ED, Supreme Court  
ಸುದ್ದಿಗಳು

ಕಾಂಗ್ರೆಸ್ಸಿಗರ ರಕ್ಷಣೆಗಾಗಿ ಇ ಡಿ ನಿರ್ದೇಶಕರ ಅಧಿಕಾರಾವಧಿ ಪ್ರಶ್ನಿಸಿ ಅರ್ಜಿ: ಸುಪ್ರೀಂಗೆ ಕೇಂದ್ರದ ಅಫಿಡವಿಟ್

ಹಲವು ಕಾಂಗ್ರೆಸ್ ನಾಯಕರು ಜಾರಿ ನಿರ್ದೇಶನಾಲಯದ ತನಿಖೆಗೆ ಒಳಪಟ್ಟಿರುವುದರಿಂದ ಕಾಂಗ್ರೆಸ್ ನಾಯಕಿ ಡಾ. ಜಯಾ ಠಾಕೂರ್ ಅವರು ಸಲ್ಲಿಸಿರುವ ಮನವಿಗೆ ರಾಜಕೀಯ ಲಾಭ ಪಡೆಯುವ ಉದ್ದೇಶವಿದೆ ಎಂದು ಕೇಂದ್ರದ ಪ್ರತಿ- ಅಫಿಡವಿಟ್ ತಿಳಿಸಿದೆ.

Bar & Bench

ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕರನ್ನು ರಕ್ಷಿಸುವ ಉದ್ದೇಶದಿಂದ ಜಾರಿ ನಿರ್ದೇಶನಾಲಯದ (ಇ ಡಿ) ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಣೆ ವಿರೋಧಿಸಿ ಅರ್ಜಿ ಸಲ್ಲಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಹಲವು ಕಾಂಗ್ರೆಸ್‌ ನಾಯಕರು ಜಾರಿ ನಿರ್ದೇಶನಾಲಯದ ವಿಚಕ್ಷಣೆಗೆ ಒಳಪಟ್ಟಿರುವುದರಿಂದ ಕಾಂಗ್ರೆಸ್ ನಾಯಕಿ ಡಾ. ಜಯಾ ಠಾಕೂರ್ ಅವರು ಸಲ್ಲಿಸಿರುವ ಮನವಿಗೆ ರಾಜಕೀಯ ಲಾಭ ಪಡೆಯುವ ಉದ್ದೇಶವಿದೆ ಎಂದು ಫೆಬ್ರವರಿ 24ರಂದು ಸಲ್ಲಿಸಲಾಗಿರುವ ಕೇಂದ್ರ ಸರ್ಕಾರದ ಪ್ರತಿ- ಅಫಿಡವಿಟ್‌ ತಿಳಿಸಿದೆ.

ಕಾಂಗ್ರೆಸ್ ನಾಯಕರು ಎದುರಿಸುತ್ತಿರುವ ಗಂಭೀರ ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ಡಾ. ಜಯಾ ಅರ್ಜಿಯಲ್ಲಿ ವಿವರಿಸಿಲ್ಲ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.

ಜಯಾ ಅವರು “ಬಾಹ್ಯ ಕಾರಣಗಳಿಗಾಗಿ ಮೂರನೇ ಬಾರಿಗೆ ಅಧಿಕಾರಾವಧಿ ವಿಸ್ತರಣೆ ಮಾಡಲಾಗಿದೆ. ಇದು ಸರ್ವೋಚ್ಚ ನ್ಯಾಯಾಲಯದ ಆದೇಶ ಉಲ್ಲಂಘಿಸುತ್ತದೆ. ಅಲ್ಲದೆ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಹೆಣಿಗೆಯನ್ನು ನಾಶಪಡಿಸುತ್ತದೆ” ಎಂದು ದೂರಿದ್ದರು.

ಇವುಗಳಲ್ಲಿ ಕೆಲ ಅರ್ಜಿಗಳನ್ನು ರಾಜಕೀಯ ಪಕ್ಷಗಳಿಗೆ ಸೇರಿದವರು ಸಲ್ಲಿಸಿದ್ದಾರೆ. ಆ ರಾಜಕೀಯ ಪಕ್ಷಗಳ ನಾಯಕರು ಇ ಡಿ ತನಿಖೆ ಎದುರಿಸುತ್ತಿರುವುದರಿಂದ ಅರ್ಜಿಗಳು ರಾಜಕೀಯ ಪ್ರೇರಿತವಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಅಧಿಕಾರಾವಧಿ ವಿಸ್ತರಣೆ ಸಮರ್ಥಿಸಿಕೊಂಡಿರುವ ಸರ್ಕಾರ ಜಾರಿ ನಿರ್ದೇಶನಾಲಯ ನಿರ್ವಹಿಸಬೇಕಾದ ವಿಶೇಷ ಕೆಲಸವು ನಿರಂತರ ಪ್ರಕ್ರಿಯೆಯಾಗಿರುವುದರಿಂದ ಹೀಗೆ ಮಾಡಲಾಗಿದ್ದು ಸಂಸ್ಥೆಯನ್ನು ಮುನ್ನಡೆಸುವ ವ್ಯಕ್ತಿಯು ಎರಡರಿಂದ ಐದು ವರ್ಷಗಳ ಅವಧಿಯನ್ನು ಹೊಂದಿರಬೇಕು ಎಂದು ಹೇಳಿದೆ.

ಹಿನ್ನೆಲೆ

ಮಿಶ್ರಾ ಅವರು ನವೆಂಬರ್ 2018 ರಲ್ಲಿ ಎರಡು ವರ್ಷಗಳ ಅವಧಿಗೆ ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಈ ಅವಧಿ ನವೆಂಬರ್ 2020 ರಲ್ಲಿ ಮುಕ್ತಾಯಗೊಂಡಿತ್ತು. ಮೇ 2020 ರಲ್ಲಿ, ಅವರು 60 ರ ನಿವೃತ್ತಿ ವಯಸ್ಸನ್ನು ತಲುಪಿದ್ದರು.

ಆದರೂ, ನವೆಂಬರ್ 13, 2020 ರಂದು,  ಕಚೇರಿ ಆದೇಶ ಹೊರಡಿಸಿದ, ಕೇಂದ್ರ ಸರ್ಕಾರ ರಾಷ್ಟ್ರಪತಿಗಳು 2018ರ ಆದೇಶವನ್ನು ಪೂರ್ವಾನ್ವಯವಾಗುವಂತೆ ಮಾರ್ಪಡಿಸಿದ್ದಾರೆ ಎಂಬುದಾಗಿ ತಿಳಿಸಿ 'ಎರಡು ವರ್ಷಗಳ' ಅವಧಿಯನ್ನು 'ಮೂರು ವರ್ಷಗಳ' ಅವಧಿಗೆ ಬದಲಿಸಿರುವುದಾಗಿ ಹೇಳಿತ್ತು. ಇದನ್ನು ಸರ್ಕಾರೇತರ ಸಂಸ್ಥೆ ʼಕಾಮನ್ ಕಾಸ್ʼ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಪ್ರಕರಣವನ್ನು ಆಲಿಸಿದ ಸುಪ್ರೀಂ ಕೋರ್ಟ್‌ ಮತ್ತೆ ಅವರ ಅಧಿಕಾರಾವಧಿ ವಿಸ್ತರಿಸದಂತೆ ತೀರ್ಪು ನೀಡಿತ್ತು.

ಸುಪ್ರೀಂ ಕೋರ್ಟ್‌ ತೀರ್ಪಿನ ಹೊರತಾಗಿಯೂ ಕೇಂದ್ರ ವಿಚಕ್ಷಣಾ ಆಯೋಗ ಕಾಯಿದೆಗೆ ತಿದ್ದುಪಡಿ ತಂದ ಕೇಂದ್ರ ಸರ್ಕಾರ ಇ ಡಿ ನಿರ್ದೇಶಕರ ಅಧಿಕಾರಾವಧಿಯನ್ನು ಐದು ವರ್ಷ ವಿಸ್ತರಿಸಲು ಸ್ವತಃ ಅಧಿಕಾರ ಪಡೆದುಕೊಂಡಿತ್ತು. ಇದನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆಯಾಗಿದ್ದು ವಿಚಾರಣೆ ಬಾಕಿ ಇದೆ. ಕಳೆದ ತಿಂಗಳು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು ಅರ್ಜಿಗಳ ವಿಚಾರಣೆಯಿಂದ ಹಿಂದೆ ಸರಿದ ನಂತರ ಪ್ರಕರಣ ಬಾಕಿ ಉಳಿದಿದೆ.

ಮಿಶ್ರಾ ಅಧಿಕಾರಾವಧಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಿದ್ದನ್ನು ಪ್ರಶ್ನಿಸಿ  ಜಯಾ ಅವರು ನವೆಂಬರ್ 17 2022 ರಂದು ಅರ್ಜಿ ಸಲ್ಲಿಸಿದ್ದರು.