Supreme Court, Jammu and Kashmir 
ಸುದ್ದಿಗಳು

ಜಮ್ಮು ಕಾಶ್ಮೀರಕ್ಕೆ ಮರಳಿ ರಾಜ್ಯದ ಸ್ಥಾನಮಾನ: ಸುಪ್ರೀಂ ಕೋರ್ಟ್‌ಗೆ ಅರ್ಜಿ

ರಾಜ್ಯದ ಸ್ಥಾನಮಾನ ಮರುಸ್ಥಾಪಿಸುವ ಮೊದಲೇ ಶಾಸಕಾಂಗ ಸಭೆ ರಚಿಸಲು ಹೊರಡುವುದು ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯನ್ನು ಉಲ್ಲಂಘಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Bar & Bench

ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಪಡೆಯುವುದು ಅರ್ಥಹೀನವಾಗಿರುವುದರಿಂದ ಕಾಲಮಿತಿಯೊಳಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ರಾಜ್ಯದ ಸ್ಥಾನಮಾನ  ಮರುಸ್ಥಾಪಿಸದೇ ಇರುವುದರಿಂದ ಕಾಶ್ಮೀರದ ಜನರ ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ ಎಂದು ಕಾಲೇಜು ಅಧ್ಯಾಪಕ ಜಹೂರ್ ಅಹ್ಮದ್ ಭಟ್ ಮತ್ತು ಸಾಮಾಜಿಕ ಕಾರ್ಯಕರ್ತ ಖುರ್ಷಾಯಿದ್ ಅಹ್ಮದ್ ಮಲಿಕ್ ಅವರು ಸಲ್ಲಿಸಿರುವ ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ರಾಜ್ಯದ ಸ್ಥಾನಮಾನ ಮರುಸ್ಥಾಪಿಸುವ ಮೊದಲೇ ಶಾಸಕಾಂಗ ಸಭೆ ರಚಿಸಲು ಹೊರಡುವುದು ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯನ್ನು ಉಲ್ಲಂಘಿಸುತ್ತದೆ ಎಂದು ಅಡ್ವೊಕೇಟ್ ಆನ್ ರೆಕಾರ್ಡ್ ಸೊಯೀಬ್ ಖುರೇಸಿ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ತಿಳಿಸಲಾಗಿದೆ.

ಅರ್ಜಿಯ ಪ್ರಮುಖಾಂಶಗಳು

ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆ ಶಾಂತಿಯುತವಾಗಿ ನಡೆದಿರುವುದರಿಂದ, ಕಾಲಮಿತಿಯೊಳಗೆ ರಾಜ್ಯದ ಸ್ಥಾನಮಾನ ನೀಡಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದರೆ ಭದ್ರತಾ ಆತಂಕ ಇರದು ಅರ್ಜಿಯಲ್ಲಿ ತಿಳಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸುವುದರಿಂದ ಇವೆರಡೂ ಪ್ರದೇಶಗಳ  ಚುನಾಯಿತ ಪ್ರಜಾಪ್ರಭುತ್ವ ಸರ್ಕಾರಕ್ಕೆ ಕಡಿಮೆ ವ್ಯಾಪ್ತಿ ದೊರೆತಿದೆ.   

ಭಾರತ ಒಕ್ಕೂಟದೊಂದಿಗೆ ಕಣಿವೆ ರಾಜ್ಯ ಯಾವಾಗಲೂ  ಒಕ್ಕೂಟ ಸಂಬಂಧವನ್ನು ಹೊಂದಿದ್ದು ಹೀಗಾಗಿ ರಾಜ್ಯದ ಸ್ಥಾನಮಾನ ನೀಡುವುದು ಅತ್ಯಂತ ಮಹತ್ವದ್ದಾಗಿದೆ. ಇದರಿಂದ ಎರಡೂ ಪ್ರದೇಶಗಳು ವೈಯಕ್ತಿಕ ಅಸ್ಮಿತೆಯಲ್ಲಿ ಸ್ವಾಯತ್ತತೆಯನ್ನು ಆನಂದಿಸಬಹುದಾಗಿದ್ದು ದೇಶದ ಒಟ್ಟಾರೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯವಾಗುತ್ತದೆ ಎಂದು ವಿವರಿಸಲಾಗಿದೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿ ಎತ್ತಿ ಹಿಡಿದಿದ್ದ ತೀರ್ಪಿನ ಸೂಕ್ತತೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯನ್ನು ಕಳೆದ ಮೇನಲ್ಲಿ ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು. 370ನೇ ವಿಧಿ ತಾತ್ಕಾಲಿಕ ನಿಬಂಧನೆಯಷ್ಟೇ ಎಂದು ಅದು ಆಗ ಹೇಳಿತ್ತು.

ವಿವಾದಾತ್ಮಕವಾಗಿ, 370ನೇ ವಿಧಿ ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಎರಡು  ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ದಾರಿ ಮಾಡಿಕೊಟ್ಟ 2019ರ ಕಾಯಿದೆಯ ಸಿಂಧುತ್ವ ನಿರ್ಧರಿಸಲು ಸಾಂವಿಧಾನಿಕ ಪೀಠ ನಿರಾಕರಿಸಿತ್ತು.