Bangalore city civil court and Sushil Mantri
Bangalore city civil court and Sushil Mantri 
ಸುದ್ದಿಗಳು

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಂತ್ರಿ ಡೆವಲಪರ್ಸ್‌ನ ಸುಶೀಲ್‌ ಮಂತ್ರಿಗೆ ಜಾಮೀನು

Siddesh M S

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಂತ್ರಿ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕ ಸುಶೀಲ್‌ ಪಾಂಡುರಂಗ ಮಂತ್ರಿ ಅವರಿಗೆ ಜಾಮೀನನ್ನು ಹಾಗೂ ಅವರ ಪುತ್ರ ಪ್ರತೀಕ್‌ ಮಂತ್ರಿ ಅವರಿಗೆ ನಿರೀಕ್ಷಣಾ ಜಾಮೀನನ್ನು ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಗುರುವಾರ ಮಂಜೂರು ಮಾಡಿದೆ.

ಸುಶೀಲ್‌ ಮಂತ್ರಿ ಮತ್ತು ಅವರ ಪುತ್ರ ಪ್ರತೀಕ್‌ ಸಲ್ಲಿಸಿದ್ದ ಪ್ರತ್ಯೇಕ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಮನವಿಗಳ ವಿಚಾರಣೆ ನಡೆಸಿದ್ದ ಬೆಂಗಳೂರಿನ ಪ್ರಧಾನ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಶೇಖರ ಮೃತ್ಯುಂಜಯ ಜೋಶಿ ಅವರು ಈ ಆದೇಶಗಳನ್ನು ಮಾಡಿದ್ದಾರೆ.

ತಂದೆ ಸುಶೀಲ್‌ ಮತ್ತು ಪುತ್ರ ಪ್ರತೀಕ್‌ ಇಬ್ಬರಿಗೂ ತಲಾ 25 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಅಷ್ಟೇ ಮೊತ್ತದ ಒಬ್ಬರ ಭದ್ರತೆ ನೀಡುವಂತೆ ನ್ಯಾಯಾಲಯವು ಷರತ್ತು ವಿಧಿಸಿದೆ.

ಪ್ರಕರಣದ ಹಿನ್ನೆಲೆ: ಗ್ರಾಹಕರಿಂದ ಹಣ ಸಂಗ್ರಹಿಸಿ, ನಿಗದಿತ ಕಾಲಮಿತಿಯಲ್ಲಿ ಫ್ಲ್ಯಾಟ್‌ ಹಂಚಿಕೆ ಮಾಡದೇ ಆ ಹಣವನ್ನು ಅಕ್ರಮವಾಗಿ ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ದೂರಿನ ಮೇರೆಗೆ ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್‌ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 406, 420ರ ಅಡಿ ಸುಶೀಲ್‌, ಪ್ರತೀಕ್‌ ಮತ್ತು ಕಂಪೆನಿಯ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್‌ ಬಹುಹಿಂದೆಯೇ ತಡೆ ವಿಧಿಸಿದೆ.

ಅದಾಗ್ಯೂ, ಜಾರಿ ನಿರ್ದೇಶನಾಲಯವು 100 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ, ವಿಸ್ತೃತ ಅಪರಾಧದ ಭಾಗವಾಗಿ ಮಾಡಲಾದ ಕೃತ್ಯ (ಪ್ರೆಡಿಕೇಟೆಡ್‌ ಅಫೆನ್ಸ್‌) ಎಂದು ಪರಿಗಣಿಸಿ ಸುಶೀಲ್‌ ಮಂತ್ರಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿತ್ತು. ವಿಚಾರಣೆಗೆ ಹಾಜರಾಗಿದ್ದಾಗ ಜೂನ್‌ 26ರಂದು ಅವರನ್ನು ಬಂಧಿಸಲಾಗಿತ್ತು. ಅಕ್ರಮ ಹಣ ವರ್ಗಾವಣೆ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

“ಕೋವಿಡ್‌ ಸೇರಿದಂತೆ ಹಲವು ಕಾರಣಗಳಿಗೆ ಅಪಾರ್ಟ್‌ಮೆಂಟ್‌ ನಿರ್ಮಾಣ ಕಾಮಗಾರಿ ತಡವಾಗಿತ್ತು. ಈಗ ಎಲ್ಲವೂ ಮುಕ್ತಾಯ ಹಂತದಲ್ಲಿದ್ದು, ಫ್ಲ್ಯಾಟ್‌ ಹಂಚಿಕೆ ಮಾಡಲಾಗುವುದು. ಜಾರಿ ನಿರ್ದೇಶನಾಲಯ ಆರೋಪಿಸಿರುವಂತೆ ಯಾವುದೇ ತೆರನಾದ ಹಣ ವರ್ಗಾವಣೆಯಾಗಿಲ್ಲ. ಹೀಗಾಗಿ, ಇಲ್ಲಿ ಕ್ರಿಮಿನಲ್‌ ಅಪರಾಧವಾಗಿಲ್ಲ” ಎಂದು ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ಸುಶೀಲ್‌ ಮತ್ತು ಪ್ರತೀಕ್‌ ಮಂತ್ರಿ ಅವರ ಪರವಾಗಿ ವಾದ ಮಂಡಿಸಿದ್ದರು.

ಅರ್ಜಿದಾರರನ್ನು ವಕೀಲರಾದ ಎಸ್‌ ಮಹೇಶ್‌, ಸಂಜಯ್‌ ಯಾದವ್‌, ಕಾಳಿಚರಣ್‌ ಜಿ ಆರ್‌ ಹಾಗೂ ಜಾರಿ ನಿರ್ದೇಶನಾಲಯವನ್ನು ವಕೀಲ ಮಧುಕರ್‌ ದೇಶಪಾಂಡೆ ಪ್ರತಿನಿಧಿಸಿದ್ದರು.