Justice Jyoti Mulimani, Karnataka HC 
ಸುದ್ದಿಗಳು

ಕರ್ನಾಟಕ ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮ ರದ್ದತಿಗೆ ಮನವಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಉದ್ಯೋಗಿಗಳ ಗ್ರಾಚ್ಯುಟಿ ಮೊತ್ತಕ್ಕೆ ವಿಮೆಯ ರಕ್ಷಣೆ ಒದಗಿಸಲು ಕರ್ನಾಟಕ ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು-2024 ಜಾರಿಗೊಳಿಸಿ ರಾಜ್ಯ ಸರ್ಕಾರ 2024ರ ಜನವರಿ 10ರಂದು ಅಧಿಸೂಚನೆ ಹೊರಡಿಸಿದೆ.

Bar & Bench

ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಉದ್ಯೋಗಿಗಳ ಗ್ರಾಚ್ಯುಟಿ ಮೊತ್ತಕ್ಕೆ ವಿಮೆಯ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ 'ಕರ್ನಾಟಕ ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು-2024’ ಅನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.

ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಪ್ರಧಾನ ಕಾರ್ಯದರ್ಶಿ ವೀರೇಂದ್ರ ಎನ್‌.ಕಾಮತ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಪ್ರತಿವಾದಿಯಾದ ರಾಜ್ಯ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು. ವಕೀಲ ಬಿ ಕೆ ಪ್ರಶಾಂತ್ ವಕಾಲತ್ತು ವಹಿಸಿದ್ದಾರೆ.

ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಉದ್ಯೋಗಿಗಳ ಗ್ರಾಚ್ಯುಟಿ ಮೊತ್ತಕ್ಕೆ ವಿಮೆಯ ರಕ್ಷಣೆ ಒದಗಿಸಲು 'ಕರ್ನಾಟಕ ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು-2024' ಜಾರಿಗೊಳಿಸಿ ರಾಜ್ಯ ಸರ್ಕಾರ 2024ರ ಜನವರಿ 10ರಂದು ಅಧಿಸೂಚನೆ ಹೊರಡಿಸಿದೆ. ಅರ್ಜಿದಾರರು ಇದನ್ನು ಪ್ರಶ್ನಿಸಿದ್ದಾರೆ.

ಅಧಿಸೂಚನೆ ಜಾರಿಗೆ ಬಂದ 60 ದಿನಗಳಲ್ಲಿ ವಿಮೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂಬ ಸರ್ಕಾರದ ಗಡುವು ಸಂವಿಧಾನದ 14ನೇ ವಿಧಿಯ ಸ್ಪಷ್ಟ ಉಲ್ಲಂಘನೆ ಆಗಲಿದೆ. ಸರ್ಕಾರದ ಅಧಿಸೂಚನೆ ಕಾನೂನಾತ್ಮಕ ದೋಷಗಳಿಂದ ಕೂಡಿದ್ದು, ವಿವೇಕ ಬಳಸದೆ ಅದನ್ನು ಜಾರಿಗೆ ತರಲಾಗಿದೆ. ಏಕಾಏಕಿ ಸರ್ಕಾರದ ನಿಯಮಗಳನ್ನು ಅಳವಡಿಸಿಕೊಂಡರೆ ಅದು ಹೋಟೆಲ್‌ಗಳು ಹಾಗೂ ಇತರ ಕಿರು ಉದ್ಯೋಗದಾತರನ್ನು ಆರ್ಥಿಕ ಅಸ್ಥಿರತೆಗೆ ದೂಡಲಿದೆ. ಆದ್ದರಿಂದ, ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಲಾಗಿದೆ.