Waqf Amendment Act 
ಸುದ್ದಿಗಳು

ವಕ್ಫ್‌ ಆಸ್ತಿಗಳ ಕಡ್ಡಾಯ ಡಿಜಿಟಲ್‌ ನೋಂದಣಿ: ಉಮೀದ್‌ ಪೋರ್ಟಲ್‌ನ ದೋಷಗಳ ಬಗ್ಗೆ ಸುಪ್ರೀಂನಲ್ಲಿ ಅರ್ಜಿ

ಉಮೀದ್‌ ಪೋರ್ಟಲ್‌ನ ರಾಚನಿಕತೆಯೇ ದೋಷದಿಂದ ಕೂಡಿದ್ದು, ತಾಂತ್ರಿಕವಾಗಿ ಕಾರ್ಯನಿರ್ವಹಣಾಯೋಗ್ಯವಾಗಿಲ್ಲ. ಅಲ್ಲದೆ, ಕಾಯಿದೆಯ ಸ್ವರೂಪಕ್ಕೆ ಅನುಗುಣವಾಗಿ ಅದನ್ನು ರೂಪಿಸಲಾಗಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

Bar & Bench

ದೇಶದಲ್ಲಿರುವ ವಕ್ಫ್‌ ಆಸ್ತಿಗಳೆಲ್ಲವನ್ನೂ ʼಉಮೀದ್‌ʼ (ಏಕೀಕೃತ ವಕ್ಫ್‌ ನಿರ್ವಹಣೆ, ಬಲವರ್ಧನೆ, ದಕ್ಷತೆ ಮತ್ತು ಅಭಿವೃದ್ಧಿ) ಪೋರ್ಟಲ್‌ ಮೂಲಕ ಡಿಜಿಟಲ್‌ ನೋಂದಣಿ ಮಾಡಲು ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಆಕ್ಷೇಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದು ದಾಖಲಾಗಿದೆ.

ಮಧ್ಯಪ್ರದೇಶ ಮೂಲದ ಮುತಾವಲಿಯೊಬ್ಬರು (ವಕ್ಫ್‌ ಆಸ್ತಿಯನ್ನು ನಿರ್ವಹಿಸಲು ನೇಮಿಸಲಾದ ಓರ್ವ ಟ್ರಸ್ಟಿ) ಸಲ್ಲಿಸಿರುವ ಅರ್ಜಿಯು ವಕ್ಫ್‌ ಆಸ್ತಿಯನ್ನು ನೋಂದಣಿ ಮಾಡಲು ಉಮೀದ್‌ ವೇದಿಕೆಯಲ್ಲಿ ಎದುರಾಗುವ ಸಂಕಷ್ಟಗಳ ಕುರಿತು ಪಟ್ಟಿ ಮಾಡಿದೆ. ಉಮೀದ್‌ ಪೋರ್ಟಲ್‌ನ ರಾಚನಿಕತೆಯೇ ದೋಷದಿಂದ ಕೂಡಿದ್ದು, ತಾಂತ್ರಿಕವಾಗಿ ಕಾರ್ಯನಿರ್ವಹಣಾಯೋಗ್ಯವಾಗಿಲ್ಲ. ಅಲ್ಲದೆ, ಕಾಯಿದೆಯ ಸ್ವರೂಪಕ್ಕೆ ಅನುಗುಣವಾಗಿ ರೂಪಿತವಾಗಿಲ್ಲ ಎಂದು ಅರ್ಜಿಯು ಆಕ್ಷೇಪಿಸಿದೆ.

ಅರ್ಜಿಯು ವಕ್ಫ್‌ ಕಾಯಿದೆ -1995ರ ಸೆಕ್ಷನ್‌ 3ಬಿಯನ್ನು 2025ರ ತಿದ್ದುಪಡಿ ಕಾಯಿದೆ ಮೂಲಕ ಜಾರಿಗೊಳಿಸಲು ಮುಂದಾಗಿರುವುದನ್ನು ಪ್ರಶ್ನಿಸಿದೆ. ಇದರ ಅನ್ವಯ, ಅಸ್ತಿತ್ವದಲ್ಲಿರುವ ಎಲ್ಲ ವಕ್ಫ್‌ ಆಸ್ತಿಗಳನ್ನು ಉಮೀದ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ.

ಅಧಿಸೂಚಿಸಲಾದ ಉಮೀದ್‌ ನಿಯಮಾವಳಿ - 2025 "ಕಾಯಿದೆಯ ಉದ್ದೇಶವನ್ನು ತಾಂತ್ರಿಕವಾಗಿ ಈಡೇರಿಸುವ ಸಾಮರ್ಥ್ಯ ಹೊಂದಿಲ್ಲ" ಎಂದು ಅರ್ಜಿದಾರರು ಆಕ್ಷೇಪಿಸಿದ್ದು, ಇದು "ಕಾನೂನಿಗೆ ವಿರುದ್ಧವಾಗಿ ತಪ್ಪು ಘೋಷಣೆಯನ್ನು ಮಾಡಲು ಒತ್ತಾಯಿಸುತ್ತದೆ," ಎಂದಿದ್ದಾರೆ.

ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವೇ ತಿಳಿಸಿರುವಂತೆ ದೇಶದ 30 ರಾಜ್ಯಗಳ, 32 ವಕ್ಫ್‌ ಬೋರ್ಡ್‌ಗಳು ಸುಮಾರು 32 ಲಕ್ಷ ಎಕರೆಯಷ್ಟು ಭೂಮಿಯನ್ನು ಹೊಂದಿರುವ 8.72 ಲಕ್ಷ ವಕ್ಫ್‌ ಆಸ್ತಿಗಳನ್ನು ನಿರ್ವಹಿಸುತ್ತವೆ. ಆದಾಗ್ಯೂ, ನೋಂದಣಿಗೆ ನೀಡಲಾಗಿರುವ ಶಾಸನಾತ್ಮಕ ಗಡುವಿನ ಅವಧಿಯಾದ ಡಿ.5ರ ಒಳಗೆ ಕೇವಲ 20 ಪ್ರತಿಶತದಷ್ಟು ಆಸ್ತಿಗಳನ್ನು ಮಾತ್ರವೇ ಏಕೀಕೃತ ಪೋರ್ಟಲ್‌ನಲ್ಲಿ ಡಿಜಿಟಲ್‌ ನೋಂದಣಿ ಮಾಡಲು ಅಪ್‌ಲೋಡ್‌ ಮಾಡಲಾಗಿದೆ ಎಂದು ವಾಸ್ತವ ಸ್ಥಿತಿಗೆ ಅರ್ಜಿಯು ಕನ್ನಡಿ ಹಿಡಿದಿದೆ.

ಡಿಜಿಟಲ್‌ ನೋಂದಣಿಗೆ ಉಮೀದ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲು ಎದುರಾಗಿರುವ ತೊಡಕುಗಳನ್ನು ಅರ್ಜಿಯು ವಿವರಿಸಿದ್ದು, ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

ಮಧ್ಯಪ್ರದೇಶ ರಾಜ್ಯ ಒಂದರಲ್ಲಿಯೇ ಇರುವ ವಕ್ಫ್‌ ಆಸ್ತಿಗಳಲ್ಲಿ ಶೇ.99 ಆಸ್ತಿಗಳು ಸೆಕ್ಷನ್‌ 5ರ ಅಡಿ ಬರುವ ಸರ್ವೇ ಮಾಡಲಾದ/ಗೆಜೆಟ್‌ ಅಧಿಸೂಚಿತ ವಕ್ಫ್‌ ಆಸ್ತಿಗಳಾಗಿವೆಯೇ ಹೊರತು "ಬಳಕೆಯಿಂದಾದ ವಕ್ಫ್‌ ಆಸ್ತಿಗಳ" (ವಕ್ಫ್‌ ಬೈ ಯೂಸರ್‌) ವಿಭಾಗಕ್ಕೆ ಒಳಪಡುವುದಿಲ್ಲ. ಆದಾಗ್ಯೂ, ಈ ರೀತಿಯ ಸರ್ವೇ/ಗೆಜೆಟ್‌ ವಕ್ಫ್‌ ಆಸ್ತಿಗಳನ್ನು ನೋಂದಣಿ ಮಾಡಲು ಉಮೀದ್‌ ಪೋರ್ಟಲ್‌ನಲ್ಲಿ ಸೂಕ್ತ ವರ್ಗೀಕರಣವಿಲ್ಲ. ಇದು ಮುತಾವಲಿಗಳು ತಪ್ಪಾಗಿ, "ಬಳಕೆಯಿಂದಾದ ವಕ್ಫ್‌" ಅಥವಾ "ಸಮರ್ಪಣೆ" (ಡೆಡಿಕೇಷನ್‌) ಎನ್ನುವ ವರ್ಗೀಕರಣವನ್ನು ಆಯ್ಕೆ ಮಾಡಿಕೊಳ್ಳಲು ಒತ್ತಾಯಿಸುತ್ತದೆ.

ಹಾಗಾಗಿ, ದಾಖಲೆಗಳನ್ನು ತಪ್ಪಾಗಿ ನಮೂದಿಸದ ಹೊರತು ಕಾನೂನಾತ್ಮಕ ಅನುಪಾಲನೆಯನ್ನು ಮಾಡಲಾಗದು.

ಉಮೀದ್‌ ಪೋರ್ಟಲ್‌ ಆರಂಭದಿಂದಲೂ ತಾಂತ್ರಿಕ ಅಡಚಣೆಗಳನ್ನು ಎದುರಿಸುತ್ತಿದೆ. ಸಿಸ್ಟಂ ಕ್ರ್ಯಾಷ್‌ ಆಗುವುದು, ವರ್ಕ್‌ಫ್ಲೋ ಸಮಸ್ಯೆಗಳು ಸಾಮಾನ್ಯವಾಗಿವೆ. ಅನೇಕ ಜಿಲ್ಲೆಗಳ ಹಾಗೂ ಗ್ರಾಮಗಳ ಹೆಸರುಗಳು ಕಾಣೆಯಾಗಿವೆ. ಸೂಕ್ತ ಭೂ ದಾಖಲೆಗಳನ್ನು ಸಹ ಪೋರ್ಟಲ್‌ ಸ್ವೀಕರಿಸದೆ ಇರುವಂತಹ ಸಮಸ್ಯೆಗಳು ಪ್ರಮುಖವಾಗಿವೆ.

ವಿಶೇಷವಾಗಿ, ಮಧ್ಯಪ್ರದೇಶದ ವಿಚಾರವನ್ನು ಗಮನಿಸುವುದಾದರೆ, ರಾಜ್ಯದಲ್ಲಿ ನೀಡಲಾಗುವು ಭೂ ದಾಖಲೆ ನಮೂನೆಗಳನ್ನು, ಉದಾಹರಣೆಗೆ ಬಹು-ಖಸ್ರಾ ಒಡೆತನ ಮತ್ತು ದಶಮಾನ ನೋಂದಣಿಗಳನ್ನು ಪೋರ್ಟಲ್‌ ತಿರಸ್ಕರಿಸುತ್ತದೆ. ಇದರಿಂದ ನಿಖರ ದತ್ತಾಂಶ ನೀಡುವುದು ಅಸಾಧ್ಯವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಇಂತಹ ರಾಚನಿಕ ದೋಷಗಳಿಂದಾಗಿ ಉಂಟಾಗುವ ತೊಂದರೆಗಳಿಗೆ ಮುತಾವಲಿಗಳನ್ನು ಶಿಕ್ಷಿಸುವುದು ಸಂವಿಧಾನದ ವಿಧಿಗಳಾದ 14, 21, 25, 26 ಮತ್ತು 300ಎಗಳ ಉಲ್ಲಂಘನೆಯಾಗಿದೆ. ಸೂಕ್ತ ಪ್ರಕ್ರಿಯೆಯನ್ನು ಪಾಲಿಸದ ಕಾರಣಕ್ಕೆ ಇದು ಮುತಾವಲಿಗಳ ಹಕ್ಕನ್ನು ಮೊಟಕುಗೊಳಿಸುತ್ತದೆ ಎಂದು ಅರ್ಜಿಯು ಹೇಳಿದೆ.

ಕೇಂದ್ರ ಸರ್ಕಾರವೇ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ, ಡಿಜಿಟಲ್‌ ನೋಂದಣಿಯ ಕಳಪೆ ಅನುಪಾಲನೆಯ ಬಗ್ಗೆ ಬೆರಳು ಮಾಡಿದೆ. ಇದರ ಅನ್ವಯ ಉತ್ತರ ಪ್ರದೇಶದಲ್ಲಿ ಶೇ.35ರಷ್ಟು ವಕ್ಫ್‌ ಆಸ್ತಿಗಳು ಉಮೀದ್‌ನಲ್ಲಿ ನೋಂದಣಿಯಾಗಿದ್ದರೆ, ಈ ಪ್ರಮಾಣ ಪಶ್ಚಿಮ ಬಂಗಾಳ ರಾಜ್ಯದಲಿ ಶೇ. 12 ಇದೆ. ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಶೇ.10 ಮಾತ್ರವೇ ಇದೆ ಎಂದು ಅರ್ಜಿಯು ಬೆರಳು ಮಾಡಿದೆ.

ಅಲ್ಲದೆ, 2025ರ ವಕ್ಫ್‌ ತಿದ್ದುಪಡಿ ಕಾಯಿದೆಯ ಸೆಕ್ಷನ್‌ 3ಬಿ, 36 ಮತ್ತು 61ಅನ್ನು ಸಾಂವಿಧಾನಿಕವಾಗಿ ಸುಪ್ರೀಂ ಕೋರ್ಟ್‌ ಮುಂದೆ ಪ್ರಶ್ನಿಸಿರುವಾಗಲೇ ಅದನ್ನು ಕೇಂದ್ರ ಸಚಿವಾಲಯವು ಹೇರಲು ಮುಂದಾಗಿರುವ ಔಚಿತ್ಯವನ್ನು ಅರ್ಜಿಯು ಪ್ರಶ್ನಿಸಿದೆ.

ಉಮೀದ್‌ ಪೋರ್ಟಲ್‌ನಲ್ಲಿ ಇರುವ ರಾಚನಿಕ ದೋಷಗಳನ್ನು ಸರಿಪಡಿಸಲು ಸೂಕ್ತ ನಿರ್ದೇಶನಗಳನ್ನು ಕೇಂದ್ರ ಸರ್ಕಾರ ಹಾಗೂ ಕೇಂದ್ರ ವಕ್ಫ್‌ ಸಮಿತಿಗೆ ನೀಡುವಂತೆ ಅರ್ಜಿಯು ಆಗ್ರಹಿಸಿದೆ. ಅಲ್ಲದೆ, ಇಂತಹ ರಾಚನಿಕ ದೋಷಗಳ ಕಾರಣಕ್ಕಾಗಿ ನಿಯಮಗಳ ಅನುಪಾಲನೆ ಸಾಧ್ಯವಾಗದಿರುವುದಕ್ಕೆ ನೀಡಲಾಗುವ ಶಿಕ್ಷೆಯಿಂದ ರಕ್ಷಣೆಯನ್ನು ಒದಗಿಸುವಂತೆ ಕೋರಲಾಗಿದೆ.