PM Cares Fund with Delhi HC  
ಸುದ್ದಿಗಳು

ಸರ್ಕಾರವೇ ನಡೆಸಿದರೂ ಪಿಎಂ ಕೇರ್ಸ್ ನಿಧಿಗೆ ಆರ್‌ಟಿಐ ಅಡಿ ಗೌಪ್ಯತೆಯ ಹಕ್ಕು ಇದೆ: ದೆಹಲಿ ಹೈಕೋರ್ಟ್

ಆರ್‌ಟಿಐ ಕಾಯಿದೆಯಡಿ ಸಾರ್ವಜನಿಕ ಅಥವಾ ಖಾಸಗಿ ಟ್ರಸ್ಟ್ಗಳ ಗೌಪ್ಯತೆಯ ಹಕ್ಕುಗಳಲ್ಲಿ ಯಾವುದೇ ಭೇದ ಇರಬಾರದು ಎಂದು ನ್ಯಾಯಾಲಯ ಹೇಳಿದೆ.

Bar & Bench

ಪಿಎಂ ಕೇರ್ಸ್ ನಿಧಿಯನ್ನು ಸರ್ಕಾರ ನಡೆಸುತ್ತಿದ್ದರೂ ಅಥವಾ ನಿಯಂತ್ರಿಸುತ್ತಿದ್ದರೂ ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ ಕಾಯಿದೆ) ಅಡಿಯಲ್ಲಿ ಗೌಪ್ಯತೆಯ ಹಕ್ಕನ್ನು ಕಳೆದುಕೊಳ್ಳುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಹೇಳಿದೆ [ಗಿರೀಶ್ ಮಿತ್ತಲ್ ಮತ್ತು ಸಿಪಿಐಒ ಉಪ ಆಯುಕ್ತ ಆದಾಯ ತೆರಿಗೆ ನಡುವಣ ಪ್ರಕರಣ] .

ಸಂವಿಧಾನದ ವಿಧಿ 21ನೇ ಅಡಿಯ ಗೌಪ್ಯತೆ ಹಕ್ಕಿನ ಬಗೆಗೆ ಮತನಾಡುತ್ತಿಲ್ಲ. ಬದಲಿಗೆ ವೈಯಕ್ತಿಕ ಮಾಹಿತಿಯ ಬಹಿರಂಗಪಡಿಸುವಿಕೆ ನಿರ್ಬಂಧಿಸುವ ಆರ್‌ಟಿಐ ಕಾಯಿದೆಯ 8(1)(ಜೆ) ಸೆಕ್ಷನ್ ಅಡಿಯಲ್ಲಿ ಮೂರನೇ ವ್ಯಕ್ತಿಗಳಿಗೆ ಲಭ್ಯವಿರುವ ಹಕ್ಕಿನ ಕುರಿತು ತಾನು ಮಾತನಾಡುತ್ತಿರುವುದಾಗಿ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರು ತೇಜಸ್ ಕಾರಿಯಾ ನೇತೃತ್ವದ ವಿಭಾಗೀಯ ಪೀಠ ಸ್ಪಷ್ಟಪಡಿಸಿತು.

“ಸರ್ಕಾರವೇ ನಡೆಸುತ್ತಿದ್ದರೂ ಕೇವಲ ಸರ್ಕಾರಿ ಸಂಸ್ಥೆ ಎಂಬ ಕಾರಣಕ್ಕೆ ಗೌಪ್ಯತೆ ಹಕ್ಕು ಕಳೆದುಕೊಳ್ಳುತ್ತದೆಯೆ? ಅದು ಕಳೆದುಕೊಳ್ಳುತ್ತದೆ ಎಂದು ನೀವು ಹೇಗೆ ಹೇಳುತ್ತೀರಿ?  ಕೇವಲ ಸಾರ್ವಜನಿಕ ಸಂಸ್ಥೆ ಎಂಬ ಕಾರಣಕ್ಕೆ ಅದಕ್ಕೆ ನೀಡಲಾದ ಗೌಪ್ಯತೆ ಹಕ್ಕನ್ನು ನಿರಾಕರಿಸಲು ಸಾಧ್ಯವೇ?” ಎಂದು ನ್ಯಾಯಾಲಯ ಪ್ರಶ್ನಿಸಿತು.

ಆರ್‌ಟಿಐ ಕಾಯಿದೆ ಮೂರನೇ ಪಕ್ಷಕಾರರ ಮಾಹಿತಿಯನ್ನು ನೀಡುವುದನ್ನು ನಿರ್ಬಂಧಿಸುತ್ತದೆ ಮತ್ತು ಕಾಯಿದೆಯ ಅಡಿಯಲ್ಲಿ ಸಾರ್ವಜನಿಕ ಅಥವಾ ಖಾಸಗಿ ಟ್ರಸ್ಟ್‌ಗಳ ಗೌಪ್ಯತೆಯ ಹಕ್ಕುಗಳಲ್ಲಿ ಯಾವುದೇ ಭೇದವಿರಬಾರದು ಎಂದು ಪೀಠ ನುಡಿಯಿತು.

ಒಂದು ಸೊಸೈಟಿ ಅಥವಾ ಟ್ರಸ್ಟ್ ನಡೆಸುವ ಶಾಲೆ ಅಥವಾ ಫುಟ್‌ಬಾಲ್‌ ಕ್ಲಬ್  ಇದೆ ಎಂದಿಟ್ಟುಕೊಳ್ಳೋಣ. ಆ ಸೊಸೈಟಿಗೂ ಆರ್‌ಟಿಐ ಕಾಯಿದೆಯ ಅಡಿಯಲ್ಲಿ ಗೌಪ್ಯತೆ ಹಕ್ಕು ಇರಬಹುದೇ? ಯಾವುದೇ ನೋಟಿಸ್ ನೀಡದೆ ಆ ಮಾಹಿತಿಯನ್ನು ನೀವು ಪಡೆಯಬಹುದೆ? ಆರ್‌ಟಿಐ ಕಾಯಿದೆಯ ಮೂರನೇ ಪಕ್ಷಕಾರರ ಹಕ್ಕುಗಳ ಕುರಿತು ಮೂರನೇ ಪಕ್ಷಕಾರರ ನಡುವಿನ ಭೇದ ಉಂಟು ಮಾಡಲಾಗದು. ಅದು ಖಾಸಗಿ ವ್ಯಕ್ತಿ, ಟ್ರಸ್ಟ್, ಸಂಸ್ಥೆ, ಸಮಾಜ ಅಥವಾ ಸಹಕಾರ ಸಂಘವೇ ಆಗಿರಲಿ, ಸಾರ್ವಜನಿಕವೇ ಆಗಿರಲಿ ಅಥವಾ ಖಾಸಗಿಯೇ ಇರಲಿ ಭೇದ ಎಣಿಸಲಾಗದು.,” ಎಂದು ನ್ಯಾಯಾಲಯ ಒತ್ತಿ ಹೇಳಿತು.

ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 10ಕ್ಕೆ ನಿಗದಿಯಾಗಿದ್ದು ಅಂದು ಹೆಚ್ಚುವರಿ ಅಟಾರ್ನಿ ಜನರಲ್ ಎನ್. ವೆಂಕಟರಮನ್ ಆದಾಯ ತೆರಿಗೆ ಇಲಾಖೆಯ ಪರವಾಗಿ ವಾದ ಮಂಡಿಸಲಿದ್ದಾರೆ.