Delhi Chief Minister, Arvind Kejriwal
Delhi Chief Minister, Arvind Kejriwal  A1
ಸುದ್ದಿಗಳು

ಮೋದಿ ಪದವಿ: ಕೇಜ್ರಿವಾಲ್ ವಿರುದ್ಧ ಹೂಡಲಾದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಲಿದೆ ಗುಜರಾತ್ ನ್ಯಾಯಾಲಯ

Bar & Bench

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಸಂಕಷ್ಟಕ್ಕೀಡಾಗುವಂತಹ ಬೆಳವಣಿಗೆಯೊಂದು ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪದವಿಗೆ ಸಂಬಂಧಿಸಿದ ಸರ್ಟಿಫಿಕೇಟ್‌ಗಳನ್ನು ನೀಡದೇ ಇದ್ದ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ತನಗೆ ಮಾನಹಾನಿ ಉಂಟು ಮಾಡಿದ್ದಾರೆ ಎಂದು ಗುಜರಾತ್‌ ವಿಶ್ವವಿದ್ಯಾಲಯ ಹೂಡಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಅಹಮದಾಬಾದ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮುಂದಾಗಿದೆ [ಪಿಯೂಷ್ ಪಟೇಲ್ ಮತ್ತು ಅರವಿಂದ್ ಕೇಜ್ರಿವಾಲ್ ನಡುವಣ ಪ್ರಕರಣ].

ಕೇಜ್ರಿವಾಲ್ ಮತ್ತು ಎಎಪಿಯ ಸಂಸದ ಸಂಜಯ್ ಸಿಂಗ್ ವಿವಿಯನ್ನು ದೂಷಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು ಅವರ ಹೇಳಿಕೆಗಳು 'ವಿವಿಯು ನಕಲಿ ಪದವಿ ನೀಡುತ್ತದೆ' ಎಂಬ ಸಂದೇಶ ರವಾನಿಸುತ್ತದೆ ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜಯೇಶ್‌ಭಾಯ್ ಚೊವಾಟಿಯಾ ಹೇಳಿದ್ದಾರೆ.

ಗುಜರಾತ್ ಹೈಕೋರ್ಟ್‌ ನೀಡಿದ್ದ ಇತ್ತೀಚಿನ ತೀರ್ಪಿನ ನಂತರ ಕೇಜ್ರಿವಾಲ್ ಮಾಡಿದ ಟ್ವೀಟ್‌ಗಳು ಮತ್ತು ಭಾಷಣಗಳನ್ನು ಒಳಗೊಂಡ  ಮೌಖಿಕ ಮತ್ತು ಡಿಜಿಟಲ್ ಸಾಕ್ಷ್ಯವನ್ನು ನ್ಯಾಯಾಧೀಶರು ಗಮನಿಸಿದರು.

ಗುಜರಾತ್ ವಿಶ್ವವಿದ್ಯಾಲಯ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದ್ದು ವಿಶ್ವವಿದ್ಯಾನಿಲಯ ಪ್ರಧಾನಿ ಮೋದಿ ಪದವಿಯನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ಹೇಳಿತ್ತು. ಜೊತೆಗೆ  ಕೇಜ್ರಿವಾಲ್‌ಗೆ ₹25,000 ದಂಡವನ್ನೂ ವಿಧಿಸಿತ್ತು.

ಈ ಸಂಗತಿಗಳನ್ನು ಗಮನಿಸಿದ ನ್ಯಾಯಾಧೀಶ ಚೋವಟಿಯ ಅವರು, "ಗುಜರಾತ್ ವಿಶ್ವವಿದ್ಯಾಲಯದ ಬಗ್ಗೆ ನೀಡಿರುವ ಹೇಳಿಕೆಗಳನ್ನು ವಿವೇಚನಾಶೀಲ ವ್ಯಕ್ತಿಯೂ ಅರ್ಥೈಸಬಹುದಾಗಿದ್ದು, ವಿಶ್ವವಿದ್ಯಾಲಯ ಸುಳ್ಳು ಮತ್ತು ಬೋಗಸ್ ಪದವಿಗಳನ್ನು ನೀಡುತ್ತದೆ ಮತ್ತು ನಕಲಿ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಆರೋಪಿಸುವ ಮೂಲಕ ಗುಜರಾತ್ ವಿಶ್ವವಿದ್ಯಾಲಯದ ಪ್ರತಿಷ್ಠೆಯನ್ನು ಹಾಳುಮಾಡುತ್ತದೆ" ಎಂದಿದ್ದಾರೆ.

ಆರೋಪಿತರು ಸುಶಿಕ್ಷಿತ ರಾಜಕೀಯ ಪದಾಧಿಕಾರಿಯಾಗಿದ್ದು, ತಮ್ಮ ಹೇಳಿಕೆಗಳಿಂದ ಸಾರ್ವಜನಿಕರ ಮೇಲೆ ಬೀರುವ ಪರಿಣಾಮದ ಬಗ್ಗೆ ತಿಳಿದಿರುತ್ತಾರೆ. ಮೇಲ್ನೋಟಕ್ಕೆ ಗುಜರಾತ್‌ ವಿವಿಯನ್ನು ಗುರಿಯಾಗಿಸಿಕೊಂಡಿರುವುದು ಕಂಡು ಬರುತ್ತದೆ. ಈ ಕುರಿತು ಬಳಸಲಾದ ಪದಗಳು ವ್ಯಂಗ್ಯದಿಂದ ಕೂಡಿವೆ. ಆರೋಪಗಳಿಂದಾಗಿ ಜನರ ಮನಸ್ಸಿನಲ್ಲಿ ಗುಜರಾತ್ ವಿಶ್ವವಿದ್ಯಾಲಯದ ವರ್ಚಸ್ಸಿಗೆ ಧಕ್ಕೆ ಒದಗಿರುವುದು ಸಹಜ ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆ ಮೇ 23ರಂದು ನಡೆಯಲಿದೆ.