ಎರಡು ದಿನಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಂಜಾಬ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಸಂಭವಿಸಿತ್ತು ಎನ್ನಲಾದ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಲು ಮತ್ತು ಸುರಕ್ಷಿತವಾಗಿಡಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ರಕ್ಷಣಾ ವೈಫಲ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ನಿಗಾದಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ನೇತೃತ್ವದ ತ್ರಿಸದಸ್ಯ ಪೀಠವು ನಡೆಸಿತು.
“ಪಂಜಾಬ್ ಪೊಲೀಸ್ ಅಧಿಕಾರಿಗಳು, ಕೇಂದ್ರದ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ಮತ್ತು ಕೇಂದ್ರ ಹಾಗೂ ರಾಜ್ಯಗಳ ಸಂಬಂಧಪಟ್ಟ ಸಂಸ್ಥೆಗಳು ದಾಖಲೆ ಸಂಗ್ರಹಿಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಸಹಕರಿಸಬೇಕು. ಈ ಎಲ್ಲಾ ದಾಖಲೆಗಳನ್ನು ಅತ್ಯಂತ ಜಾಗರೂಕತೆಯಿಂದ ರಿಜಿಸ್ಟ್ರಾರ್ ಜನರಲ್ ರಕ್ಷಿಸಿಡಬೇಕು” ಎಂದು ಪೀಠವು ಆದೇಶ ಮಾಡಿದೆ.
ರಿಜಿಸ್ಟ್ರಾಲ್ ಜನರಲ್ ಅವರ ಜೊತೆ ಸಮನ್ವಯಕ್ಕಾಗಿ ಚಂಡೀಗಢ ಪೊಲೀಸ್ ಮಹಾನಿರ್ದೇಶಕರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಯನ್ನು ನೋಡಲ್ ಅಧಿಕಾರಿಗಳನ್ನಾಗಿ ನ್ಯಾಯಾಲಯವು ನೇಮಕ ಮಾಡಲು ಆದೇಶಿಸಿದೆ.
“ಘಟನೆಯ ತನಿಖೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೇಮಕ ಮಾಡಿರುವ ಸಮಿತಿಗಳು ಸೋಮವಾರದವರೆಗೆ ಕಾರ್ಯಾಚರಣೆ ನಡೆಸಬಾರದು” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು “ಭಾರತದ ಪ್ರಧಾನ ಮಂತ್ರಿಗೆ ರಕ್ಷಣೆ ನೀಡಲು ಸ್ಥಾಪಿಸಲಾಗಿರುವ ವಿಶೇಷ ರಕ್ಷಣಾ ಪಡೆಯ (ಎಸ್‌ಪಿಜಿ) ನಿರ್ದೇಶಕರು ಅಥವಾ ಎಸ್‌ಪಿಜಿಯ ಯಾವುದೇ ಅಧಿಕಾರಿಯ ಸೂಚನೆಯ ಅನ್ವಯ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು ಕಾರ್ಯನಿರ್ವಹಿಸುವುದು ಎಸ್‌ಪಿಜಿ (ತಿದ್ದುಪಡಿ) ಕಾಯಿದೆ 2019ರ ಅಡಿ ಕರ್ತವ್ಯವಾಗಿದೆ. ಪಂಜಾಬ್ ಪ್ರವಾಸ ಸಂದರ್ಭದಲ್ಲಿ ಪ್ರಧಾನಿಯವರ ಭದ್ರತಾ ಬಳಗವನ್ನು (ಕಾವಲ್‌ಕೇಡ್) ಅನುಮತಿಯಿಲ್ಲದೇ ತಡೆದು ನಿಲ್ಲಿಸಿದ್ದು, ನಿಯಮಗಳ ಉಲ್ಲಂಘನೆಯಾಗಿದೆ. ಇದು ನಡೆಯಬಾರದು” ಎಂದರು.
“ಪಂಜಾಬ್ ಸರ್ಕಾರವು ಮೆಹ್ತಾಬ್ ಸಿಂಗ್ ಗಿಲ್ ನೇತೃತ್ವದಲ್ಲಿ ತನಿಖಾ ಸಂಸ್ಥೆ ರಚಿಸಿದೆ. ಸಮಿತಿಯ ಮುಖ್ಯಸ್ಥ ಗಿಲ್ ಅವರು ಸೇವಾ ಸಂಬಂಧಿ ಬೃಹತ್ ಹಗರಣವೊಂದರಲ್ಲಿ ಭಾಗಿಯಾಗಿದ್ದರು. ಈ ನ್ಯಾಯಮೂರ್ತಿಗಳ ನಡತೆಯ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ. ಈ ನ್ಯಾಯಮೂರ್ತಿಗಳು ತಮ್ಮ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿಯನ್ನು ಗುರಿಯಾಗಿಸಿಕೊಂಡಿದ್ದರು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಹೀಗಾಗಿ, ಇಂಥ ಪ್ರಕರಣಗಳನ್ನು ಹೇಗೆ ನಿಭಾಯಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಾರ್ಗಸೂಚಿ ರೂಪಿಸಬೇಕು” ಎಂದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಪ್ರಧಾನಿಯವರು ರಸ್ತೆ ಮಾರ್ಗದಲ್ಲಿ ಸಂಚರಿಸುವಾಗ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ರಸ್ತೆಯನ್ನು ಪರಿಶೀಲಿಸುತ್ತಾರೆ. ಇಲ್ಲಿ ಪೊಲೀಸ್ ಮಹಾನಿರ್ದೇಶಕರು ಸಮ್ಮತಿಸಿದ್ದಾರೆ. ಪ್ರಧಾನಿ ಕಾರಿಗಿಂತ ಮುಂದೆ ವಾರ್ನಿಂಗ್ ಕಾರ್ (ಎಚ್ಚರಿಕೆ ವಾಹನ) ಇರುತ್ತದೆ. ಇದು ರಸ್ತೆ ಮಾರ್ಗದ ಮುನ್ಸೂಚನೆ ನೀಡುತ್ತದೆ. ಆಗ ಕಾವಲ್‌ಕೇಡ್ ಅನ್ನು ನಿಲ್ಲಿಸಬಹುದಾಗಿದೆ. ಆದರೆ, ಇಲ್ಲಿ ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿಯು ಪ್ರತಿಭಟನಾಕಾರರ ಜೊತೆ ನಿಂತು ಟೀ ಕುಡಿಯುತ್ತಿದ್ದುದನ್ನು ಕಾಣಬಹುದಾಗಿದೆ. ವಾರ್ನಿಂಗ್ ಕಾರ್‌ಗೆ ಮಾಹಿತಿ ನೀಡಿಲ್ಲ” ಎಂದರು.
“ಸಿಖ್ ಫಾರ್ ಜಸ್ಟೀಸ್ ಎಂಬ ಸಂಘಟನೆಯು ಜನರಿಗೆ ಗಂಭೀರ ಕೃತ್ಯ ಎಸಗಲು ಕರೆ ನೀಡಿತ್ತು. ಇದು ಗಡಿಯಾಚೆಗಿನ ಭಯೋತ್ಪಾದನೆಗೆ ಸಂಬಂಧಿಸಿದ ವಿಚಾರವಾಗಿದೆ. ಹೀಗಾಗಿ, ಈ ಪ್ರಕರಣವನ್ನು ಸುಮ್ಮನೇ ಬಿಡಲಾಗದು. ಜಿಲ್ಲಾ ನ್ಯಾಯಾಧೀಶರು ಮತ್ತು ಎನ್‌ಐಎ ಅಧಿಕಾರಿಯನ್ನು ಒಳಗೊಂಡ ತನಿಖೆಗೆ ಆದೇಶಿಸಬೇಕು. ದೇಶದ ಪ್ರಧಾನಿಗೆ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟು ಮಾಡುವ ಘಟನೆಯಾಗಿದೆ. ಎಲ್ಲಾ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಆದೇಶ ಮಾಡಬೇಕು. ಸರ್ವೋಚ್ಚ ನ್ಯಾಯಾಲಯದಿಂದ ಸಂದೇಶ ರವಾನೆಯಾಗಬೇಕಿದ್ದು, ಮುಂದೆ ಈ ರೀತಿಯ ಘಟನೆ ಮರುಕಳಿಸಬಾರದು” ಎಂದರು.
ಪಂಜಾಬ್ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಡಿ ಎಸ್ ಪಟ್ವಾಲಿಯಾ ಅವರು “ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಘಟನೆ ನಡೆದ ದಿನವೇ ತನಿಖೆಗೆ ಸಮಿತಿ ರಚಿಸಲಾಗಿದೆ. ಈ ಕುರಿತು ಎಫ್‌ಐಆರ್ ಸಹ ದಾಖಲಿಸಲಾಗಿದೆ. ಪ್ರಧಾನಿ ಮೋದಿ ಅವರು ನಮ್ಮ ಪ್ರಧಾನಿ ಎಂದು ನಮ್ಮ ಮುಖ್ಯಮಂತ್ರಿ ಹೇಳಿದ್ದಾರೆ. ಮನವಿಯಲ್ಲಿ ರಾಜಕೀಯ ವಾಸನೆಯಿದ್ದರೂ ನಾವು ಅದಕ್ಕೆ ತಕರಾರು ಎತ್ತುವುದಿಲ್ಲ” ಎಂದರು.
“ಸಮಿತಿಯ ನೇತೃತ್ವ ವಹಿಸಿರುವ ನ್ಯಾಯಮೂರ್ತಿ ವಿರುದ್ಧ ಆರೋಪಗಳಿವೆ ಎಂದು ಆಕ್ಷೇಪಿಸುವುದಾದರೆ ಆ ಕುರಿತು ನಾವು ವಾದಿಸಲಾಗದು... ಕೇಂದ್ರದ ಸಮಿತಿಯಲ್ಲಿ ಎಸ್‌ಪಿಜಿಯ ಐಜಿ ಅವರು ಸಹ ಸದಸ್ಯರಾಗಿದ್ದು, ಅವರೂ ಸಹ ಘಟನೆಗೆ ಜವಾಬ್ದಾರರಾಗಿದ್ದಾರೆ, ತಮ್ಮದೇ ಪ್ರಕರಣದಲ್ಲಿ ತಾವೇ ತೀರ್ಮಾನಿಸಲಾಗದು" ಎಂದು ವಾದಿಸಿದರು.
ಆಗ ಎಸ್‌ಜಿ ಮೆಹ್ತಾ ಅವರು ಎಸ್‌ಪಿಜಿ ಮಹಾನಿರ್ದೇಶಕರ ಬದಲಿಗೆ ಗೃಹ ಇಲಾಖೆಯ ಕಾರ್ಯದರ್ಶಿಯನ್ನು ನೇಮಕ ಮಾಡಲಾಗುವುದು ಎಂದರು. ಸಿಜೆಐ ರಮಣ ಅವರು ಸ್ವತಂತ್ರ ತನಿಖಾ ಸಮಿತಿಯನ್ನು ರಚಿಸಬೇಕೆ ಎಂದು ಮೆಹ್ತಾ ಅವರನ್ನು ಪ್ರಶ್ನಿಸಿದಾಗ ಮೆಹ್ತಾ ಅವರು “ನಾಳೆ ಎಲ್ಲಾ ದಾಖಲೆಗಳು ನಿಮ್ಮ ಮುಂದೆ ಬರಲಿ. ನಾವು ನಮ್ಮ ಕಳಕಳಿಗಳನ್ನು ನಿಮ್ಮ ಮುಂದಿಡುತ್ತೇವೆ. ಸೋಮವಾರ ನೀವು ನಿರ್ಧರಿಸಬಹುದು” ಎಂದರು.