ಸುದ್ದಿಗಳು

ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯ ವಸ್ತ್ರ ಸಂಹಿತೆ ಜಾರಿಗೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ

Bar & Bench

ದೇಶದ ಎಲ್ಲಾ ನೋಂದಾಯಿತ ಮತ್ತ ಸರ್ಕಾರದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಸಾಮಾನ್ಯ ವಸ್ತ್ರ ಸಂಹಿತೆ ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಕರ್ನಾಟಕದ ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಕ್ಕೆ ಸಂಬಂಧಿಸಿದ ಪ್ರಕರಣಗಳು ರಾಜ್ಯ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ನಡುವೆಯೇ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರ ಪುತ್ರ ನಿಖಿಲ್ ಉಪಾಧ್ಯಾಯ ಅವರು ಮನವಿ ಸಲ್ಲಿಸಿದ್ದಾರೆ.

ಮನವಿಯ ಪ್ರಮುಖ ಅಂಶಗಳು

  • ಸಾಮಾಜಿಕ ಸಮಾನತೆ, ಘನತೆಯಿಂದ ಬದುಕುವ ಭರವಸೆ, ಭ್ರಾತೃತ್ವ , ಏಕತೆ ಮತ್ತು ರಾಷ್ಟ್ರೀಯ ಸಮಗ್ರತೆಯನ್ನು ಉತ್ತೇಜಿಸಲು ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯ ವಸ್ತ್ರ ಸಂಹಿತೆ ಅತ್ಯಗತ್ಯ.

  • ಅಲ್ಲದೆ ಜಾತಿವಾದ, ಕೋಮುವಾದ, ವರ್ಗವ್ಯವಸ್ಥೆ, ತೀವ್ರವಾದ, ಪ್ರತ್ಯೇಕತಾವಾದ ಹಾಗೂ ಮೂಲಭೂತವಾದದ ದೊಡ್ಡ ಬೆದರಿಕೆಯನ್ನು ಶಮನಗೊಳಿಸಲು ಕೂಡ ಇದು ಅಗತ್ಯ.

  • ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್, ಸಿಂಗಪುರ ಹಾಗೂ ಚೀನಾದಂತಹ ದೇಶಗಳಲ್ಲಿ ಆಗಾಗ್ಗೆ ಎದುರಾಗುವ ಸವಾಲುಗಳ ಹೊರತಾಗಿಯೂ ಎಲ್ಲಾ ಶಾಲಾ ಕಾಲೇಜುಗಳು ಸಾಮಾನ್ಯ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿವೆ.

  • ಸಮೀಕ್ಷೆಯೊಂದರ ಪ್ರಕಾರ, 2018 ರಲ್ಲಿ ಶಾಲಾಕಾಲೇಜುಗಳಲ್ಲಿ ಸುಮಾರು 2,50,000 ಬಂದೂಕುಗಳನ್ನು ತೆಗೆದುಕೊಂಡುಬರಲಾಗಿತ್ತು. ಹೀಗಾಗಿ ವಿದ್ಯಾರ್ಥಿಗಳ ಸೊಂಟದ ಪಟ್ಟಿ ಕಾಣಿಸುವಂತಹ ಸಾಮಾನ್ಯ ವಸ್ತ್ರ ಸಂಹಿತೆ ಜಾರಿಗೊಳಿಸುವುದರಿಂದ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟುಕೊಳ್ಳುವ ಭೀತಿ ದೂರವಾಗುತ್ತದೆ.

  • ಸಾಮಾನ್ಯ ವಸ್ತ್ರ ಸಂಹಿತೆ ಎಂಬುದು ಹಿಂಸೆಯನ್ನು ಶಮನಗೊಳಿಸುವುದು ಮಾತ್ರವಲ್ಲ ಹೆಚ್ಚು ಧನಾತ್ಮಕ ಶೈಕ್ಷಣಿಕ ವಾತಾವರಣವನ್ನು ಉತ್ತೇಜಿಸುತ್ತದೆ

  • ಸಾಮಾಜಿಕ-ಆರ್ಥಿಕ ವ್ಯತ್ಯಾಸಗಳಿಂದ ಉಂಟಾಗುವ ಇತರ ರೀತಿಯ ಹಿಂಸಾಚಾರಗಳನ್ನು ಕೂಡ ಇದು ಕಡಿಮೆ ಮಾಡುತ್ತದೆ. ಪ್ರತಿ ವಿದ್ಯಾರ್ಥಿ ತುಲನಾತ್ಮಕವಾಗಿ ಒಂದೇ ರೀತಿ ಕಾಣುವುದನ್ನು ಖಚಿತಪಡಿಸುತ್ತದೆ, ಇದು ಶಾಲೆಗಳಲ್ಲಿ ಆಕ್ರಮಣಕಾರಿ ಪ್ರವೃತ್ತಿಯನ್ನು ಕಡಿಮೆ ಮಾಡುತ್ತದೆ.