Amnesty International and ED 
ಸುದ್ದಿಗಳು

ಪಿಎಂಎಲ್‌ಎ ಪ್ರಕರಣ: ಇಂಡಿಯನ್ಸ್‌ ಫಾರ್‌ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಟ್ರಸ್ಟಿಗೆ ವಿಶೇಷ ನ್ಯಾಯಾಲಯದ ಜಾಮೀನು

ಐದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಇಬ್ಬರ ಭದ್ರತೆ ಒದಗಿಸಬೇಕು ಎಂದು ನ್ಯಾಯಾಲಯವು ಷರತ್ತು ವಿಧಿಸಿದೆ.

Bar & Bench

ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ದಾಖಲಾಗಿರುವ ಪ್ರಕರಣದಲ್ಲಿ ಇಂಡಿಯನ್ಸ್‌ ಫಾರ್‌ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಟ್ರಸ್ಟ್‌ನ ಟ್ರಸ್ಟಿ ನಿಧೀಶ್‌ ತ್ಯಾಗಿ ಅವರಿಗೆ ಬೆಂಗಳೂರಿನ ಕೇಂದ್ರೀಯ ತನಿಖಾ ದಳದ (ಸಿಬಿಐ) ವಿಶೇಷ ನ್ಯಾಯಾಲಯವು ಈಚೆಗೆ ಜಾಮೀನು ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ 66ನೇ ಹೆಚ್ಚುವರಿ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಹಾಗೂ ಸಿಬಿಐ ಪ್ರಕರಣಗಳ ವಿಚಾರಣೆಗೆ ಸ್ಥಾಪಿಸಲಾಗಿರುವ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಸಂತೋಷ್‌ ಗಜಾನನ್‌ ಭಟ್‌ ಅವರು ಐದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಇಬ್ಬರ ಭದ್ರತೆ ಒದಗಿಸಬೇಕು ಎಂದು ಷರತ್ತು ವಿಧಿಸಿದ್ದಾರೆ.

ಇಂಡಿಯನ್ಸ್‌ ಫಾರ್‌ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಟ್ರಸ್ಟ್‌ ಪ್ರತಿನಿಧಿಸುವ ಟ್ರಸ್ಟಿ ನಿಧೀಶ್‌ ತ್ಯಾಗಿ ಅವರು ಪ್ರಾಸಿಕ್ಯೂಷನ್‌ ಸಾಕ್ಷಿ ತಿರುಚ ಬಾರದು ಅಥವಾ ಬೆದರಿಕೆ ಹಾಕಬಾರದು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಟ್ರಸ್ಟ್‌ ಪ್ರತಿನಿಧಿಸುವ ನಿಧೀಶ್‌ ತ್ಯಾಗಿ ಅವರು ವಿಚಾರಣೆಗೆ ಗೈರಾಗುವಂತಿಲ್ಲ. ನ್ಯಾಯಾಲಯ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಲಾಗಿದೆ.

ಪ್ರಕರಣದ ಹಿನ್ನೆಲೆ: 2019ರ ಜೂನ್‌ 12ರಂದು ಕೇಂದ್ರ ಗೃಹ ಇಲಾಖೆ ನೀಡಿದ್ದ ದೂರನ್ನು ಆಧರಿಸಿ ಕೇಂದ್ರೀಯ ತನಿಖಾ ದಳವು (ಸಿಬಿಐ) 2019ರ ನವೆಂಬರ್‌ 5ರಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ (ಎಐಐಪಿಎಲ್‌), ಇಂಡಿಯನ್ಸ್‌ ಫಾರ್‌ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಟ್ರಸ್ಟ್‌ (ಐಎಐಟಿ), ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಫೌಂಡೇಶನ್‌ ಟ್ರಸ್ಟ್‌ (ಎಐಐಎಫ್‌ಟಿ), ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸೌತ್‌ ಏಷ್ಯಾ ಫೌಂಡೇಶನ್‌ (ಎಐಎಸ್‌ಎಎಫ್‌) ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 120(ಬಿ) ಜೊತೆಗೆ ವಿದೇಶಿ ದೇಣಿಗೆಗಳ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ಸೆಕ್ಷನ್‌ಗಳಾದ 11, 35 ಮತ್ತು 39ರ ಅಡಿ ಪ್ರಕರಣ ದಾಖಲಿಸಿತ್ತು. ಐಪಿಸಿ ಸೆಕ್ಷನ್‌ 120(ಬಿ)ರ ಅಡಿ ಪ್ರಕರಣ ದಾಖಲಾಗಿರುವುದರಿಂದ ಇದು ಗಂಭೀರ ಅಪರಾಧವೊಂದರ ಭಾಗವಾಗಿದೆ. ಹೀಗಾಗಿ, ಅಕ್ರಮ ಚಟುವಟಿಕೆಗಳ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ತನಿಖೆ ಆರಂಭಿಸಿದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ಎಐಎಫ್‌ಟಿ, ಎಐಎಸ್‌ಎಎಫ್‌ ಮತ್ತು ಎಐಐಎಫ್‌ಟಿ ಮೂಲಕ ಭಾರತದಲ್ಲಿ ಎಐಐಪಿಎಲ್‌ ಕಾರ್ಯನಿರ್ವಹಿಸುತ್ತಿದ್ದು, ಎಫ್‌ಸಿಆರ್‌ಎ ಮೂಲಕ ಅನುಮತಿ ಕೋರಿದ್ದು, 2011-12ರಲ್ಲಿ ಎಐಐಎಫ್‌ಟಿಗೆ ಇಂಗ್ಲೆಂಡ್‌ನ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನಿಂದ ದೇಣಿಗೆ ಪಡೆಯಲು ಅನುಮತಿ ದೊರೆತಿತ್ತು. ಭದ್ರತಾ ಸಲಹೆಯ ಅನುಸಾರ ನೀಡಲಾಗಿದ್ದ ಅನುಮತಿಯನ್ನು ಬಳಿಕ ರದ್ದುಪಡಿಸಲಾಗಿತ್ತು. ಆನಂತರ ಪೂರ್ವಾನುಮತಿ ಇಲ್ಲದಿದ್ದರೂ ಅಮ್ನೆಸ್ಟಿ ಇಂಡಿಯಾವು ಎಫ್‌ಸಿಆರ್‌ಎ ಅಡಿ ನೋಂದಣಿ ಪಡೆಯಲು ಪ್ರಯತ್ನ ಮಾಡಿತ್ತು. ಇದರಿಂದ ಪಾರಾಗಲು ಅಮ್ನೆಸ್ಟಿ ಇಂಡಿಯಾವು ವಾಣಿಜ್ಯ ಹಾದಿ ತುಳಿಯುವ ಮೂಲಕ ಗೃಹ ಇಲಾಖೆಯ ಅನುಮತಿ ಪಡೆಯದೆಯೇ ಇದ್ದರೂ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ರೂಪದಲ್ಲಿ ತನ್ನ ಖಾತೆಗೆ 10 ಕೋಟಿ ರೂಪಾಯಿ ಪಡೆದಿತ್ತು. ಆನಂತರವೂ ಇದೇ ರೀತಿ ಗೃಹ ಇಲಾಖೆಯ ಅನುಮತಿ ಇಲ್ಲದಿದ್ದರೂ ಇಂಗ್ಲೆಂಡ್‌ನ ಸಂಸ್ಥೆಯಿಂದ ಅಮ್ನೆಸ್ಟಿ ಇಂಡಿಯಾ ಖಾತೆಗೆ 26 ಕೋಟಿ ರೂಪಾಯಿ ಜಮೆಯಾಗಿತ್ತು. ಇಲ್ಲಿ ಎಫ್‌ಸಿಆರ್‌ಎ ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.

ವಾಣಿಜ್ಯ ಉದ್ಯಮಕ್ಕೆ ಬಳಸಲಾಗುವ ಸ್ವಯಂಚಾಲಿತ ವಿಧಾನದಲ್ಲಿ ಸೇವಾ ಗುತ್ತಿಗೆ, ಮುಂಗಡ ಆದಾಯ ಮತ್ತು ಎಫ್‌ಡಿಐ ಮೂಲಕ ಎಐಐಪಿಎಲ್‌ 36 ಕೋಟಿ ರೂಪಾಯಿ ವಿದೇಶಿ ಹಣ ಪಡೆದಿದೆ. 10 ಕೋಟಿ ರೂಪಾಯಿಯನ್ನು ಎಫ್‌ಡಿಐ ರೂಪದಲ್ಲಿ, 26 ಕೋಟಿ ರೂಪಾಯಿಯನ್ನು ಕನ್ಸಲ್ಟೆನ್ಸಿ ಸೇವೆಗಳಿಗೆ ಪಾವತಿಸಲಾಗಿದೆ. ಗೃಹ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಎಫ್‌ಸಿಆರ್‌ಎ ಉಲ್ಲಂಘಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಆಪಾದಿಸಲಾಗಿದೆ.

2015ರ ಸೆಪ್ಟೆಂಬರ್‌ 24ರಂದು ಎಫ್‌ಡಿಐ ಮೂಲಕ ಸ್ವೀಕರಿಸಲಾದ ಹಣವನ್ನು ನಿಶ್ಚಿತ ಠೇವಣಿ ಇಡಲಾಗಿದ್ದು, ಕೆಲವು ತಿಂಗಳ ಬಳಿಕ ಮತ್ತೊಂದು ಸಂಸ್ಥೆಯಾದ ಐಎಐಟಿಯು 14.25 ಕೋಟಿ ರೂಪಾಯಿಯನ್ನು ಓವರ್‌ಡ್ರಾಫ್ಟ್‌ ಮೂಲಕ ಪಡೆದು, ಅದರಲ್ಲಿ 10 ಕೋಟಿ ರೂಪಾಯಿಯನ್ನು ಕೊಲಾಟರಲ್‌ ಭದ್ರತೆಯ ರೂಪದಲ್ಲಿ ನಿಶ್ಚಿತ ಠೇವಣಿಯಾಗಿಸಿದೆ. ಸೇವೆಗಳ ರಫ್ತಿಗೆ ಎಐಐಪಿಎಲ್‌ 51 ಕೋಟಿ ರೂಪಾಯಿ ಪಡೆದಿದ್ದು, ದರ ಪಟ್ಟಿ, ಒಪ್ಪಂದ ಪತ್ರ ಒಳಗೊಂಡು ಯಾವುದೇ ದಾಖಲೆಗಳನ್ನು ನೀಡಲಾಗಿಲ್ಲ. ಹೀಗಾಗಿ, ಆರೋಪಿಗಳ ಬ್ಯಾಂಕ್‌ ಖಾತೆಗಳು, ವರ್ಗಾವಣೆ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದು, ಮೇಲ್ನೋಟಕ್ಕೆ ಆರೋಪಗಳಿವೆ ಎಂದು ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.