Arvind Kejriwal, Sanjay Singh  
ಸುದ್ದಿಗಳು

ಮೋದಿ ಪದವಿ ವಿವಾದ: ಆದ್ಯತೆ ಮೇಲೆ ಕೇಜ್ರಿವಾಲ್, ಸಿಂಗ್ ಮನವಿ ಆಲಿಸಲು ಗುಜರಾತ್‌ ಹೈಕೋರ್ಟ್‌ ನಕಾರ

ಮೇಲ್ಮನವಿಯನ್ನು ಆದ್ಯತೆ ಮೇಲೆ ವಿಚಾರಣೆ ನಡೆಸುವುದಿಲ್ಲ ಎಂದು ನ್ಯಾ. ಸಮೀರ್‌ ದವೆ ತಿಳಿಸಿದರಾದರೂ ಮುಂದಿನವಾರ ಪ್ರಕರಣ ಆಲಿಸುವುದಾಗಿ ಹೇಳಿದರು.

Bar & Bench

ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಪದವಿಗೆ ಸಂಬಂಧಿಸಿದಂತೆ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ತಮ್ಮ ಖುದ್ದು ಹಾಜರಿಗೆ ಸೂಚಿಸಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‌ ಆದೇಶ ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಂಸದ ಸಂಜಯ್‌ ಸಿಂಗ್‌ ಸಲ್ಲಿಸಿದ್ದ ಮೇಲ್ಮನವಿಗಳನ್ನು ಆದ್ಯತೆ ಮೇರೆಗೆ ವಿಚಾರಣೆ ನಡೆಸಲು ಗುಜರಾತ್ ಹೈಕೋರ್ಟ್ ಇಂದು ನಿರಾಕರಿಸಿದೆ [ಅರವಿಂದ್‌ ಕೇಜ್ರಿವಾಲ್‌ ಮತ್ತು ಗುಜರಾತ್‌ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಪ್ರಕರಣವನ್ನು ನ್ಯಾಯಮೂರ್ತಿ ಸಮೀರ್ ದವೆ ಅವರಿದ್ದ ಪೀಠದೆದುರು ಪಟ್ಟಿ ಮಾಡಿದಾಗ ಆದ್ಯತೆ ಮೇಲೆ ವಿಚಾರಣೆ ನಡೆಸಲು ನಿರಾಕರಿಸಿದರು. ಆದರೆ ಮುಂದಿನವಾರ ಪ್ರಕರಣ ಆಲಿಸುವುದಾಗಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಪದವಿಗೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ಈ ಇಬ್ಬರಿಗೂ ನೀಡದೇ ಇದ್ದ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಮತ್ತು ಸಂಜಯ್‌ ಸಿಂಗ್‌ ತನ್ನ ಘನತೆಗೆ ಹಾನಿ ಉಂಟುಮಾಡುವಂತಹ ಹೇಳಿಕೆಗಳನ್ನು ನೀಡುವ ಮೂಲಕ ಮಾನಹಾನಿ ಉಂಟು ಮಾಡಿದ್ದಾರೆ ಎಂದು ಗುಜರಾತ್‌ ವಿಶ್ವವಿದ್ಯಾಲಯ ಮೊಕದ್ದಮೆ ಹೂಡಿತ್ತು.

ಈ ವರ್ಷ ಏಪ್ರಿಲ್ 17ರಂದು ಹೊರಡಿಸಿದ ಆದೇಶದಲ್ಲಿ, ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಜಯೇಶ್‌ಭಾಯ್ ಚೋವಾಟಿಯಾ ಅವರು ತಮಗೆ ಪೆನ್ ಡ್ರೈವ್‌ನಲ್ಲಿ ಒದಗಿಸಲಾದ ಮೌಖಿಕ ಮತ್ತು ಡಿಜಿಟಲ್ ಸಾಕ್ಷ್ಯವನ್ನು ಪರಿಗಣಿಸಿ ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ನೀಡಿದ ಹೇಳಿಕೆಗಳು ಮೇಲ್ನೋಟಕ್ಕೆ ಮಾನಹಾನಿಕರವಾಗಿವೆ ಎಂದು ಹೇಳಿದ್ದರು.

ಹೈಕೋರ್ಟ್‌ನ ತೀರ್ಪಿನ ನಂತರ ಕೇಜ್ರಿವಾಲ್‌ ಅವರು ವಿಶ್ವವಿದ್ಯಾಲಯದ ಕುರಿತು ಮಾಡಿರುವ ಟ್ವೀಟ್‌ಗಳು ಮತ್ತು ಭಾಷಣಗಳ ಮಾಹಿತಿ ಪೆನ್‌ಡ್ರೈವ್‌ನಲ್ಲಿತ್ತು.