A1
ಸುದ್ದಿಗಳು

ತಾಜ್ ಮಹಲ್ ಸ್ಮಾರಕ ತೇಜೋ ಮಹಾಲಯವೇ ಎಂದು ತಿಳಿಯಲು ಸತ್ಯಶೋಧನಾ ಸಮಿತಿ ರಚಿಸಲು ಕೋರಿ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಮನವಿ

ತಾಜ್ ಮಹಲ್ ಒಳಗೆ ವಿಗ್ರಹಗಳು ಮತ್ತು ಶಾಸನಗಳಂತಹ ಪ್ರಮುಖ ಐತಿಹಾಸಿಕ ಪುರಾವೆಗಳನ್ನು ಶೋಧಿಸಲು ಸತ್ಯಶೋಧನಾ ಸಮಿತಿ ರಚಿಸಬೇಕೆಂದು ಅರ್ಜಿ ಕೋರಿದೆ.

Bar & Bench

ತಾಜ್ ಮಹಲ್ ಇತಿಹಾಸಕ್ಕೆ ಸಂಬಂಧಿಸಿದ ವಿವಾದಗಳನ್ನು ತಣ್ಣಗಾಗಿಸುವ ಸಲುವಾಗಿ ಅದರ ಆವರಣದೊಳಗಿನ 20ಕ್ಕೂ ಹೆಚ್ಚು ಕೊಠಡಿಗಳ ಬಾಗಿಲು ತೆರೆಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶನ ನೀಡುವಂತೆ ಕೋರಿ ಅಲಾಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದ ಮುಂದೆ ಅರ್ಜಿ ಸಲ್ಲಿಸಲಾಗಿದೆ [ಡಾ ರಜನೀಶ್ ಸಿಂಗ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಬಿಜೆಪಿಯ ಅಯೋಧ್ಯೆ ಘಟಕದ ಮಾಧ್ಯಮ ಉಸ್ತುವಾರಿ ಎಂದು ಹೇಳಿಕೊಂಡ ಡಾ ರಜನೀಶ್ ಸಿಂಗ್ ಎಂಬವರು ಸಲ್ಲಿಸಿರುವ ಅರ್ಜಿಯಲ್ಲಿ ಮೊಘಲ್ ಚಕ್ರವರ್ತಿ ಷಹಜಹಾನ್ ಆದೇಶದಂತೆ ತಾಜ್ ಮಹಲ್‌ನೊಳಗೆ ಅಡಗಿಸಿಟ್ಟಿದ್ದಾರೆ ಎಂದು ನಂಬಲಾದ ವಿಗ್ರಹಗಳು ಮತ್ತು ಶಾಸನಗಳಂತಹ ಪ್ರಮುಖ ಐತಿಹಾಸಿಕ ಪುರಾವೆಗಳ ಶೋಧಕ್ಕಾಗಿ ಸಮಿತಿ ರಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.

ವಕೀಲ ರುದ್ರ ವಿಕ್ರಮ್ ಸಿಂಗ್ ಮೂಲಕ ಸಲ್ಲಿಸಿದ ಮನವಿಯಲ್ಲಿ, ತಾಜ್ ಮಹಲ್ ಎಂಬುದು ತೇಜೋ ಮಹಾಲಯ ಎಂದು ಕರೆಯಲಾಗುವ ಹಳೆಯ ಶಿವ ದೇವಾಲಯ ಎಂಬುದಾಗಿ ಅನೇಕ ಹಿಂದೂ ಗುಂಪುಗಳು ಪ್ರತಿಪಾದಿಸುತ್ತಿದ್ದು ಇದನ್ನು ಅನೇಕ ಇತಿಹಾಸಕಾರರು ಸಹ ಬೆಂಬಲಿಸಿದ್ದಾರೆ ಎಂದು ವಿವರಿಸಲಾಗಿದೆ.

ಈ ರೀತಿಯ ಹಕ್ಕು ಪ್ರತಿಪಾದನೆಗಳು ಹಿಂದೂ- ಮುಸ್ಲಿಮರು ಪರಸ್ಪರ ಜಗಳವಾಡುವ ಪರಿಸ್ಥಿತಿ ತಂದೊಡ್ಡಿವೆ ಆದ್ದರಿಂದ ವಿವಾದಕ್ಕೆ ಇತಿಶ್ರೀ ಹಾಡಬೇಕಿದೆ ಎಂದು ಅರ್ಜಿ ಕೋರಿದೆ.

ಅರ್ಜಿಯ ಪ್ರಮುಖಾಂಶಗಳು

  • ತಾಜ್‌ ಮಹಲನ್ನು ಷಹಜಹಾನ್‌ ಪತ್ನಿ ಮುಮ್ತಾಜ್‌ ಮಹಲ್‌ ಹೆಸರಿನಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಆದರೆ ಅನೇಕ ಕೃತಿಗಳಲ್ಲಿ ಷಹಜಹಾನ್ ಅವರ ಹೆಂಡತಿಯ ಹೆಸರನ್ನು ಮುಮ್ತಾಜ್-ಉಲ್-ಜಮಾನಿ ಎಂದು ವಿವರಿಸಲಾಗಿದೆ. ಅಲ್ಲದೆ ಕಟ್ಟಡ ಪೂರ್ಣಗೊಳ್ಳಲು 22 ವರ್ಷಗಳಷ್ಟು ಸಮಯ ತೆಗೆದುಕೊಂಡಿದೆ ಎಂಬುದು ವಾಸ್ತವವನ್ನು ಮೀರಿದ್ದು, ಸಂಪೂರ್ಣ ಅಸಂಬದ್ಧವಾಗಿದೆ.

  • ಕ್ರಿ.ಶ. 1212ರಲ್ಲಿ ರಾಜಾ ಪರಮರ್ದಿ ದೇವ್ ತೇಜೋ ಮಹಾಲಯ ದೇವಾಲಯದ ಕಟ್ಟಡ (ಪ್ರಸ್ತುತ ತಾಜ್ ಮಹಲ್) ನಿರ್ಮಿಸಿದ ಎಂದು ಅನೇಕ ಇತಿಹಾಸ ಪುಸ್ತಕಗಳಲ್ಲಿದೆ. ಈ ದೇವಾಲಯವನ್ನು ನಂತರ ಜೈಪುರದ ಅಂದಿನ ಮಹಾರಾಜ ರಾಜ ಮಾನ್ ಸಿಂಗ್ ಆನುವಂಶಿಕವಾಗಿ ಪಡೆದರು. ಅವರ ನಂತರ, ಆಸ್ತಿಯನ್ನು ರಾಜಾ ಜೈ ಸಿಂಗ್ ವಹಿಸಿಕೊಂಡು ನಿಭಾಯಿಸಿದರು. ಆದರೆ ಷಹಜಹಾನ್ (1632 ರಲ್ಲಿ) ಇದನ್ನು ಸ್ವಾಧೀನಪಡಿಸಿಕೊಂಡರು. ನಂತರ ಅವರ ಪತ್ನಿಯ ಸ್ಮಾರಕವಾಗಿ ಪರಿವರ್ತಿಸಲಾಯಿತು.

  • ತಾಜ್‌ಮಹಲ್‌ನ ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ಮತ್ತು ಕೆಳಭಾಗದಲ್ಲಿ 22 ಕೊಠಡಿಗಳಿಗೆ ಶಾಶ್ವತವಾಗಿ ಬೀಗ ಹಾಕಲಾಗಿದೆ. ಪಿ ಎನ್‌ ಓಕ್‌ ರೀತಿಯ ಇತಿಹಾಸಕಾರರು ಮತ್ತು ಅನೇಕ ಹಿಂದೂ ಆರಾಧಕರು ಆ ಕೋಣೆಗಳಲ್ಲಿ ಶಿವನ ದೇವಾಲಯವಿದೆ ಎಂದು ನಂಬುತ್ತಾರೆ.

  • ತಾಜ್ ಮಹಲ್ ಪುರಾತನ ಸ್ಮಾರಕವಾಗಿರುವುದರಿಂದ ಮತ್ತು ಸ್ಮಾರಕದ ಸಂರಕ್ಷಣೆಗಾಗಿ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಲಾಗುತ್ತಿರುವುದರಿಂದ, ಸ್ಮಾರಕದ ಬಗ್ಗೆ ಸರಿಯಾದ ಮತ್ತು ಸಂಪೂರ್ಣ ಐತಿಹಾಸಿಕ ಸಂಗತಿಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಗೌರವಪೂರ್ವಕವಾಗಿ ಕೋರುತ್ತಿರುವುದಾಗಿ ಮನವಿಯಲ್ಲಿ ಹೇಳಲಾಗಿದೆ.