Supreme Court and Covid vaccine  
ಸುದ್ದಿಗಳು

ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮ ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

Bar & Bench

ಕೋವಿಡ್‌ ನಿಯಂತ್ರಣಕ್ಕಾಗಿ ಭಾರತದಲ್ಲಿ ನೀಡಲಾದ ಎರಡು ಲಸಿಕೆಗಳಲ್ಲಿ ಒಂದಾದ ಆಸ್ಟ್ರಾಜೆನೆಕಾ ತಯಾರಿಸಿರುವ ಕೋವಿಶೀಲ್ಡ್‌ ಲಸಿಕೆಯ ಸಂಭವನೀಯ ಅಡ್ಡ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದಂತೆ ಅಪರೂಪಕ್ಕೆ ಅಡ್ಡಪರಿಣಾಮ ಬೀರುವ ಸಾಮರ್ಥ್ಯ ಕೋವಿಶೀಲ್ಡ್‌ಗೆ ಇದೆ ಎಂದು ಅದನ್ನು ತಯಾರಿಸಿರುವ ಆಸ್ಟ್ರಾಜೆನೆಕಾ ಲಂಡನ್‌ನ ನ್ಯಾಯಾಲಯದೆದುರು ಒಪ್ಪಿಕೊಂಡ ಹಿನ್ನೆಲೆಯಲ್ಲಿ ವಿಶಾಲ್‌ ತಿವಾರಿ ಎಂಬುವವರು ಅರ್ಜಿ ದಾಖಲಿಸಿದ್ದಾರೆ.  

ತಾನು ತಯಾರಿಸಿದ ಲಸಿಕೆ ಪಡೆದವರಲ್ಲಿ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್‌ನೊಂದಿಗೆ (ಟಿಟಿಎಸ್) ಅಂದರೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್‌ ಸಂಖ್ಯೆ ಇಳಿಕೆ ಸಮಸ್ಯೆ ಎದುರಾಗಲಿದೆ ಎಂಬುದನ್ನು ಆಸ್ಟ್ರಾಜೆನೆಕಾ ಒಪ್ಪಿಕೊಂಡಿದೆ ಎಂಬುದಾಗಿ ಅರ್ಜಿ ವಿವರಿಸಿದೆ.

ಕೋವಿಶೀಲ್ಡ್‌ನ ಅಡ್ಡಪರಿಣಾಮಗಳು ಮತ್ತು ಅದರ ಅಪಾಯಕಾರಿ ಅಂಶಗಳನ್ನು ಪರೀಕ್ಷಿಸಲು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ತಜ್ಞರನ್ನೊಳಗೊಂಡ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯ ವೈದ್ಯಕೀಯ ತಜ್ಞರ ಸಮಿತಿಯನ್ನು ಸರ್ವೋಚ್ಚ ನ್ಯಾಯಾಲಯ ರಚಿಸಬೇಕು ಎಂದು ಮನವಿ ಮಾಡಲಾಗಿದೆ.

ಭಾರತೀಯ ನಾಗರಿಕರ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಸರ್ಕಾರ ಈ ಸಮಸ್ಯೆಗೆ ಆದ್ಯತೆಯಿಂದ ಬಗೆಹರಿಸಿದರೆ ಭವಿಷ್ಯದಲ್ಲಿ ಭಾರತೀಯರ ಆರೋಗ್ಯ ಮತ್ತು ಜೀವನಕ್ಕೆ ಅಪಾಯ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಕೋವಿಡ್ ಲಸಿಕೆಯಿಂದ ತೀವ್ರವಾಗಿ ಅಂಗವಿಕಲರಾದ ಅಥವಾ ಸಾವನ್ನಪ್ಪಿದ ನಾಗರಿಕರಿಗೆ ಪರಿಹಾರ ನೀಡಲು ಲಸಿಕೆ ಹಾನಿ ಪಾವತಿ ವ್ಯವಸ್ಥೆ ರೂಪಿಸಲು ನ್ಯಾಯಾಲಯ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಕೋವಿಡ್‌ ಲಸಿಕೆ ಅಡ್ಡಪರಿಣಾಮದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ನೀಡುವುದಕ್ಕಾಗಿ ಮಾರ್ಗಸೂಚಿ ರೂಪಿಸುವಂತೆ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಆಗಸ್ಟ್ 2022 ರಲ್ಲಿ, ಕೇರಳ ಹೈಕೋರ್ಟ್ ಸೂಚಿಸಿತ್ತು.

ಕೋವಿಡ್‌‌ ಲಸಿಕೆಯ ಕಡ್ಡಾಯ ಪಡೆಯುವಿಕೆ ಮತ್ತು ಅಡ್ಡ ಪರಿಣಾಮಗಳ ಕುರಿತಂತೆ ಲಸಿಕೆಯ ದುಷ್ಪರಿಣಾಮಗಳಿಂದಾಗಿ ಸಾವನ್ನಪ್ಪಿದ ಇಬ್ಬರು ಯುವತಿಯರ ಪೋಷಕರು ಸಲ್ಲಿಸಿದ್ದ ಅರ್ಜಿಯನ್ನು ನವೆಂಬರ್ 2022 ರಲ್ಲಿ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿತ್ತು. ಆಗ  ಅಡ್ಡ ಪರಿಣಾಮಗಳಿಂದ ಸಾವನ್ನಪಿದವರಿಗೆ ಪರಿಹಾರ ನೀಡಲು ತನ್ನನ್ನು ಹೊಣೆಗಾರನನ್ನಾಗಿ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತು. 

ಕಂಪೆನಿಗಳು ತಯಾರಿಸಿದ ಲಸಿಕೆಗಳು ಯಶಸ್ವಿಯಾಗಿ ನಿಯಂತ್ರಣಾ ಪರಿಶೀಲನೆಗೆ ಒಳಪಟ್ಟಿದ್ದು ಪರಿಹಾರ ನೀಡಲು ಸರ್ಕಾರವನ್ನು ನೇರವಾಗಿ ಹೊಣೆ ಮಾಡುವುದು "ಕಾನೂನುಬದ್ಧವಾಗಿ ಸಮರ್ಥನೀಯವಲ್ಲ" ಎಂದು ಸರ್ಕಾರ ಹೇಳಿತ್ತು.