ಸುದ್ದಿಗಳು

ಮೋದಿ ಪದವಿ ವಿವಾದ: ಸಮನ್ಸ್ ಪ್ರಶ್ನಿಸಿದ್ದ ಕೇಜ್ರಿವಾಲ್ ಅರ್ಜಿ ಕುರಿತಂತೆ ಆದೇಶ ಕಾಯ್ದಿರಿಸಿದ ಗುಜರಾತ್ ನ್ಯಾಯಾಲಯ

ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ಅವರ ಹೇಳಿಕೆಗಳು ಮಾನಹಾನಿ ಉಂಟುಮಾಡುವಂತಿವೆ ಎಂದು ಈ ವರ್ಷ ಏಪ್ರಿಲ್ 17ರಂದು ಸಮನ್ಸ್ ಜಾರಿ ಮಾಡುವಾಗ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜಯೇಶ್‌ಭಾಯ್‌ ಶಾ ಚೋವಾಟಿಯಾ ಅವರು ಹೇಳಿದ್ದರು.

Bar & Bench

ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಪದವಿಗೆ ಸಂಬಂಧೀಸಿದಂತೆ ಮಾನಹಾನಿಕರ ಹೇಳಿಕೆಗಳಿ ನೀಡಿದ್ದಕ್ಕಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಮ್ಮ ವಿರುದ್ಧ ಹೊರಡಿಸಿದ್ದ ಸಮನ್ಸ್ ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಂಸದ ಸಂಜಯ್ ಸಿಂಗ್ ಅವರು ಸಲ್ಲಿಸಿದ ಮರುಪರಿಶೀಲನಾ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಅಹಮದಾಬಾದ್‌ನ ಸೆಷನ್ಸ್ ನ್ಯಾಯಾಲಯ ಶುಕ್ರವಾರ ಕಾಯ್ದಿರಿಸಿದೆ [ಅರವಿಂದ್ ಕೇಜ್ರಿವಾಲ್ ಮತ್ತು ಪಿಯೂಷ್ ಪಟೇಲ್ ನಡುವಣ ಪ್ರಕರಣ].

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜೆ ಎಂ ಬ್ರಹ್ಮಭಟ್ ಅವರು ಸೆಪ್ಟೆಂಬರ್ 14ರಂದು ಆದೇಶ ಪ್ರಕಟಿಸುವ ಸಾಧ್ಯತೆಯಿದೆ. ಪ್ರಧಾನಿ ಮೋದಿಯವರ ಪದವಿ ಕುರಿತ ಮಾಹಿತಿಯನ್ನು ಬಹಿರಂಗಪಡಿಸದಿದ್ದಕ್ಕಾಗಿ ತನ್ನ ಘನತೆಯನ್ನು ಕುಂದಿಸುವಂತಹ ಹೇಳಿಕೆ ನೀಡಿದ ಆರೋಪದ ಮೆಲೆ ಕೇಜ್ರಿವಾಲ್ ಮತ್ತು ಸಿಂಗ್ ವಿರುದ್ಧ ಗುಜರಾತ್ ವಿಶ್ವವಿದ್ಯಾಲಯ ಮಾನನಷ್ಟ ಮೊಕದ್ದಮೆ ಹೂಡಿತ್ತು.

ವಿಶ್ವವಿದ್ಯಾಲಯದ ದೂರಿನ ಆಧಾರದ ಮೇಲೆ, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈ ವರ್ಷದ ಏಪ್ರಿಲ್‌ನಲ್ಲಿ ಇಬ್ಬರು ರಾಜಕಾರಣಿಗಳ ವಿರುದ್ಧ ಸಮನ್ಸ್ ಜಾರಿ ಮಾಡಿತ್ತು.

ಈ ವರ್ಷ ಏಪ್ರಿಲ್ 17 ರಂದು ಹೊರಡಿಸಿದ ಆದೇಶದಲ್ಲಿ, ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜಯೇಶ್‌ಭಾಯ್ ಚೋವಾಟಿಯಾ ಅವರು ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ನೀಡಿದ ಹೇಳಿಕೆಗಳು ಮೇಲ್ನೋಟಕ್ಕೆ ಮಾನಹಾನಿ ಉಂಟುಮಾಡುವಂತಿವೆ ಎಂದು ಹೇಳಿದ್ದರು.

ಪೆನ್ ಡ್ರೈವ್‌ನಲ್ಲಿ ಹಂಚಿಕೊಂಡಿರುವ ಮೌಖಿಕ ಮತ್ತು ಡಿಜಿಟಲ್ ಸಾಕ್ಷ್ಯವನ್ನು ಗಣನೆಗೆ ತೆಗೆದುಕೊಂಡಿದ್ದ ನ್ಯಾಯಾಧೀಶರು ಈ ಆದೇಶ ನೀಡಿದ್ದರು. ಕೇಜ್ರಿವಾಲ್ ಅವರು ವಿಶ್ವವಿದ್ಯಾಲಯದ ಕುರಿತು ಮಾಡಿರುವ ಟ್ವೀಟ್‌ಗಳು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ ಹೈಕೋರ್ಟ್‌ ನೀಡಿದ್ದ ತೀರ್ಪಿನ ನಂತರ ಅವರು ಮಾಡಿದ್ದ ಭಾಷಣಗಳ ಮಾಹಿತಿ ಪೆನ್‌ಡ್ರೈವ್‌ನಲ್ಲಿತ್ತು.