Pramod Muthalik and Karnataka HC 
ಸುದ್ದಿಗಳು

ಪರಶುರಾಮ ಥೀಮ್‌ ಪಾರ್ಕ್‌ ವಿವಾದ: ಊಹೆ, ಪೂರ್ವಕಲ್ಪನೆಗಳಿಂದ ಅರ್ಜಿ ಸಲ್ಲಿಕೆ ಎಂದ ಹೈಕೋರ್ಟ್‌; ಮುತಾಲಿಕ್‌ ಮನವಿ ವಜಾ

ಬಹಳ ವಿಳಂಬವಾಗಿ ಪಿಐಎಲ್‌ ಸಲ್ಲಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

Bar & Bench

ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಪರಶುರಾಮ ಥೀಮ್‌ ಪಾರ್ಕ್‌ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಆಕ್ಷೇಪಿಸಿ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಮತ್ತು ಇನ್ನೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದೆ.

ಬಹಳ ವಿಳಂಬವಾಗಿ ಪಿಐಎಲ್‌ ಸಲ್ಲಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆಯ ವೇಳೆ ಅಭಿಪ್ರಾಯಪಟ್ಟಿತು.

“ಮಣಗಟ್ಟಲೆ ಊಹೆ ಮತ್ತು ಪೂರ್ವಕಲ್ಪನೆಗಳೊಂದಿಗೆ ತಡವಾಗಿ ಅರ್ಜಿ ಸಲ್ಲಿಸಲಾಗಿದೆ. ಗೋಮಾಳದಲ್ಲಿ ಥೀಮ್‌ ಪಾರ್ಕ್‌ ನಿರ್ಮಿಸಲಾಗುತ್ತಿದೆ ಎಂದು ಅರ್ಜಿದಾರರು ದೂರಿದ್ದಾರೆ. ಆದರೆ, ಗೋಮಾಳದಲ್ಲಿ ಥೀಮ್‌ ಪಾರ್ಕ್‌ ನಿರ್ಮಿಸುತ್ತಿರುವುದರಿಂದ ದನಕರುಗಳನ್ನು ಮೇಯಿಸಲು ಕಷ್ಟವಾಗುತ್ತಿದೆ ಎಂದು ಯಾವೊಬ್ಬ ವ್ಯಕ್ತಿ ಅಥವಾ ಗ್ರಾಮದ ನಿವಾಸಿ ಏನನ್ನೂ ಹೇಳಿಲ್ಲ” ಎಂದು ಪೀಠ ಆದೇಶದಲ್ಲಿ ದಾಖಲಿಸಿದೆ.

ಅರ್ಜಿಯೊಂದಿಗೆ ಲಗತ್ತಿಸಿದ ಚಿತ್ರಗಳನ್ನು ಪರಿಶೀಲಿಸಿದ ಪೀಠವು "ಥೀಮ್‌ ಪಾರ್ಕ್‌ ಕೆಲಸ ಪೂರ್ಣಗೊಳ್ಳುವ ಹಂತದಲ್ಲಿದೆ. ಅರ್ಜಿದಾರರು ಸಂಬಂಧಿತ ಪ್ರಾಧಿಕಾರಗಳಿಗೆ ವಿಷಯವನ್ನು ಸೂಕ್ತ ಸಂದರ್ಭದಲ್ಲಿ ಮುಟ್ಟಿಸಲು ವಿಫಲವಾಗಿದ್ದಾರೆ. ನಿರ್ಮಾಣ ಕಾಮಗಾರಿ ಮುಗಿಯುವ ಹಂತದಲ್ಲಿರುವಾಗ ಏಕಾಏಕಿ ಎಚ್ಚರಗೊಂಡು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.

ಹಲವು ಸರ್ಕಾರಿ ಇಲಾಖೆಗಳು ಥೀಮ್‌ ಪಾರ್ಕ್‌ ನಿರ್ಮಾಣಕ್ಕೆ ಅನುದಾನ ನೀಡಿದ್ದು, ಇಡೀ ಯೋಜನೆಗೆ 8.72 ಕೋಟಿ ರೂಪಾಯಿ ವೆಚ್ಚವಾಗಿದೆ. ಗ್ರಾಮಗಳ ಜನರಿಗೆ ನಿರ್ಮಾಣ ಕಾಮಗಾರಿ ಸಮಸ್ಯೆ ಉಂಟು ಮಾಡುತ್ತದೆ ಎಂಬುದು ಅರ್ಜಿದಾರರ ಅಹವಾಲಲ್ಲ. ಆದರೆ, ಕಟ್ಟಡ ಗುಣಮಟ್ಟದ ಬಗ್ಗೆ ಅವರಿಗೆ ಆಕ್ಷೇಪವಿದೆ ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

ಥೀಮ್‌ ಪಾರ್ಕ್‌ಗೆ ಆಕ್ಷೇಪವೇನು ಎಂಬುದನ್ನು ಅರ್ಜಿದಾರರು ಸ್ಪಷ್ಟವಾಗಿ ಹೇಳಿಲ್ಲ. ಆದರೆ, ಥೀಮ್‌ ಪಾರ್ಕ್‌ನಲ್ಲಿ ಕೆಲಸದ ಗುಣಮಟ್ಟ ಸರಿಯಿಲ್ಲ ಎಂದು ಮೆಮೊದಲ್ಲಿ ಅರ್ಜಿದಾರರು ವಿವರಿಸಿದ್ದಾರೆ. ಹೀಗಾಗಿ, ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದಿರುವ ನ್ಯಾಯಾಲಯವು ಪಿಐಎಲ್‌ ವಜಾಗೊಳಿಸಿದೆ.