PM Modi  
ಸುದ್ದಿಗಳು

ಪ್ರಧಾನಿ ಮೋದಿ ನಕಲಿ ವಿಡಿಯೋ ಪ್ರಕರಣ: ಕಾಂಗ್ರೆಸ್ ನಾಯಕ ಅರುಣ್‌ ಕುಮಾರ್‌ಗೆ ದೆಹಲಿ ಕೋರ್ಟ್ ಜಾಮೀನು

ವಿಚಾರಣೆಗಾಗಿ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡುವಂತೆ ಸರ್ಕಾರ ಮಾಡಿದ ಮನವಿಯನ್ನು ನ್ಯಾಯಾಧೀಶ ಆಕಾಂಕ್ಷಾ ಗರ್ಗ್ ತಿರಸ್ಕರಿಸಿದರು.

Bar & Bench

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕುರಿತಾದ ನಕಲಿ ವಿಡಿಯೋ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಅರುಣ್ ಕುಮಾರ್ ಬೆರೆಡ್ಡಿ ಅವರಿಗೆ ದೆಹಲಿ ನ್ಯಾಯಾಲಯ ಜೂನ್ 19 ರಂದು ಜಾಮೀನು ಮಂಜೂರು ಮಾಡಿದೆ.

ವಿಚಾರಣೆಗಾಗಿ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡುವಂತೆ ಸರ್ಕಾರ ಮಾಡಿದ ಮನವಿಯನ್ನು ನ್ಯಾಯಾಧೀಶರಾದ ಆಕಾಂಕ್ಷಾ ಗರ್ಗ್ ತಿರಸ್ಕರಿಸಿದರು. 

ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ಸೂಚಿಸಿದಂತೆ ಸೂಕ್ತ ನೋಟಿಸ್ ನೀಡದ ಕಾರಣ ಬಂಧನ ಕಾನೂನುಬಾಹಿರವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ ಆರೋಪಿಯನ್ನು ಪೊಲೀಸ್‌ ಕಸ್ಟಡಿಗೆ ಕೋರಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಆರೋಪಿಯಿಂದ ₹50,000 ಮೊತ್ತದ ವೈಯಕ್ತಿಕ ಬಾಂಡ್‌ ಪಡೆದು ಜಾಮೀನು ನೀಡಬಹುದಾಗಿದೆ ಎಂದು ಹೇಳಿತು.

ಬೆರೆಡ್ಡಿ ಅವರನ್ನು ಜೂನ್ 18ರ ರಾತ್ರಿ ದೆಹಲಿ ಪೊಲೀಸರು ಬಂಧಿಸಿದ್ದರು. ನಂತರ ಮೂರು ದಿನಗಳ ಕಾಲ ಪೊಲೀಸ್‌ ವಶಕ್ಕೆ ನೀಡುವಂತೆ ಕೋರಲಾಗಿತ್ತು.

ಪ್ರಧಾನಿ ಮೋದಿಯವರ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ಬೆರೆಡ್ಡಿ ಅವರು ನಕಲಿ, ಮಾರ್ಫ್‌ ಮಾಡಿದ ಮತ್ತು ತಪ್ಪು ಮಾಹಿತಿಯುಕ್ತ ಫೋಟೋಗಳನ್ನು ಪ್ರಕಟಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.

ಇದಲ್ಲದೆ, ಬೆರೆಡ್ಡಿ ಅವರ ನಡೆ ಸಶಸ್ತ್ರ/ಕೇಂದ್ರ ಪಡೆಗಳಲ್ಲಿ ನಿಯೋಜಿಸಲಾದ ಮಹಿಳೆಯರ ನೈತಿಕತೆಯ ಮೇಲೆ ಪ್ರಭಾವ ಬೀರಿದ್ದಲ್ಲದೆ ಇತರ ದೇಶಗಳೊಂದಿಗಿನ ಸ್ನೇಹ ಸಂಬಂಧಗಳ ಮೇಲೆ ಪರಿಣಾಮ ಬೀರಿತು ಎಂದು ವಾದಿಸಲಾಯಿತು. ಪ್ರಕಟಣೆಯ ಮೂಲದ ಬಗ್ಗೆ ನಿರಂತರ ವಿಚಾರಣೆಯ ಹೊರತಾಗಿಯೂ ಬೆರೆಡ್ಡಿ ಪ್ರಮುಖ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ವಾದಿಸಲಾಯಿತು.

ಆದರೆ, ಬೆರೆಡ್ಡಿ ಪರ ವಕೀಲರು ಇದನ್ನು ಅಲ್ಲಗಳೆದರು. ಬೆರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮದ ರಾಷ್ಟ್ರೀಯ ಸಂಯೋಜಕರಾಗಿರುವುದರಿಂದ ಅವರ ಬಂಧನ ರಾಜಕೀಯ ದ್ವೇಷದ ಫಲಶ್ರುತಿ ಎಂದು ವಾದಿಸಿದರು.

ಇದಲ್ಲದೆ, ಈ ಪ್ರಕಟಣೆಗಳು ಹಳೆಯವಾಗಿದ್ದು ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ವಕೀಲರು ಹೇಳಿದರು.

ಬೆರೆಡ್ಡಿ ಅವರು ಮತ್ತೊಂದು ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಠಾಣೆಗೆ ಬಂದಾಗ ಈ ಪ್ರಕರಣದಡಿ ಬಂಧಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಈ ಪ್ರಕರಣದಲ್ಲಿ ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ಕೇವಲ ಔಪಚಾರಿಕವಾಗಿ ನೋಟಿಸ್‌ ನೀಡಲಾಗಿದ್ದು ಇದನ್ನು ಈ ಸೆಕ್ಷನ್‌ನ್‌ ಅನ್ವಯ ಅಕ್ಷರಶಃ ಪಾಲಿಸಿಲ್ಲ ಎಂದು ತಿಳಿಸಲಾಯಿತು.