Calcutta High Court
Calcutta High Court 
ಸುದ್ದಿಗಳು

[ಪಿಎಂಎಲ್ಎ] ತನಿಖಾ ಸಂಸ್ಥೆಯು ಹೆಚ್ಚಿನ ತನಿಖೆಗಾಗಿ ಅನುಮತಿ ಕೋರುವ ಅಗತ್ಯವಿಲ್ಲ: ಕಲ್ಕತ್ತಾ ಹೈಕೋರ್ಟ್

Bar & Bench

ತನಿಖಾ ಸಂಸ್ಥೆ ಹೆಚ್ಚಿನ ತನಿಖೆಗಾಗಿ ಅನುಮತಿ ಕೋರುವ ಅಗತ್ಯವಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ತಿಳಿಸಿದೆ [ಜಾರಿ ನಿರ್ದೇಶನಾಲಯ ಮತ್ತು ದೇಬಬ್ರತಾ ಹಲ್ಡರ್ ನಡುವಣ ಪ್ರಕರಣ].

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅಡಿ ಆರೋಪಿಯ ಜಾಮೀನು ರದ್ದುಗೊಳಿಸುವ ವೇಳೆ ಅದು ಈ ವಿಚಾರ ಸ್ಪಷ್ಟಪಡಿಸಿತು. ಮುಂದಿನ ತನಿಖೆ ನಡೆಸುವ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸುವುದಷ್ಟೇ ತನಿಖಾ ಸಂಸ್ಥೆಯ ಕರ್ತವ್ಯವಾಗಿದೆ ಎಂದು ನ್ಯಾಯಮೂರ್ತಿ ತೀರ್ಥಂಕರ ಘೋಷ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.  

“ಹೆಚ್ಚಿನ ತನಿಖೆಗಾಗಿ ತನಿಖಾ ಸಂಸ್ಥೆ ಅನುಮತಿ ಕೋರುವ ಅಗತ್ಯವಿಲ್ಲ ಎಂದು ಹೇಳುವುದು ಸೂಕ್ತವಾಗುತ್ತದೆ. ಇದು ಈಗಾಗಲೇ ಇತ್ಯರ್ಥವಾಗಿರುವ ಕಾನೂನಿನ ತತ್ವ ಮತ್ತು ತನಿಖಾ ಸಂಸ್ಥೆಯ ವಿಶೇಷಾಧಿಕಾರವೂ ಆಗಿದೆ. ಪ್ರಕರಣದಲ್ಲಿ ತಾನೇನು ಮಾಡಿದ್ದೇನೆ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸುವುದಷ್ಟೇ ತನಿಖಾ ಸಂಸ್ಥೆಯ ಕರ್ತವ್ಯವಾಗಿದೆ” ಎಂದು ಪೀಠ ತಿಳಿಸಿದೆ.

ದೇಬಬ್ರತಾ ಹಲ್ಡರ್ ಎಂಬುವವರು ₹173.50 ಕೋಟಿಯಷ್ಟು ಸಾರ್ವಜನಿಕ ಹಣ ಲೂಟಿ ಮಾಡಿದ ಆರೋಪ ಎದುರಿಸುತ್ತಿದ್ದು ಹೀಗಾಗಿ ಅವರ ಜಾಮೀನು ರದ್ದುಗೊಳಿಸುವಂತೆ ಜಾರಿ ನಿರ್ದೇಶನಾಲಯ ಮೇಲ್ಮನವಿ ಸಲ್ಲಿಸಿತ್ತು.  

ಹೆಚ್ಚಿನ ತನಿಖೆಗೆ ಜಾರಿ ನಿರ್ದೇಶನಾಲಯ ಕೋರಿಲ್ಲ ಮತ್ತು ಆರೋಪಿಯನ್ನು ವಶದಲ್ಲಿರಿಸಿಕೊಳ್ಳುವುದರಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂದು ತಿಳಿಸಿ  ಕಳೆದ ಏಪ್ರಿಲ್‌ನಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿತ್ತು. ಪ್ರಾಸಿಕ್ಯೂಷನ್‌ ದಾಖಲಿಸಿರುವ ದೂರಿನಲ್ಲಿಯೇ ಹೆಚ್ಚಿನ ತನಿಖೆಯ ಅಗತ್ಯವಿರುವುದನ್ನು ಹೇಳಲಾಗಿದೆ, ಹಾಗಿದ್ದರೂ ವಿಶೇಷ ನ್ಯಾಯಾಲಯವು ಹೆಚ್ಚಿನ ತನಿಖೆಯ ಅಗತ್ಯವನ್ನು ಪ್ರಾಸಿಕ್ಯೂಷನ್‌ ಕೋರಿಲ್ಲ ಎಂದಿರುವುದು ನಿಯಮಾವಳಿಗಳ ಆರ್ಥಿಕ ಅಪರಾಧಗಳ ನಿಯಂತ್ರಣದ ನಿಯಮಗಳ ಅನ್ವಯ ತಪ್ಪು ನಡೆಯಾಗಿದೆ ಎಂದು ಹೈಕೋರ್ಟ್‌ ವಿವರಿಸಿದೆ

(ಆಂಧ್ರಪ್ರದೇಶ ಮುಖ್ಯಮಂತ್ರಿ) ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಸಿಬಿಐ ನಡುವಣ ಪ್ರಕರಣವನ್ನು ಆಧರಿಸಿ ನ್ಯಾಯಾಲಯ ಆದೇಶ ನೀಡಿತು. ಆ ಪ್ರಕರಣದಲ್ಲಿ ಆರ್ಥಿಕ ಅಪರಾಧಗಳು ಬೇರೆಯೇ ವರ್ಗಕ್ಕೆ ಸೇರಿದ್ದು ಜಾಮೀನು ನೀಡುವಾಗ ವಿಭಿನ್ನವಾಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ತೀರ್ಪು ನೀಡಲಾಗಿತ್ತು.