ಸಂವಿಧಾನದ ವಿಧಿ 19(1)(ಜಿ) ಅಡಿ ಲಭ್ಯವಾಗಿರುವ ಯಾವುದೇ ವೃತ್ತಿಯನ್ನು ಕೈಗೊಳ್ಳುವ ಹಕ್ಕು ನಿಯಂತ್ರಣ ಕ್ರಮಗಳು ಹಾಗೂ ವೃತ್ತಿ ಗುಣಮಟ್ಟದ ಕಾನೂನುಗಳಿಗೆ ಒಳಪಟ್ಟಿರುತ್ತವೆ. ವೈದ್ಯಕೀಯ ವೃತ್ತಿ ಕೈಗೊಳ್ಳುವವರ ವೃತ್ತಿ ಗುಣಮಟ್ಟದಲ್ಲಿ ರಾಜಿಯಾಗುವುದು ಸಾಧ್ಯವೇ ಇಲ್ಲ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ [ಅಶ್ವಿನಿ ಉಪಾಧ್ಯಾಯ ವರ್ಸಸ್ ಭಾರತ ಸರ್ಕಾರ ಮತ್ತಿತರರು].
ಅಲೋಪತಿ, ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ ಮತ್ತಿತರ ಔಷಧೀಯ ಪದ್ಧತಿಗಳನ್ನು ಸಂಯೋಜಿಸುವಂತೆ ಹಾಗೂ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಏಕರೂಪದ ಪಠ್ಯಕ್ರಮವನ್ನು ಅಳವಡಿಸುವಂತೆ ಬಿಜೆಪಿ ನಾಯಕ, ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರುವ ಅಫಿಡವಿಟ್ ಸಲ್ಲಿಸಿದೆ.
"... ವೃತ್ತಿಯ ಕುರಿತಾದ ಹಕ್ಕಿನ ಬಳಕೆಯು ವೃತ್ತಿ ಅರ್ಹತೆ ಮತ್ತು ವೃತ್ತಿ ನಡತೆಯ ಕುರಿತಾದ ನಿಯಂತ್ರಣ ಕ್ರಮಗಳಿಗೆ ಅನುಗುಣವಾಗಿ ಇದ್ದು, ಇದನ್ನು ವೈದ್ಯ ವೃತ್ತಿ ಪಾಲಿಸುವವರನ್ನು ಮಾತ್ರವೇ ಗಮನದಲ್ಲಿಸಿರಿಕೊಂಡು ರೂಪಿಸಿಲ್ಲ ಬದಲಿಗೆ ಜೀವಿಸುವ ಹಾಗೂ ಸೂಕ್ತ ಚಿಕಿತ್ಸೆಯನ್ನು ಪಡೆಯುವ ಹಕ್ಕನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗಿದೆ; ವೈದ್ಯಕೀಯ ವೃತ್ತಿಯನ್ನು ಕೈಗೊಳ್ಳುವವರ ವೃತ್ತಿಯ ಗುಣಮಟ್ಟದಲ್ಲಿ ರಾಜಿಯಾಗುವುದು ಸಾಧ್ಯವೇ ಇಲ್ಲ," ಎಂದು ಕೇಂದ್ರವು ಹೇಳಿದೆ.
ಪ್ರಸ್ತುತ ಭಾರತದಲ್ಲಿ ಪ್ರಾಕ್ಟೀಸ್ ಮಾಡಲಾಗುತ್ತಿರುವ 'ವಸಾಹತುಶಾಹಿ ಕಾಲದ ಪ್ರತ್ಯೇಕಿತ ವಿಧಾನ'ದ ಬದಲಿಗೆ 'ಅಖಂಡ ಭಾರತೀಯ ಸಂಯೋಜಿತ ಔಷಧೀಯ ವಿಧಾನ ಅಳವಡಿಸಿಕೊಳ್ಳಬೇಕೆನ್ನುವುದು ಅರ್ಜಿದಾರ ಉಪಾಧ್ಯಾಯ ಅವರ ಕೋರಿಕೆಯಾಗಿದೆ.
ವಿವಿಧ ವೈದ್ಯಕೀಯ ಪದ್ಧತಿಗಳ ಸಂಯೋಜನೆಯ ಬಗ್ಗೆ, ವೈದ್ಯಕೀಯ ಕಾಲೇಜುಗಳಲ್ಲಿ ಏಕರೂಪ ಪಠ್ಯಕ್ರಮ ಅಳವಡಿಸುವ ಬಗ್ಗೆ ಕೇಂದ್ರವು ತನ್ನ ನಿಲುವನ್ನು ಅಫಿಡವಿಟ್‌ನಲ್ಲಿ ತಿಳಿಸಿಲ್ಲವಾದರೂ ಅಲೋಪತಿ, ಹೋಮಿಯೋಪತಿ ಹಾಗೂ ಭಾರತೀಯ ವೈದ್ಯಕೀಯ ಪದ್ಧತಿಗಳಿಗೆ ಅನ್ವಯಿಸುವಂತೆ ಪ್ರತ್ಯೇಕವಾದ ವಿವಿಧ ಕಾನೂನುಗಳಿವೆ ಎಂದು ತಿಳಿಸಿದೆ.
ಮುಂದುವರೆದು ಕೇಂದ್ರವು ತನ್ನ ಅಫಿಡವಿಟ್‌ನಲ್ಲಿ, "ಎಲ್ಲವನ್ನೂ ಒಳಗೊಳ್ಳುವ, ಕೈಗೆಟುಕುವ, ಸಾಕ್ಷ್ಯಾಧಾರಗಳಿಂದ ರೂಪಿತವಾದ ಆರೋಗ್ಯ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಸಮಗ್ರ, ಸಂಯೋಜಿತ ವೈದ್ಯಕೀಯ ನೀತಿಯನ್ನು ರೂಪಿಸಲು ನೀತಿ ಆಯೋಗದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಭಾಗವು ಸಮಿತಿಯೊಂದನ್ನು ರಚಿಸಿದೆ" ಎಂದು ತಿಳಿಸಿದೆ.
ಸಮಿತಿಯು ಶಿಕ್ಷಣ, ಸಂಶೋಧನೆ ಮತ್ತು ಕ್ಲಿನಿಕಲ್ ಅಭ್ಯಾಸಗಳ ಮೂಲಕ ಸಂಯೋಜಿತ ವೈದ್ಯಕೀಯ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಶಿಫಾರಸ್ಸುಗಳನ್ನೂ ಸಹ ಮಾಡಲಿದೆ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.