online games and Delhi HC A1
ಸುದ್ದಿಗಳು

ಆನ್‌ಲೈನ್‌ ಗೇಮ್ ನಿಯಂತ್ರಣಕ್ಕೆ ಐಟಿ ನಿಯಮಾವಳಿ: ಕೇಂದ್ರ ಸರ್ಕಾರದ ಅಧಿಕಾರ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ನಿಯಮಗಳ ಅಡಿಯಲ್ಲಿ ಆನ್ಲೈನ್ ರಿಯಲ್ ಮನಿ ಗೇಮ್ಗಳಿಗೆ ಅನುಮತಿ ನೀಡಲಾಗಿದೆಯೇ ಎಂದು ಪರಿಶೀಲಿಸಲು ಸ್ವಯಂ-ನಿಯಂತ್ರಕ ಸಂಸ್ಥೆಗಳನ್ನು (ಎಸ್ಆರ್‌ಬಿಗಳು) ರಚಿಸುವ ಕೇಂದ್ರದ ನಿರ್ಧಾರವನ್ನು ಅರ್ಜಿ ಪ್ರಶ್ನಿಸಿದೆ.

Bar & Bench

ಆನ್‌ಲೈನ್ ಗೇಮಿಂಗ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥಗಾರರಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ತಿದ್ದುಪಡಿ ನಿಯಮಾವಳಿ- 2023ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಲಾಗಿದೆ  [ಸೋಶಿಯಲ್ ಆರ್ಗನೈಸೇಶನ್ ಫಾರ್ ಕ್ರಿಯೇಟಿಂಗ್ ಹ್ಯುಮಾನಿಟಿ  ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ಪೀಠದೆದುರು ಶುಕ್ರವಾರ ಪ್ರಕರಣ ವಿಚಾರಣೆಗೆ ಬಂದಿತು. ಆಗ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಚೇತನ್‌ ಶರ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ಸಹಾಯ ಮಾಡುವಂತೆ ಪೀಠ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಜುಲೈ 13ರಂದು ನಡೆಯಲಿದೆ.

ಸೋಶಿಯಲ್ ಆರ್ಗನೈಸೇಶನ್ ಫಾರ್ ಕ್ರಿಯೇಟಿಂಗ್ ಹ್ಯುಮಾನಿಟಿ ಎಂಬ ನೋಯ್ಡಾ ಮೂಲದ ಸರ್ಕಾರೇತರ ಸಂಸ್ಥೆ ಅರ್ಜಿ ಸಲ್ಲಿಸಿದೆ.

ಅರ್ಜಿಯ ಪ್ರಮುಖಾಂಶಗಳು

  • ಬೆಟ್ಟಿಂಗ್ ಮತ್ತು ಜೂಜಾಟದ ವಿಷಯಗಳ ಬಗ್ಗೆ ಕಾನೂನು ರೂಪಿಸಲು ರಾಜ್ಯ ಸರ್ಕಾರಕ್ಕೆ ಸಂವಿಧಾನ ವಿಶೇಷ ಅಧಿಕಾರ ನೀಡಿದ್ದು ಐಟಿ ತಿದ್ದುಪಡಿ ನಿಯಮಾವಳಿ ಕೇಂದ್ರ ಸರ್ಕಾರದ ಶಾಸಕಾಂಗ ಸಾಮರ್ಥ್ಯ ಮೀರಿದ್ದಾಗಿದೆ.

  • ನಿಯಮಗಳ ಅಡಿಯಲ್ಲಿ ಆನ್‌ಲೈನ್ ರಿಯಲ್ ಮನಿ ಗೇಮ್‌ಗಳಿಗೆ ಅನುಮತಿ ನೀಡಲಾಗಿದೆಯೇ ಎಂದು ಪರಿಶೀಲಿಸಲು ಸ್ವಯಂ-ನಿಯಂತ್ರಕ ಸಂಸ್ಥೆಗಳನ್ನು (ಎಸ್‌ಆರ್‌ಬಿಗಳು) ಕೇಂದ್ರ ಸರ್ಕಾರ ರಚಿಸುವುದು ಕಳವಳಕಾರಿ.

  • ಆನ್‌ಲೈನ್‌ ರಿಯಲ್‌ ಮನಿ ಗೇಮ್‌ಗಳನ್ನು ಅನುಮತಿಸಲಾಗಿದೆಯೇ ಎಂದು ಎಸ್‌ಆರ್‌ಬಿಗಳು ಪರಿಶೀಲಿಸುತ್ತವೆ ಎಂಬುದಾಗಿ ಕೇಂದ್ರ ಸರ್ಕಾರ ಹೇಳಿದ್ದರೂ ಸಮುದಾಯ ನಿಯಂತ್ರಣದಲ್ಲಿ ಸ್ವಹಿತಾಸಕ್ತಿ ಹೊಂದಿರುವ ಗೇಮಿಂಗ್‌ ಕಂಪೆನಿಗಳು ಎಸ್‌ಆರ್‌ಬಿಗಳಿಗೆ ಹಣಕಾಸು ಒದಗಿಸಬಹುದು.

  • ಸರ್ಕಾರದ ನಿರ್ಧಾರ ಸಂಪೂರ್ಣ ಅನಿಯಂತ್ರಿತ, ಅತಾರ್ಕಿಕ ಹಾಗೂ ಸಂವಿಧಾನದ 14 ನೇ ವಿಧಿಯ ಉಲ್ಲಂಘನೆಯಾಗಿದೆ.

  • ಆನ್‌ಲೈನ್‌ ಗೇಮಿಂಗ್‌ ವಲಯದ ನಿಗಾ ಮತ್ತು ಮೇಲ್ವಿಚಾರಣೆಯ ಕಾರ್ಯದಿಂದ ಸರ್ಕಾರ ನುಣುಚಿಕೊಳ್ಳುವಂತಿಲ್ಲ ಮತ್ತು ಈ ಕೆಲಸವನ್ನು ಖಾಸಗಿ ಸಂಸ್ಥೆಗಳಿಗೆ ಹೊರಗುತ್ತಿಗೆ ನೀಡುವಂತಿಲ್ಲ.

  • ಪ್ರಶ್ನಾರ್ಹ ನಿಯಮಗಳು ಸಂವಿಧಾನಕ್ಕೆ ವಿರುದ್ಧವಾಗಿರುವುದಲ್ಲದೆ ಕೋವಿಡ್‌ ಲಾಕ್‌ಡೌನ್‌ ಮತ್ತು ನಂತರದ ಅವಧಿಯಲ್ಲಿ ಶರವೇಗದಲ್ಲಿ ಬೆಳೆಯುತ್ತಿರುವ ಆನ್‌ಲೈನ್ ಗೇಮಿಂಗ್ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ನಿಷ್ಪರಿಣಾಮಕಾರಿಯಾಗಿವೆ.

  • ಆದ್ದರಿಂದ ನಿಯಮಾವಳಿಗಳನ್ನು ಜಾರಿಗೆ ತರುವ ಕೇಂದ್ರ ಸರ್ಕಾರದ ನಿರ್ಧಾರ ಸಾರ್ವಜನಿಕ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಇದರಿಂದಸಾರ್ವಜನಿಕಬೊಕ್ಕಸ ಬರಿದಾಗಲಿದ್ದು ಆನ್‌ಲೈನ್‌ ಜೂಜಿನ ಭೀತಿ ತಡೆಯಲು ಇದು ಯಶಸ್ವಿಯಾಗುವುದಿಲ್ಲ.