Supreme Court of India 
ಸುದ್ದಿಗಳು

ಎಸ್‌ಸಿ, ಎಸ್‌ಟಿ ವಕೀಲರಿಗೆ ಮೀಸಲಾತಿ ವಿಚಾರ ಗಂಭೀರವಾದುದು; ಜಾತಿ, ಧರ್ಮದ ಆಧಾರದಲ್ಲಿ ವಿಭಜನೆ ಸಲ್ಲ: ಸುಪ್ರೀಂ

ಫೆಬ್ರವರಿ 16ರಂದು ನಡೆಯಲಿರುವ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಲು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯದ ವಕೀಲರಿಗೆ ಮೀಸಲಾತಿ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.

Bar & Bench

ವಕೀಲರ ಸಂಘಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಕೀಲರಿಗೆ ಮೀಸಲಾತಿ ನೀಡುವ ವಿಚಾರವು ಗಂಭೀರವಾದದ್ದು ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ಹೇಳಿದೆ.

ಅಖಿಲ ಭಾರತ ಹಿಂದುಳಿದ ವರ್ಗಗಳ ವಕೀಲರ ಒಕ್ಕೂಟ ಮತ್ತು ಕರ್ನಾಟಕ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ವಕೀಲರ ಒಕ್ಕೂಟ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಥಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಎನ್‌ ಕೋಟೇಶ್ವರ್‌ ಸಿಂಗ್‌ ಅವರ ವಿಭಾಗೀಯ ಪೀಠ ನಡೆಸಿತು.

Justice Surya Kant and Justice N Kotiswar Singh

“ವಿಚಾರವು ಗಂಭೀರವಾಗಿದ್ದು, ಅದನ್ನು ಪರಿಹರಿಸಲಾಗುವುದು. ಆದರೆ, ವಕೀಲರ ಸಂಘಗಳಲ್ಲಿ ವೈವಿಧ್ಯತೆ ಮಹತ್ವವಾಗಿದ್ದು, ಸಂಘವನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜಸಲ್ಪಡುವ ರಾಜಕೀಯ ವೇದಿಕೆಯಾಗಲು ಅವಕಾಶ ನೀಡಲಾಗದು ಎಂಬ ವಿಚಾರವನ್ನು ಸ್ಪಷ್ಟಪಡಿಸುತ್ತೇವೆ” ಎಂದು ಪೀಠ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಮಾಧವಿ ದಿವಾನ್‌ ಅವರು “ಬೆಂಗಳೂರು ವಕೀಲರ ಸಂಘದ ಆಡಳಿತ ಮಂಡಳಿಯಲ್ಲಿ ಕಳೆದ ಐವತ್ತು ವರ್ಷಗಳಲ್ಲಿ ಒಬ್ಬೇ ಒಬ್ಬರು ಎಸ್‌ಸಿ, ಎಸ್‌ಟಿ ಸಮುದಾಯದ ವಕೀಲರು ಸ್ಥಾನ ಪಡೆದಿಲ್ಲ. ಇದು ಗಂಭೀರ ವಿಚಾರವಾಗಿದ್ದು, ಇದು ಪ್ರವೇಶಿಕೆಯ ಪ್ರಶ್ನೆಯಾಗಿದೆ” ಎಂದರು.

ಅರ್ಜಿ ವಿಚಾರಣೆಯ ಆರಂಭದಲ್ಲಿ ಪೀಠವು “ಇದು ಗಂಭೀರ ಪರಿಣಾಮಗಳಿಗೆ ಕಾರಣವಾಗುವುದರಿಂದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗದು. ಕೇಂದ್ರ ಸರ್ಕಾರ ಮೀಸಲಾತಿ ಕಲ್ಪಿಸುವಾಗ ತಜ್ಞರ ವರದಿಯನ್ನು ಅದು ಆಧರಿಸುತ್ತದೆ. ನಗರ ಪ್ರದೇಶಗಳಲ್ಲಿ ಮಹಿಳಾ ವಕೀಲರ ಉಪಸ್ಥಿತಿಯನ್ನು ಪರಿಗಣಿಸಿದ್ದೇವೆ. ಈ ಪ್ರಕರಣದಲ್ಲಿ ದೇಶಾದ್ಯಂತ ಯಾರೆಲ್ಲಾ ಅವಕಾಶ ವಂಚಿತರು ಎಂಬುದನ್ನು ಪತ್ತೆಹಚ್ಚಲು ದತ್ತಾಂಶ ಸಂಗ್ರಹಿಸಲು ಸಮಿತಿಯನ್ನು ನೇಮಿಸಬೇಕಾಗುತ್ತದೆ. ಈಗ ದತ್ತಾಂಶ ಇಲ್ಲಿದಿರುವುದರಿಂದ ಅದು ಸಾಧ್ಯವಿಲ್ಲ” ಎಂದಿತು.

ಇದಕ್ಕೆ ಮಾಧವಿ ಅವರು “ಬಹುಮುಖ್ಯವಾಗಿ ವೃತ್ತಿಯಲ್ಲಿ ಆದರ್ಶವಾಗುವಂಥವರು ಬೇಕಿದ್ದಾರೆ. ವೈವಿಧ್ಯತೆ ಮಹತ್ವದ ಪರಿಗಣನೆಯಾಗಿದ್ದು, ಈ ಪಟ್ಟಿಗೆ ಅವರನ್ನು ಸೇರಿಸಬೇಕಿದೆ. ಹಲವು ವರ್ಷಗಳಿಂದ ಆ ಸಮುದಾಯಗಳಿಗೆ ಪ್ರಾತಿಧನಿಕತ್ವವೇ ಇಲ್ಲ” ಎಂದರು.

Madhavi Divan

ಆಗ ಪೀಠವು “ಹೆಚ್ಚು ಅರ್ಹರಾಗಿಲ್ಲದವರನ್ನೂ ಒಳಗೊಂಡಂತೆ ಸಂಸದರು, ಶಾಸಕರೂ ಸೇರಿದಂತೆ ದೇಶದಲ್ಲಿ ಕಾನೂನು ಕ್ಷೇತ್ರದಲ್ಲಿ ಸೂಕ್ತ ಪ್ರಾತಿನಿಧ್ಯವಿಲ್ಲದಿರುವುದರ ಬಗ್ಗೆ ಎಲ್ಲರೂ ಗಮನ ಹೊಂದಿದ್ದಾರೆ ಎಂಬ ಖಾತರಿಯನ್ನು ನಿಮಗೆ ನೀಡಬಲ್ಲೆವು” ಎಂದಿತು.

ಅಂತಿಮವಾಗಿ ವಕೀಲರ ಸಂಘಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣದ ಜೊತೆ ಈ ಅರ್ಜಿಯ ವಿಚಾರಣೆಯನ್ನೂ ನಡೆಸಲಾಗುವುದು ಎಂದು ಪೀಠವು ವಿಚಾರಣೆಯನ್ನು ಫೆಬ್ರವರಿ 17ಕ್ಕೆ ಮುಂದೂಡಿತು.

ಈಚೆಗೆ ಕರ್ನಾಟಕ ಹೈಕೋರ್ಟ್‌ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವಕೀಲರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಮೀಸಲಾತಿ ಕಲ್ಪಿಸುವ ವಿಚಾರದ ಸಂಬಂಧ ಆದೇಶ ಮಾಡುವ ಅಧಿಕಾರ ತನಗಿಲ್ಲ ಎಂದು ಅರ್ಜಿಗಳನ್ನು ಇತ್ಯರ್ಥಪಡಿಸಿತ್ತು.