ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಫಿರೋಜ್‌ಪುರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಫಲರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉಂಟಾಗಿದ್ದ ಭದ್ರತಾ ಲೋಪದ ಕುರಿತು ತನಿಖೆ ನಡೆಸಲು ರಚಿಸಲಾಗಿದ್ದ ಸಮಿತಿಯು ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಪ್ರಧಾನ ಮಂತ್ರಿ ಭದ್ರತೆಗೆ ರಕ್ಷಣೆ ದೃಷ್ಟಿಯಿಂದ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆಯೂ ಸಮಿತಿ ಸಲಹೆ ನೀಡಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿದೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರ ನೇತೃತ್ವದ ಸಮಿತಿಯ ವರದಿಯನ್ನು ಪರಿಶೀಲಿಸಿದ ಸಿಜೆಐ ರಮಣ ಅವರು “ಪ್ರಧಾನಿ ಭದ್ರತೆಯ ರಕ್ಷಣೆಗೆ ಸಂಬಂಧಿಸಿದಂತೆ ಪರಿಹಾರ ಕ್ರಮಗಳೂ (ವರದಿಯಲ್ಲಿ) ಇವೆ. ಮೇಲ್ವಿಚಾರಣಾ ಸಮಿತಿ ರಚಿಸಬೇಕು, ಅತಿ ಗಣ್ಯವ್ಯಕ್ತಿಗಳ ಭೇಟಿಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಭದ್ರತಾ ಯೋಜನೆಯ ಕುರಿತ ನಿಯಮಾವಳಿ ಪ್ರಕಾರವೇ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಬೇಕು…” ಎಂದು ಹೇಳಲಾಗಿದೆ ಎಂದರು."
“ಫಿರೋಜ್‌ಪುರ್ ಹಿರಿಯ ಪೊಲೀಷ್ ವರಿಷ್ಠಾಧಿಕಾರಿಯು ಕಾನೂನು, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಮ್ಮ ಕರ್ತವ್ಯ ನಿಭಾಯಿಸಲು ವಿಫಲರಾಗಿದ್ದಾರೆ. ಸಾಕಷ್ಟು ಭದ್ರತಾ ಪಡೆಯಿದ್ದರೂ, ಪ್ರಧಾನಿ ಮೋದಿ ಅವರು ಆ ಮಾರ್ಗದಲ್ಲಿ ಬರುತ್ತಾರೆ ಎಂದು ಎರಡು ತಾಸು ಮುಂಚಿತವಾಗಿ ತಿಳಿಸಿದರೂ ಅವರು ಕರ್ತವ್ಯ ಪ್ರಜ್ಞೆ ಮೆರೆಯಲು ವಿಫಲರಾಗಿದ್ದಾರೆ ಎಂದು ಸಮಿತಿಯ ವರದಿಯಲ್ಲಿ ಹೇಳಲಾಗಿದೆ” ಎಂದು ಪೀಠ ಹೇಳಿತು.
“ಈ ಸಂಬಂಧ ಕ್ರಮಕೈಗೊಳ್ಳುವುದಕ್ಕೆ ನ್ಯಾ. ಇಂದೂ ಮಲ್ಹೋತ್ರಾ ಸಮಿತಿಯ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು” ಎಂದು ಸಿಜೆಐ ಹೇಳಿದರು. ಅಲ್ಲದೇ, ಸಮಿತಿಯ ಪರಿಷ್ಕೃತ ವರದಿ ಕೇಳಿದ ಆಪಾದಿತ ಪೊಲೀಸ್ ಅಧಿಕಾರಿಗೆ ವರದಿ ನೀಡಲು ಪೀಠವು ನಿರಾಕರಿಸಿತು.
ಚುನಾವಣೆ ಸಂದರ್ಭದಲ್ಲಿ ಪ್ರಧಾನಿಯವರು ಪಂಜಾಬ್‌ಗೆ ಭೇಟಿ ನೀಡಿದ್ದ ವೇಳೆ ಭದ್ರತಾ ಲೋಪ ಉಂಟಾಗಿತ್ತು. ಹಿಂಪಡೆಯಲಾಗಿರುವ ವಿವಾದಿತ ಕೃಷಿ ಕಾಯಿದೆ ವಿರೋಧಿಸಿ, ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದರಿಂದ ಪಂಜಾಬ್‌ನ ಹುಸೈನ್‌ವಾಲಾ ಮೇಲ್ಸೇತುವೆ ಮೇಲೆ ಇಪ್ಪತ್ತು ನಿಮಿಷ ಪ್ರಧಾನಿ ನರೇಂದ್ರ ಮೋದಿ ಅವರ ಕಾರು ಒಳಗೊಂಡ ಭದ್ರತಾ ಪಡೆ ನಿಲ್ಲಬೇಕಾಗಿ ಬಂತು. ಪ್ರಧಾನಿಯವರ ರಕ್ಷಣೆಯಲ್ಲಿ ಉಂಟಾದ ಈ ಗಂಭೀರ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ನಿಗಾದಲ್ಲಿ ತನಿಖೆ ನಡೆಸಬೇಕು ಎಂದು ಕೋರಿದ್ದ ಅರ್ಜಿ ವಿಚಾರಣೆಯನ್ನು ಪೀಠ ನಡೆಸಿತು.