PM Modi and Delhi HC 
ಸುದ್ದಿಗಳು

ಮೋದಿ ಸೆಲ್ಫಿ ಪಾಯಿಂಟ್: ಕೇವಲ ಸರ್ಕಾರಿ ಯೋಜನೆಗಳನ್ನು ಮಾತ್ರವೇ ಪ್ರಚುರಪಡಿಸಿದರೆ ಸಮಸ್ಯೆಯಿಲ್ಲ ಎಂದ ದೆಹಲಿ ಹೈಕೋರ್ಟ್

ಸರ್ಕಾರದ ಸಾಧನೆಯನ್ನು ಪ್ರಚಾರಪಡಿಸಲು ನಾಗರಿಕ ಸೇವಕರು ಮತ್ತು ಸೇನಾ ಸಿಬ್ಬಂದಿಯನ್ನು ಬಳಸುವುದನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದ್ದು, ಇದು ಜನತೆಯೊಂದಿಗಿನ ಕೊನೆಯ ಹಂತದ ಸಂಪರ್ಕವನ್ನು ಸಾಧ್ಯವಾಗಿಸುತ್ತದೆ ಎಂದು ಹೇಳಿದೆ.

Bar & Bench

ಸರ್ಕಾರವು ತನ್ನ ಯೋಜನೆಗಳನ್ನು ಯಾವುದೇ ರಾಜಕೀಯ ಚಿಹ್ನೆ ಇಲ್ಲದೆ ಹಾಗೂ ಯಾವುದೇ ರಾಜಕೀಯ ಪಕ್ಷದ ಪ್ರಚಾರಕ್ಕೆ ಬಳಸದೆ ಪ್ರಚುರಪಡಿಸಿದರೆ ಅದರ ಬಗ್ಗೆ ಯಾರೂ ತಕರಾರು ಹೊಂದಲಾಗದು ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಹೇಳಿದೆ.

ಸರ್ಕಾರದ ಯೋಜನೆಗಳನ್ನು ಪ್ರಚಾರ ಮಾಡುವ ಅಭಿಯಾನಯಾದ ಭಾಗವಾಗಿ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯ ಉದ್ದೇಶಕ್ಕಾಗಿ ಸಾರ್ವಜನಿಕ ಸಂಪನ್ಮೂಲಗಳು ಮತ್ತು ನಾಗರಿಕ ಸೇವಕರನ್ನು ಬಳಸುವುದರ ವಿರುದ್ಧ‌ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯವು ಮೇಲಿನಂತೆ ಹೇಳಿದೆ.

ಪ್ರಧಾನಿ ಮೋದಿಯವರ ಸೆಲ್ಫಿ ಪಾಯಿಂಟ್‌ಗಳ ವಿಚಾರವಾಗಿ ಪ್ರತಿಕ್ರಿಯಿಸುತ್ತಾ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರಧಾನಿ ಕೂಡ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ಚುನಾಯಿತ ವ್ಯಕ್ತಿ ಎಂದು ಅವಲೋಕಿಸಿತು.

"ಅವರು (ಪ್ರಧಾನಿ ನರೇಂದ್ರ ಮೋದಿ) ಮತ್ತೊಬ್ಬರ ರಾಜಕೀಯ ಎದುರಾಳಿಯಾಗಿರಬಹುದು. ಆದರೆ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಸಾರ್ವಜನಿಕ ಹಣವನ್ನು ಬಳಸುತ್ತಿದ್ದರೆ, ಅದಕ್ಕೆ ಯಾವುದೇ ತಕರಾರು ಇರಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಹೇಳಿತು.

"ಯಾವುದೇ ರಾಜಕೀಯ ಚಿಹ್ನೆ, ಯಾವುದೇ ರಾಜಕೀಯ ವ್ಯಕ್ತಿ ಅಥವಾ ರಾಜಕೀಯ ಪಕ್ಷವನ್ನು ಕೇಂದ್ರೀಕರಿಸಿಲ್ಲ ಎಂದಾದರೆ ನೀವು ಅದರೊಂದಿಗೆ ತಕರಾರು ಹೊಂದಲು ಸಾಧ್ಯವಿಲ್ಲ. ವ್ಯಕ್ತಿ (ಪ್ರಧಾನಿ ನರೇಂದ್ರ ಮೋದಿ) ಜನರಿಂದ ಚುನಾಯಿತರಾಗಿದ್ದಾರೆ ಮತ್ತು ಸಾಂವಿಧಾನಿಕ ಹುದ್ದೆಯನ್ನು ಹೊಂದಿದ್ದಾರೆ. ಅವರು ಮತ್ತೊಬ್ಬರ ರಾಜಕೀಯ ಪ್ರತಿಸ್ಪರ್ಧಿಯಾಗಿರಬಹುದು ಆದರೆ ಇದನ್ನು ಪ್ರಯೋಜನಕಾರಿ ಯೋಜನೆಗಳ ಅಂತಿಮ ಹಂತದ ಸಂಪರ್ಕಕ್ಕಾಗಿ ಬಳಸುತ್ತಿದ್ದರೆ, ನೀವು ಅದರೊಂದಿಗೆ ಸಮಸ್ಯೆ ಹೊಂದಲು ಸಾಧ್ಯವಿಲ್ಲ" ಎಂದು ಪೀಠ ಹೇಳಿತು.

ಮಾಜಿ ಐಎಎಸ್ ಅಧಿಕಾರಿ ಇಎಎಸ್ ಶರ್ಮಾ ಮತ್ತು ಐಐಎಂ ಅಹಮದಾಬಾದ್‌ನ ಮಾಜಿ ಡೀನ್ ಜಗದೀಪ್ ಎಸ್ ಛೋಕರ್ ಅವರು ಸಚಿವಾಲಯದ ಸಾಧನೆಗಳನ್ನು ಪ್ರದರ್ಶಿಸಲು ಪ್ರಧಾನಿ ನರೇಂದ್ರ ಮೋದಿಯವರ ಚಿತ್ರಗಳೊಂದಿಗೆ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸುವಂತೆ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ನಿರ್ದೇಶನ ನೀಡಿದ ರಕ್ಷಣಾ ಸಚಿವಾಲಯ (ಎಂಒಡಿ) ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಇದಾಗಿದೆ.