ದೇಶಭ್ರಷ್ಟ ಉದ್ಯಮಿ ನೀರವ್ ಮೋದಿಗೆ ಸಂಬಂಧಿಸಿದ ಆಸ್ತಿಯನ್ನು ಮೋದಿಯ ಮಹತ್ವಾಕಾಂಕ್ಷಿ ಫೈರ್‌ಸ್ಟಾರ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಫ್‌ಐಎಲ್) ಪರವಾಗಿ ಮುಂಬೈನ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧಿಕರಣ ನೇಮಿಸಿರುವ ಋಣ ವಿಮೋಚನಾಕಾರರಿಗೆ ವರ್ಗಾಯಿಸಲು ಮುಂಬೈನ ವಿಶೇಷ ಕಾನೂನುಬಾಹಿರ ಹಣ ವರ್ಗಾವಣೆ ನಿಯಂತ್ರಣ ಕಾಯಿದೆ (ಪಿಎಂಎಲ್‌ಎ) ನ್ಯಾಯಾಲಯವು ಈಚೆಗೆ ಅನುಮತಿಸಿದೆ.
ಪ್ರಮುಖ ಆರೋಪಿಯಾದ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹7000 ಕೋಟಿ ಹಣವನ್ನು ವಂಚಿಸಿದ ಬಳಿಕ ಜಾರಿ ನಿರ್ದೇಶನಾಲಯವು ದೂರು ದಾಖಲಿಸಿಕೊಂಡಿದೆ ಎಂದು ಬ್ಯಾಂಕ್‌ಗಳ ಒಕ್ಕೂಟದಲ್ಲಿ ಪ್ರಮುಖವಾದ ಪಿಎನ್‌ಬಿ ಬ್ಯಾಂಕ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.
ಹೀಗಾಗಿ, ತನಗೆ ನೀರವ್ ಮೋದಿ ವಂಚಿಸಿರುವ ಹಣವನ್ನು ವಾಪಸ್ ಪಡೆಯುವ ನಿಟ್ಟಿನಲ್ಲಿ ಅವರ ಆಸ್ತಿಯನ್ನು ವರ್ಗಾವಣೆ ಮಾಡುವಂತೆ ಪಿಎಂಎಲ್‌ಎ ನ್ಯಾಯಾಲಯಕ್ಕೆ ಪಿಎನ್‌ಬಿ ಬ್ಯಾಂಕ್ ಕೋರಿತ್ತು. ಮೋದಿಗೆ ಸೇರಿದ ಕಂಪೆನಿಗಳು ಈ ಆಸ್ತಿಯನ್ನು ಅಡಮಾನವಿಟ್ಟು ಅವರು ಬ್ಯಾಂಕ್‌ನಿಂದ ಸಾಲ ಪಡೆದುಕೊಂಡಿದ್ದರು ಎಂದು ಜುಲೈನಲ್ಲಿ ಸಲ್ಲಿಸಲಾಗಿರುವ ಮನವಿಯಲ್ಲಿ ವಿವರಿಸಲಾಗಿದೆ.
ನ್ಯಾಯಾಲಯದ ನಿರ್ದೇಶನದಂತೆ ಮರಳಿಸುವಂತೆ ಕೋರಿ ಮುಚ್ಚಳಿಕೆ ಸಲ್ಲಿಸಿದ ಬಳಿಕ ಎನ್‌ಸಿಎಲ್‌ಟಿ ನೇಮಿಸಿರುವ ಋಣ ವಿಮೋಚನಾಕಾರರಿಗೆ ಆಸ್ತಿಯನ್ನು ಬಿಡುಗಡೆ ಮಾಡಬೇಕು ಎಂದು ಪಿಎಂಎಲ್‌ಎ ವಿಶೇಷ ನ್ಯಾಯಾಧೀಶ ವಿಸಿ ಬಾರ್ದೆ ಆದೇಶ ಮಾಡಿದ್ದಾರೆ.
ಎಫ್‌ಐಎಲ್‌ಗೆ ಎನ್‌ಸಿಎಲ್‌ಟಿ ಋಣ ವಿಮೋಚನಾಕಾರರನ್ನಾಗಿ ಎಚ್ ವಿ ಸುಬ್ಬಾ ರಾವ್ (ನ್ಯಾಯಿಕ ಸದಸ್ಯ) ಮತ್ತು ಚಂದ್ರಭಾನ್ ಸಿಂಗ್ (ತಾಂತ್ರಿಕ ಸದಸ್ಯ) ಹಾಗೂ ಈಚೆಗೆ ಶಾಂತನು ಟಿ ರೇ ಅವರನ್ನು ನೇಮಿಸಲಾಗಿದೆ.
ಕಂಪನಿಯೊಂದಿಗೆ ಯಾವುದೇ ವ್ಯಾಪಾರ ನಿರೀಕ್ಷೆಗಳಿಲ್ಲ; ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಕಾನೂನು ಹಾದಿ ಅನುಸರಿಸುವುದರಲ್ಲಿ ಫಲವಿಲ್ಲ; ಸಾಲದ ಹಣವನ್ನು ವಸೂಲಿ ಮಾಡಲು ಮತ್ತಷ್ಟು ಹಣ ವ್ಯಯಿಸುವುದರಲ್ಲಿ ಅರ್ಥವಿಲ್ಲ; ಸಾಲಗಾರರ ಮೊತ್ತವನ್ನು ಮರುಪಾವತಿಸಲು ಸಾಕಷ್ಟು ಸ್ವತ್ತುಗಳಿಲ್ಲ ಎಂಬ ಕಾರಣಗಳ ಹಿನ್ನೆಲೆಯಲ್ಲಿ ಎಫ್‌ಐಎಲ್ ಅನ್ನು ಮುಚ್ಚಲು ಸಾಲ ನೀಡುವ ಸಮಿತಿ ಸದಸ್ಯರು ಜಂಟಿಯಾಗಿ ಸಭೆ ನಡೆಸಿ ನಿರ್ಧಾರ ಮಾಡಿದ್ದರು.