Karnataka High Court 
ಸುದ್ದಿಗಳು

ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಆಂಜನೇಯಸ್ವಾಮಿ ದೇಗುಲ: ನಿರ್ಧಾರ ಪ್ರಶ್ನಿಸಿ ಟ್ರಸ್ಟ್‌ನಿಂದ ಹೈಕೋರ್ಟ್‌ಗೆ ಅರ್ಜಿ

ದೇವಾಲಯದಲ್ಲಿನ ಹಣ ದುರುಪಯೋಗಪಡಿಸಿಕೊಂಡಿರುವುದು ಹಾಗೂ ಟ್ರಸ್ಟ್ ನಿರ್ವಹಣೆಯಲ್ಲಿ ಪಾರದರ್ಶಕತೆ ಇಲ್ಲದಿರುವ ಆರೋಪ ಸಂಬಂಧ ಧಾರ್ಮಿಕ ದತ್ತಿ ಇಲಾಖೆ ಗಾಳಿ ಆಂಜನೇಯಸ್ವಾಮಿ ದೇವಾಲಯವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಆದೇಶಿಸಿದೆ.

Bar & Bench

ಬೆಂಗಳೂರಿನ ಖ್ಯಾತ ಗಾಳಿ ಆಂಜನೇಯಸ್ವಾಮಿ ದೇವಾಲಯವನ್ನು ಮುಜರಾಯಿ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡಿರುವ ಕ್ರಮ ಪ್ರಶ್ನಿಸಿ ದೇವಾಲಯದ ಟ್ರಸ್ಟ್‌ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಅರ್ಜಿಯ ಸಂಬಂಧ ವಕೀಲರಾದ ಪಿ ಪ್ರಸನ್ನ ಕುಮಾರ್‌ ಅವರು ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರಿದ್ದ ಪೀಠಕ್ಕೆ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಲು ಕೋರಿ ಮನವಿ ಮಾಡಿದರು.

ಇದಕ್ಕೆ ಪೀಠವು ಅರ್ಜಿಯನ್ನು ನಾಳೆ (ಮಂಗಳವಾರ) ವಿಚಾರಣೆ ನಡೆಸುವುದಾಗಿ ತಿಳಿಸಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ದೇವಾಲಯದ ಅಸಮರ್ಪಕ ನಿರ್ವಹಣೆ ಮತ್ತು ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಹಾಗೂ ಟ್ರಸ್ಟ್ ನಿರ್ವಹಣೆಯಲ್ಲಿ ಪಾರದರ್ಶಕತೆ ಇಲ್ಲದಿರುವ ಆರೋಪದ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಗಾಳಿ ಆಂಜನೇಯಸ್ವಾಮಿ ದೇವಾಲಯವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಆದೇಶಿಸಿತ್ತು. ಅಲ್ಲದೆ, ದೇವಾಲಯವನ್ನು ಅಧಿಸೂಚಿತ ಸಂಸ್ಥೆ ಎಂದು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿತ್ತು.

ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಹುಂಡಿ ಹಣ ಎಣಿಕೆ ವೇಳೆ ಹಣವನ್ನು ಕಳ್ಳತನ ಮಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೇವಾಲಯದ ಸಿಬ್ಬಂದಿಯಿಂದಲೇ ಕಳ್ಳತನವಾಗಿರುವ ದೃಶ್ಯದ ತುಣುಕಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ದೇವಾಲಯದಲ್ಲಿ ಆಡಳಿತ ನಿರ್ವಹಣೆ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997ರ ಸೆಕ್ಷನ್ 42 ಮತ್ತು 43ರ ಅನ್ವಯ ಸರ್ಕಾರದ ವಶಕ್ಕೆ ಪಡೆಯುವ ಸಂಬಂಧ ಅಭಿಪ್ರಾಯದ ವರದಿಯನ್ನು ಸಲ್ಲಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು 2024ರ ಅಕ್ಟೋಬರ್ 1 ರಂದು ಜಿಲ್ಲಾಧಿಕಾರಿಯನ್ನು ಕೋರಿದ್ದರು.

ಅದರಂತೆ, ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಉಪ ಆಯುಕ್ತರು, 2025ರ ಏಪ್ರಿಲ್ 25ರಂದು ಪ್ರಸ್ತಾಪಿತ ದೇವಾಲಯವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮದಂತೆ ಅಧಿಸೂಚಿತ ಸಂಸ್ಥೆಯನ್ನಾಗಿ ಘೋಷಿಸಿ ಸರ್ಕಾರದ ವಶಕ್ಕೆ ಪಡೆಯುವ ವಿಚಾರದ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಿ ವಿಚಾರಣಾ ವರದಿಯನ್ನು ಧಾರ್ಮಿಕ ಧತ್ತಿ ಇಲಾಖೆ ಆಯುಕ್ತರಿಗೆ ಸಲ್ಲಿಸಿದ್ದರು.

ವಿಚಾರಣಾ ವರದಿಯಲ್ಲಿ ಗಾಳಿ ಆಂಜನೇಯಸ್ವಾಮಿ ದೇವಾಲಯದ ಸದರಿ ಟ್ರಸ್ಟ್‌ನ ಪದಾಧಿಕಾರಿಗೆ ಹೊಂದಾಣಿಕೆ ಇಲ್ಲದೇ ಇರುವುದು ಹಾಗೂ ದೇವಾಲಯಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದ್ದು, ಪ್ರತಿ ವರ್ಷ ಉಳಿತಾಯವಿಲ್ಲದೇ ವೆಚ್ಚ ಮಾಡಲಾಗುತ್ತಿದೆ. ದೇವಸ್ಥಾನದ ಹಣ ದುರುಪಯೋಗವಾಗುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಅಲ್ಲದೇ, ಆದಾಯ ವೆಚ್ಚಕ್ಕೆ ಸಂಬಂಧಿಸಿದಂತೆ ಕಳೆದ 25 ವರ್ಷಗಳಿಂದ ಯಾವುದೇ ದಾಖಲೆಗಳನ್ನು ಇಡದೆ, ಸಹಾಯಕ ಆಯುಕ್ತ, ಮುಜರಾಯಿ ಇಲಾಖೆ ನೋಟಿಸ್ ನೀಡಿದ ಬಳಿಕ ದಾಖಲೆಗಳನ್ನು ಸೃಷ್ಟಿಸಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದ ಇಲಾಖೆಯು ದೇವಾಲಯವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿತ್ತು.