್ಪಿಕೊಂಡಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಪೂರ್ಣವಲ್ಲದ ಮತ್ತು ಪಾರದರ್ಶಕವಾಗಿರದ ಇಂತಹ ವ್ಯವಹಾರ ಮೋಸದಿಂದ ಕೂಡಿದ್ದು ಜೊಮಾಟೊ ನೀಡಿದ ಸುಳ್ಳು ಭರವಸೆ ಆಧರಿಸಿ ಅದರ ಗ್ರಾಹಕರು ಆರ್ಡರ್‌ಗಳನ್ನು ನೀಡುವಂತಾಗುತ್ತದೆ. ಜೊಮಾಟೊ ʼಡಿಲಿವರ್ಡ್‌ ಹಾಟ್‌ʼ (ಬಿಸಿಯಾಗಿ ವಿತರಿಸಲಾಗುವುದು) ಪದ ಸಂಪೂರ್ಣ ಭಿನ್ನ ಅರ್ಥ ನೀಡುವುದರಿಂದ ಅದನ್ನ ಬಳಸಬಾರದು. ಬದಲಿಗೆ ʼಮರು ಬಿಸಿಮಾಡಿ ವಿತರಿಸಿದ ಆಹಾರʼ (ರಿಹೀಟೆಡ್‌ ಅಂಡ್‌ ಡೆಲಿವರ್ಡ್‌) ಎಂಬ ಸಾಲನ್ನು ಬಳಸಬೇಕು. ದೆಹಲಿ ವ್ಯಾಪ್ತಿಯಲ್ಲಿ ಆಹಾರವನ್ನು ಹೇಗೆ ತಲುಪಿಸಲಾಗುತ್ತದೆ, ಹೇಗೆ ಬಿಸಿ ಮಾಡಲಾಗುತ್ತದೆ ಹಾಗೂ ಮೂಲ ಪ್ಯಾಕ್‌ ಏಕಿಲ್ಲ ಇತ್ಯಾದಿ ಸಂಬಂಧಿತ ಮಾಹಿತಿಗಳನ್ನು ಜೊಮಾಟೊ ಒದಗಿಸಬೇಕು ಎಂದು ಅರ್ಜಿ ಆಗ್ರಹಿಸಿದೆ.

ಗ್ರಾಹಕರ ಕೈಗೆ ಸಿಲುಕಿಕೊಳ್ಳಬಹುದು ಎಂಬ ಆತಂಕದಿಂದಾಗಿಯೇ ಜೊಮಾಟೊ ದೆಹಲಿ ಕೆ ಲೆಜೆಂಡ್ಸ್ ಸೇವಾ ವಿಭಾಗದಲ್ಲಿ ಸದ್ಯಕ್ಕೆ ಆರ್ಡರ್‌ ಸ್ವೀಕರಿಸುತ್ತಿಲ್ಲ ಎಂದು ಕೂಡ ಅರ್ಜಿದಾರರು ಗಮನ ಸೆಳೆದಿದ್ದಾರೆ.