ಸುದ್ದಿಗಳು

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್‌ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಮುಡಾ ಆಯುಕ್ತರಾಗಿದ್ದ ಅವಧಿಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಅನರ್ಹರಿಗೆ ನಿವೇಶನಗಳನ್ನು ಹಂಚಿದ್ದಾರೆ ಎಂಬ ಆರೋಪವನ್ನು ಜಿ ಟಿ ದಿನೇಶ್ ಕುಮಾರ್ ಎದುರಿಸುತ್ತಿದ್ದಾರೆ.

Bar & Bench

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪ ಎದುರಿಸಿದ್ದ ಮೂಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇಡಿ) ಬಂಧನಕ್ಕೆ ಒಳಗಾಗಿದ್ದ ಮುಡಾ ಮಾಜಿ ಆಯುಕ್ತ ಜಿ ಟಿ ದಿನೇಶ್ ಕುಮಾರ್‌ ಅವರಿಗೆ ಜಾಮೀನು ಮಂಜೂರು ಮಾಡಿ ಕರ್ನಾಟಕ ಹೈಕೋರ್ಟ್ ಬುಧವಾರ ಆದೇಶಿಸಿದೆ.

ಇಡಿ ದಾಖಲಿಸಿದ್ದ ಪ್ರಕರಣ ಸಂಬಂಧ ಜಾಮೀನು ಕೋರಿ‌ ಐದನೇ ಆರೋಪಿ ಜಿ ಟಿ ದಿನೇಶ್ ಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಅರ್ಜಿದಾರರು ಐದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ವಿಚಾರಣಾ ನ್ಯಾಯಾಲಯಕ್ಕೆ ತೃಪ್ತಿದಾಯಕವಾದ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಪ್ರತ್ಯೇಕ ಹಾಗೂ ಪರೋಕ್ಷವಾಗಿ ಪ್ರಾಸಿಕ್ಯೂಷನ್ ಸಾಕ್ಷ್ಯ ತಿರುಚಲು ಹಾಗೂ ತನಿಖೆ ಅಡ್ಡಿಪಡಿಸಲು ಯತ್ನಿಸಬಾರದು. ಸಕಾರಣಕ್ಕೆ ವಿಚಾರಣಾ ನ್ಯಾಯಾಲಯದಿಂದ ವಿನಾಯಿತಿ ಪಡೆಯುವುದರ ಹೊರತಾಗಿ ಎಲ್ಲಾ ನಿಗದಿತ ದಿನಾಂಕಗಳು ವಿಚಾರಣೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಈ ಯಾವುದೇ ಷರತ್ತು ಉಲ್ಲಂಘನೆ ಮಾಡಿದರೂ ಅರ್ಜಿದಾರ ಜಾಮೀನು ಆದೇಶ ರದ್ದತಿಗೆ ಕೋರಲು ಜಾರಿ ನಿರ್ದೇಶನಾಲಯವು ಸ್ವತಂತ್ರವಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣ ಸಂಬಂಧ 2026ರ ಜನವರಿ 20ರಂದು ಮೊದಲಿಗೆ ಜಾಮೀನು ತಿರಸ್ಕರಿಸಿದ್ದ ನ್ಯಾಯಾಲಯವು ವಿಚಾರಣೆ ಪ್ರಗತಿ ಹೊಂದದಿದ್ದರೆ ಅಥವಾ ಬದಲಾದ ಸನ್ನಿವೇಶದಲ್ಲಿ ಮತ್ತೆ ಹೈಕೋರ್ಟ್ ಮೊರೆ ಹೋಗಬಹುದು ಎಂದು ಅರ್ಜಿದಾರರಿಗೆ ತಿಳಿಸಿತ್ತು. ಇದಾದ ಎರಡು ತಿಂಗಳ ನಂತರ 2026ರ ಮಾರ್ಚ್‌ 3ರಂದು ಆರೋಪ ಪಟ್ಟಿಯನ್ನು ಸಲ್ಲಿಸಲಾಯಿತು. ನಂತರವೇ ಅರ್ಜಿದಾರರಿಗೆ ಇದೇ ಅಪರಾಧ ಸಂಬಂಧ (ಪ್ರಿಡಿಕೇಟ್ ಅಫೆನ್ಸ್) ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ದೂರಿನ ಕುರಿತಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು‌ 2026ರ ಮಾರ್ಚ್‌ 16ರಂದು ಅರ್ಜಿದಾರರಿಗೆ ಜಾಮೀನು (ಡೀಫಾಲ್ಟ್ ) ಮಂಜೂರು ಮಾಡಿತ್ತು ಎಂದು ಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಇದಾದ ನಂತರ 2026ರ ಮಾರ್ಚ್‌ 28ರಂದು ಮೂವರು ಆರೋಪಿಗಳ (ಎ2 ರಿಂದ 4) ವಿರುದ್ಧ ಇಡಿ ಪೂರಕ ದೂರು ದಾಖಲಿಸಿತು.‌ ಇಡಿ ಅವರನ್ನು ಬಂಧನ ಮಾಡಿಲ್ಲ.‌‌ ಅರ್ಜಿದಾರರು ಸಹ 2ರಿಂದ 4ನೇ ಆರೋಪಿಗಳ ಸ್ಥಾನದಲ್ಲಿಯೇ ನಿಲ್ಲುತ್ತಾರೆ ಎಂಬುದು ಅವರ ವಾದ. ಇಡಿ ನ್ಯಾಯಾಲಯವು 2026ರ ಏಪ್ರಿಲ್‌ 4ರಂದು ಇಡಿ ದೂರನ್ನು ದೂರನ್ನು ಪರಿಗಣಿಸಿತ್ತು.‌ ಆಗಲೂ ಸಹ ಇಡಿಯ ಪೂರಕ ದೂರು ಸಂಬಂಧ 2ರಿಂದ 4ನೇ ಆರೋಪಿ ವಿರುದ್ಧದ ವಿಚಾರಣೆಯು ಪೂರ್ವ ಕಾಗ್ನಿಜೆನ್ಸ್ ಹಂತದಲ್ಲಿಯೇ ಉಳಿದಿದೆ.  ಈ ಐದು ಅಂಶಗಳು ‌ಪ್ರಕರಣದಲ್ಲಿ ಬದಲಾದ ಸನ್ನಿವೇಶಗಳಿಗೆ ದ್ಯೋತಕವಾಗಿದೆ.‌ ಇದರಿಂದ ಅರ್ಜಿದಾರರಿಗೆ ಜಾಮೀನು ನೀಡಬಹುದಾಗಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಮುಡಾ ಆಯುಕ್ತರಾಗಿದ್ದ ಅವಧಿಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಅನರ್ಹರಿಗೆ ನಿವೇಶನಗಳನ್ನು ಹಂಚಿದ್ದಾರೆ ಎಂಬ ಆರೋಪವನ್ನು ಜಿ ಟಿ ದಿನೇಶ್ ಕುಮಾರ್ ಎದುರಿಸುತ್ತಿದ್ದಾರೆ. ಈ ಸಂಬಂಧ ಪಿಎಂಎಲ್ಎ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ 2025ರ ಸೆಪ್ಟೆಂಬರ್‌ 17ರಂದು ದಿನೇಶ್​​ ಅವರನ್ನು ಬಂಧಿಸಿತ್ತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆ ನಂತರ ಅಕ್ಟೋಬರ್‌ 5ಕ್ಕೆ ಇ ಡಿ, ದಿನೇಶ್ ಕುಮಾರ್​ಗೆ ಸೇರಿದ ಸುಮಾರು 40 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಅಲ್ಲದೆ, ದಿನೇಶ್ ಕುಮಾರ್ ವಿರುದ್ಧ 2025ರ ನವೆಂಬರ್‌ 19ರಂದು ಆರೋಪಪಟ್ಟಿ ಸಲ್ಲಿಸಿದ್ದು, ಅನರ್ಹರಿಗೆ ಒಟ್ಟು 450 ಕೋಟಿ ರೂಪಾಯಿಗೂ ಅಧಿಕ ಬೆಲೆಬಾಳುವ 283 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ ಎಂದು ಉಲ್ಲೇಖಿಸಿದೆ.

2025ರ ಅಕ್ಟೋಬರ್‌ 10ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದಿನೇಶ್ ಕುಮಾರ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಹಾಗಾಗಿ, ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಆ ಅರ್ಜಿಯನ್ನು 2026ರ ಜನವರಿ 20ರಂದು  ತಿರಸ್ಕರಿಸಿದ್ದ ಹೈಕೋರ್ಟ್, ಮೂರು ತಿಂಗಳ ನಂತರ ಬದಲಾದ ಸನ್ನಿವೇಶದಲ್ಲಿ ಜಾಮೀನು ಕೋರಿ ಮತ್ತೆ ಅರ್ಜಿ ಸಲ್ಲಿಸಬಹುದು ಎಂದು ದಿನೇಶ್ಗೆ ಸೂಚಿಸಿತ್ತು. ಮಾರ್ಚ್‌ 16ರಂದು ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ನೀಡಿದ್ದರೂ ಇಡಿ ಪ್ರಕರಣ ಬಾಕಿಯಿದ್ದ ಹಿನ್ನೆಲೆಯಲ್ಲಿ ಬಿಡುಗಡೆಯಾಗಿರಲಿಲ್ಲ. ನಂತರ ಜಾಮೀನು ಕೋರಿ ಜೂನ್‌ 2ರಂದು ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.