ಬಿಟ್ ಕಾಯಿನ್ ಹಗರಣದ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಮತ್ತು ಕ್ರಿಪ್ಟೊ ಟ್ರೇಡರ್ ರಾಬಿನ್ ಖಂಡೇಲವಾಲ್ ಅವರ ಕರ್ನಾಟಕ ಹೈಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.
ಮೇ 8ರಂದು ಬಂಧಿಸಲ್ಪಟ್ಟಿದ್ದ ಶ್ರೀಕಿ ಮತ್ತು ಕ್ರಿಪ್ಟೊ ಟ್ರೇಡರ್ ರಾಬಿನ್ ಖಂಡೇಲವಾಲ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ.
ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಐದು ವರ್ಷಗಳ ಹಿಂದಿನ ಪ್ರಕರಣದಲ್ಲಿ ತನಿಖೆ ಮುಗಿಯುವ ಕೊನೆಯ ಹಂತದಲ್ಲಿ ಅರ್ಜಿದಾರರನ್ನು ಬಂಧಿಸಲಾಗಿದೆ. ಅವರ ಬಳಿ ಬಿಟ್ ಕಾಯಿನ್ ಅಥವಾ ಅದರಿಂದ ಸಂಗ್ರಹಿಸಿರುವ ಬೇರಾವುದೇ ಹಣವಿದ್ದರೆ ಇಲ್ಲಿಯವರೆಗೆ ಇಟ್ಟುಕೊಳ್ಳುತ್ತಿದ್ದರೇ” ಎಂದು ಜಾರಿ ನಿರ್ದೇಶನಾಲಯವನ್ನು ಪ್ರಶ್ನಿಸಿತು.
ಸಾಕ್ಷ್ಯ ವಿಚಾರಣೆ ನಡೆಯುವವರೆಗೆ ಅರ್ಜಿದಾರಿಗೆ ಜಾಮೀನು ಮಂಜೂರು ಮಾಡಬಾರದು. ಅರ್ಜಿದಾರರು ಹ್ಯಾಕಿಂಗ್ ಅನ್ನು ಉದ್ಯಮ ಮಾಡಿಕೊಂಡು ಅದರಿಂದ ಸಂಗ್ರಹಿಸಿದ ಹಣದಿಂದ ಐಷಾರಾಮಿ ಜೀವನ ನಡೆಸಿದ್ದಾರೆ ಎಂದು ವಾದಿಸಿದ ಜಾರಿ ನಿರ್ದೇಶನಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಮಧು ಎನ್.ರಾವ್ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.
ಅರ್ಜಿದಾರರ ಪರ ಹಿರಿಯ ವಕೀಲರಾದ ಸಂದೇಶ ಚೌಟ ಮತ್ತು ವಕೀಲ ಬಿಪಿನ್ ಹೆಗಡೆ ಅವರು “ಅರ್ಜಿದಾರರಿಂದ ಏನನ್ನೂ ಜಫ್ತಿ ಮಾಡಲಾಗಿಲ್ಲ. ಇ ಡಿ ಸಮನ್ಸ್ ನೀಡಿದಾಗಲೆಲ್ಲಾ ಅರ್ಜಿದಾರರು ವಿಚಾರಣೆಗೆ ಹಾಜರಾಗಿ, ಸಹಕರಿಸಿದ್ದಾರೆ. ಇ ಡಿ ದೂರಿನ ಭಾಗವಾಗಿ ಇನ್ನೂ ಸಕ್ಷಮ ನ್ಯಾಯಾಲಯ ಸಂಜ್ಞೇ ಪರಿಗಣಿಸಿಲ್ಲ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು” ಎಂಬ ವಾದವನ್ನು ಪೀಠ ಪುರಸ್ಕರಿಸಿತು.
ಗೇಮಿಂಗ್ ವೇದಿಕೆ ಮತ್ತು ವಾಲೆಟ್‌ಗಳನ್ನು ಹ್ಯಾಕ್ ಮಾಡಿ ಅದರ ಹಣವನ್ನು ಕ್ರಿಪ್ಟೊಕರೆನ್ಸಿ ಖರೀದಿಸಿ, ವರ್ಗಾವಣೆ ಮಾಡಲಾಗಿದೆ. ಇದನ್ನು ಬಳಸಿ ಡಾರ್ಕ್‌ವೆಬ್ ಮೂಲಕ ಮಾದಕ ದ್ರವ್ಯಗಳ ಖರೀದಿಸುವುಲ್ಲದೇ ಆರೋಪಿಗಳು ಐಷಾರಾಮಿ ಜೀವನ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರೆಡಿಕೇಟ್ ಅಪರಾಧದಲ್ಲಿ ಜಾರಿ ನಿರ್ದೇಶನಾಲಯವು ಶ್ರೀಕಿ, ರಾಬಿನ್, ಪ್ರತೀಕ್, ಸುನೀಶ್ ಹೆಗಡೆ ಸೇರಿದಂತೆ ಆರು ಮಂದಿಯನ್ನು ಬಂಧಿಸಿತ್ತು. ಆರೋಪಿಗಳ ವಿರುದ್ಧ ಪಿಎಂಎಲ್ ಕಾಯಿದೆ ಸೆಕ್ಷನ್ 4 ಮತ್ತು 4ರ ಅಡಿ ಪ್ರಕರಣ ದಾಖಲಿಸಲಾಗಿದೆ.
ವಕೀಲ ಎನ್ ಗೌರವ್ ಅವರು ಅರ್ಜಿದಾರರ ಪರ ವಕಾಲತ್ತು ವಹಿಸಿದ್ದರು.