A1
ಸುದ್ದಿಗಳು

ಪ್ರಧಾನಿ ಮೋದಿ ಪದವಿ ವಿವಾದ: ಸಮನ್ಸ್ ಪ್ರಶ್ನಿಸಿ ಗುಜರಾತ್ ಹೈಕೋರ್ಟ್ ಮೊರೆ ಹೋದ ಕೇಜ್ರಿವಾಲ್, ಸಂಸದ ಸಂಜಯ್ ಸಿಂಗ್

ಈ ಇಬ್ಬರಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಸಮನ್ಸ್‌ಗೆ ಸೆಷನ್ಸ್ ನ್ಯಾಯಾಲಯ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ಪ್ರಕರಣವನ್ನು ನ್ಯಾ. ದವೆ ಶುಕ್ರವಾರ ಆಲಿಸುವ ಸಾಧ್ಯತೆಯಿದೆ.

Bar & Bench

ನರೇಂದ್ರ ಮೋದಿಯವರ ಶೈಕ್ಷಣಿಕ ಪದವಿಗೆ ಸಂಬಂಧಿಸಿದಂತೆ ಗುಜರಾತ್ ವಿಶ್ವವಿದ್ಯಾಲಯವನ್ನು ಅಪಮಾನಿಸಿದ ಆರೋಪದ ಮೇಲೆ ಹೂಡಲಾದ ಮಾನನಷ್ಟ ಮೊಕದ್ದಮೆಯಲ್ಲಿ ತಮ್ಮ ವಿರುದ್ಧದ ವಿಚಾರಣೆಗೆ ತಡೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಂಸದ ಸಂಜಯ್ ಸಿಂಗ್ ಅವರು ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಸಮೀರ್ ದವೆ ಅವರು ಶುಕ್ರವಾರ ಮನವಿ ಆಲಿಸುವ ಸಾಧ್ಯತೆಯಿದೆ. ಮ್ಯಾಜಿಸ್ಟ್ರೇಟ್‌ ಅವರು ನೀಡಿದ ಸಮನ್ಸ್‌ ಪ್ರಶ್ನಿಸಿ ತಾವು ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯ ತೀರ್ಪು ಹೊರಬರುವವರೆಗಾದರೂ ಅಹಮದಾಬಾದ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗೆ ತಡೆ ನೀಡುವಂತೆ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರು ಕೋರಿದ್ದಾರೆ.  

ಈ ಹಿಂದೆ ಇಬ್ಬರಿಗೂ ಸಮನ್ಸ್‌ ಜಾರಿ ಮಾಡಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶರು ಆಗಸ್ಟ್ 11ರಂದು ಹಾಜರಾಗುವಂತೆ ಸೂಚಿಸಿದ್ದರು. ಇದನ್ನು ಈ ಇಬ್ಬರೂ ರಾಜಕಾರಣಿಗಳು ಸೆಷನ್ಸ್‌ ನ್ಯಾಯಾಲಯದೆದುರು ಪ್ರಶ್ನಿಸಿದ್ದರು. ಆದರೆ ಮನವಿಯನ್ನು‌ ಆಗಸ್ಟ್‌ 5ರಂದು ವಿಚಾರಣೆ ನಡೆಸಿದ್ದ ಸೆಷನ್ಸ್‌ ನ್ಯಾಯಾಲಯ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತು. ಹೀಗಾಗಿ ಕೇಜ್ರಿವಾಲ್‌ ಮತ್ತು ಸಿಂಗ್‌ ಹೈಕೋರ್ಟ್‌ ಮೊರೆ ಹೋದರು.

ಪ್ರಧಾನಿ ನರೇಂದ್ರ ಮೋದಿ ಅವರ ಪದವಿಗೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ಈ ಇಬ್ಬರಿಗೂ ನೀಡದೇ ಇದ್ದ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಮತ್ತು ಸಂಜಯ್‌ ಸಿಂಗ್‌ ತನಗೆ ಮಾನಹಾನಿ ಉಂಟು ಮಾಡಿದ್ದಾರೆ ಎಂದು ಗುಜರಾತ್‌ ವಿಶ್ವವಿದ್ಯಾಲಯ ಮೊಕದ್ದಮೆ ಹೂಡಿತ್ತು.

ಈ ವರ್ಷ ಏಪ್ರಿಲ್ 17ರಂದು ಹೊರಡಿಸಿದ ಆದೇಶದಲ್ಲಿ, ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಜಯೇಶ್‌ಭಾಯ್ ಚೋವಾಟಿಯಾ ಅವರು ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ನೀಡಿದ ಹೇಳಿಕೆಗಳು ಮೇಲ್ನೋಟಕ್ಕೆ ಮಾನಹಾನಿಕರವಾಗಿವೆ ಎಂದು ಹೇಳಿದ್ದರು.