WinZO 
ಸುದ್ದಿಗಳು

ಅಕ್ರಮ ಹಣ ವರ್ಗಾವಣೆ ಪ್ರಕರಣ: ವಿನ್ಜೊ ಸಹ ಸಂಸ್ಥಾಪಕರಾದ ಸೌಮ್ಯ ಸಿಂಗ್‌, ಪಾವನ್‌ ನಂದ 14 ದಿನ ನ್ಯಾಯಾಂಗ ಬಂಧನಕ್ಕೆ

ಆಲ್ಗಾರಿದಮ್‌ ತಿರುಚಿ, ಡಿಜಿಟಲ್‌ ರೂಪದಲ್ಲಿ ಗ್ರಾಹಕರಿಗೆ ಹಣ ವಂಚಿಸಿ, ಅದನ್ನು ವಿದೇಶಗಳಲ್ಲಿರುವ ಕಂಪನಿಗಳಿಗೆ ವರ್ಗಾಯಿಸಿದ ಆರೋಪ ಮಾಡಲಾಗಿದೆ.

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಗೇಮಿಂಗ್‌ ಕಂಪೆನಿ ವಿನ್ಜೊ ಸಹ ಸಂಸ್ಥಾಪಕರಾದ ಸೌಮ್ಯ ಸಿಂಗ್‌ ರಾಥೋಡ್‌ ಮತ್ತು ಪಾವನ್‌ ನಂದ ಅವರನ್ನು ಶನಿವಾರ ಬೆಂಗಳೂರಿನ ಸತ್ರ ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಆಲ್ಗಾರಿದಂ ಕೈಚಳ ಮತ್ತು ಡಿಜಿಟಲ್‌ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಸೌಮ್ಯ ಮತ್ತು ಪಾವನ್‌ ಅವರ 14 ದಿನಗಳ ಜಾರಿ ನಿರ್ದೇಶನಾಲಯದ ಕಸ್ಟಡಿಯು ಇಂದು ಮುಕ್ತಾಯವಾಯಿತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ 23ನೇ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಗೋಪಾಲ ಕೃಷ್ಣ ರೈ ಅವರ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಯಿತು.

ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಮಧು ಎನ್‌.ರಾವ್‌ ಅವರು ಆರೋಪಿಗಳನ್ನು ಇ ಡಿ ಕಸ್ಟಡಿಗೆ ಕೋರಲಿಲ್ಲ. ಹೀಗಾಗಿ, ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು.

ಈ ನಡುವೆ, ಆರೋಪಿಗಳ ಪರ ವಕೀಲ ರೋಹನ್‌ ಕೊಠಾರಿ ಅವರು ಮಧ್ಯಂತರ ಜಾಮೀನು ಕೋರಿದ್ದು, ಆ ಅರ್ಜಿಯ ವಿಚಾರಣೆಯು ಸೋಮವಾರ ವಿಚಾರಣೆಗೆ ನಿಗದಿಯಾಗಿದೆ.

ಪ್ರಕರಣದ ಹಿನ್ನೆಲೆ: ಆಲ್ಗಾರಿದಮ್‌ ತಿರುಚಿ, ಡಿಜಿಟಲ್‌ ರೂಪದಲ್ಲಿ ಗ್ರಾಹಕರ ಹಣ ವಂಚನೆ ಮಾಡಿರುವ ಆರೋಪದ ಸಂಬಂಧ ಬೆಂಗಳೂರು (ಪಶ್ಚಿಮ ಸೆನ್‌ ಠಾಣೆ), ರಾಜಸ್ಥಾನ, ದೆಹಲಿ ಮತ್ತು ಗುರುಗ್ರಾಮಗಳಲ್ಲಿ ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿದ್ದು, ಇದರ ಆಧಾರದಲ್ಲಿ 6.11.2025ರಂದು ಇ ಡಿಯು ಇಸಿಐಆರ್‌ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್‌ 18 ರಿಂದ 22ರವರೆಗೆ ದೆಹಲಿಯ ಎರಡು ವಿನ್ಜೊ ಕಚೇರಿ, ಸೌಮ್ಯ ಅವರ ನಿವಾಸ ಹಾಗೂ ಉದ್ಯೋಗಿಯಾಗಿರುವ ಧೀರಜ್‌ ಮನೆಯಲ್ಲಿ ಇ ಡಿ ಅಧಿಕಾರಿಗಳು ಶೋಧ ನಡೆಸಿದ್ದರು. ಇದರ ಬೆನ್ನಿಗೇ ನವೆಂಬರ್‌ 22ರಂದು ಸೌಮ್ಯ ಮತ್ತು ಪಾವನ್‌ಗೆ ಸಮನ್ಸ್‌ ಜಾರಿಗೊಳಿಸಲಾಗಿತ್ತು. ನವೆಂಬರ್‌ 26ರಂದು ಅವರು ವಿಚಾರಣೆಗೆ ಹಾಜರಾದಾಗ ಬಂಧಿಸಲಾಗಿದೆ.

ವಿನ್ಜೊ ಅಪ್ಲಿಕೇಶನ್‌ ಮೂಲಕ ಮುಗ್ಧರನ್ನು ಆಟ ಆಡುವಂತೆ ಪ್ರೇರೇಪಿಸಿ, ಆನಂತರ ಸಿಸ್ಟಂ ಸಹಾಯದಿಂದ ಅವರನ್ನು ವಂಚಿಸುವ ಜಾಲ ಇದಾಗಿದೆ. 2024ರ ಮೇನಿಂದ 2025ರ ಆಗಸ್ಟ್‌ ನಡುವೆ 177 ಕೋಟಿ ರೂಪಾಯಿ ಅಪರಾಧದ ಗಳಿಕೆ (ಪ್ರೊಸೀಡ್ಸ್‌ ಆಫ್‌ ಕ್ರೈಮ್) ಪತ್ತೆಯಾಗಿದ್ದು, ಸಿಂಗಾಪುರ ಮತ್ತು ಅಮೆರಿಕಾದಲ್ಲಿರುವ ವಿನ್ಜೊ ಪಾಲುದಾರ ಕಂಪನಿಗಳಿಗೆ ಸುಮಾರು 400 ಕೋಟಿ ರೂಪಾಯಿ ವರ್ಗಾಯಿಸಲಾಗಿದೆ. ಇದುವರೆಗೆ ಒಟ್ಟಾರೆ 500 ಕೋಟಿ ಆಸ್ತಿ ಜಫ್ತಿ ಮಾಡಲಾಗಿದೆ. ಇದೊಂದು ದೊಡ್ಡ ಜಾಲ ಎಂದು ಇ ಡಿ ಆರೋಪಿಸಿದೆ.