Mehul Choksi 
ಸುದ್ದಿಗಳು

[ಪಿಎನ್‌ಬಿ ವಂಚನೆ ಪ್ರಕರಣ] ಮೆಹುಲ್‌ ಚೋಕ್ಸಿಗೆ ವೈದ್ಯಕೀಯ ಜಾಮೀನು ನೀಡಿದ ಪೂರ್ವ ಕೆರೆಬಿಯನ್‌ ಸುಪ್ರೀಂ ಕೋರ್ಟ್‌

ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿ ಹಾಜರಾಗಲು ಡೊಮಿನಿಕನ್ ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ 10,000 ಪೂರ್ವ ಕೆರಿಬಿಯನ್ ಡಾಲರ್ ಬಾಂಡ್ ಅನ್ನು ನಗದು ರೂಪದಲ್ಲಿ ಸಲ್ಲಿಸುವಂತೆ ನ್ಯಾಯಾಲಯವು ಚೋಕ್ಸಿಗೆ ನಿರ್ದೇಶನ ನೀಡಿದೆ.

Bar & Bench

ವಿಶೇಷ ವೈದ್ಯಕೀಯ ಸೌಲಭ್ಯ ಪಡೆಯಲು ಆಂಟಿಗುವಾ ಮತ್ತು ಬಾರ್ಬುಡಾಕ್ಕೆ ತೆರಳುವ ಸಂಬಂಧ ಪೂರ್ವ ಕೆರೆಬಿಯನ್‌ ಸುಪ್ರೀಂ ಕೋರ್ಟ್‌ ಸೋಮವಾರ ದೇಶಭ್ರಷ್ಟ ಉದ್ಯಮಿ ಮೆಹುಲ್‌ ಚೋಕ್ಸಿಗೆ ಜಾಮೀನು ಮಂಜೂರು ಮಾಡಿದೆ.

ಒಪ್ಪಿಗೆ ಆದೇಶವನ್ನು ನ್ಯಾಯಮೂರ್ತಿ ಬರ್ನಿ ಸ್ಟೀಫನ್‌ಸನ್‌ ಅವರು ಹೊರಡಿಸಿದ್ದು “ವೈದ್ಯಕೀಯ ಅಧಿಕಾರಿಗಳು ಶಿಫಾರಸ್ಸು ಮಾಡಿದಂತೆ ಸದರಿ ವ್ಯಾಪ್ತಿಯಲ್ಲಿ (ಕಾಮನ್‌ವೆಲ್ತ್‌ ಆಫ್‌ ಡೊಮಿನಿಕಾ) ಅರ್ಜಿದಾರರಿಗೆ (ಚೋಕ್ಸಿ) ವಿಶೇಷ ವೈದ್ಯಕೀಯ ಸೌಲಭ್ಯ ದೊರೆಯದೇ ಇರುವುದರಿಂದ ಆಂಟಿಗುವಾ ಮತ್ತು ಬಾರ್ಬುಡಾಕ್ಕೆ ತೆರಳಿ ಚಿಕಿತ್ಸೆ ಪಡೆಯಲು ಜಾಮೀನು ನೀಡಲಾಗಿದೆ” ಎಂದು ಹೇಳಲಾಗಿದೆ.

ಭಾರತದಲ್ಲಿ ಚೋಕ್ಸಿಯನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿದ್ದು, ಅವರು 14,500 ಕೋಟಿ ರೂಪಾಯಿ ಮೌಲ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಭಾರತದ ತನಿಖಾ ಸಂಸ್ಥೆಗಳು ಡೊಮಿನಿಕಾ ನ್ಯಾಯಾಲಯದಲ್ಲಿ ದಾವೆ ಹೂಡಿವೆ. ಚೋಕ್ಸಿಯನ್ನು ಹಸ್ತಾಂತರಿಸಿದರೆ ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆ ಎದುರಿಸಲಿದ್ದಾರೆ.

ಆಂಟಿಗುವಾ ಮತ್ತು ಬಾರ್ಬುಡಾದಲ್ಲಿರುವ ಸೇಂಟ್‌ ಜಾನ್‌ ಮೆಡಿಕಲ್‌ ಕೇಂದ್ರದಲ್ಲಿ ನರಶಾಸ್ತ್ರಜ್ಞ ಡಾ. ಗಾಡೇನ್‌ ಓಸ್ಬೋರ್ನ್‌ ಅವರನ್ನು ಸಂಪರ್ಕಿಸಲಿದ್ದಾರೆ ಎಂದು ಚೋಕ್ಸಿ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ತಜ್ಞರ ಬದಲಾವಣೆ ಅಥವಾ ಇನ್ನೊಬ್ಬ ತಜ್ಞರನ್ನು ಸಂಪರ್ಕಿಸುವ ವಿಚಾರವನ್ನು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಜಾಮೀನು ಮಂಜೂರಾತಿಗೂ ಮುನ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಅಥವಾ ಇನ್ನಾವುದೇ ದಿನಾಂಕದಂದು ವಿಚಾರಣೆಗೆ ನಿಗದಿಪಡಿಸಿದ ದಿನಾಂಕದಂದು ಹಾಜರಾಗಲು ಚೋಕ್ಸಿಗೆ ಡೊಮಿನಿಕನ್ ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ 10,000 ಡಾಲರ್‌ ಎಕ್ಸ್‌ಸಿಡಿ (ಪೂರ್ವ ಕೆರಿಬಿಯನ್ ಡಾಲರ್) ಹಣವನ್ನು ನಗದು ರೂಪದಲ್ಲಿ ಠೇವಣಿ ಇಡಲು ನಿರ್ದೇಶಿಸಲಾಗಿದೆ.

ಚೋಕ್ಸಿ ರಾಜ್ಯದಿಂದ ಹೊರಗಿರುವಾಗ ಮತ್ತು ವಿಚಾರಣೆ ಎದುರಿಸಲು ಚೋಕ್ಸಿ ಸಮರ್ಥವಾಗಿದ್ದಾರೆ ಎಂದು ವೈದ್ಯರು ಪ್ರಮಾಣೀಕರಿಸುವವರೆಗೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಾರೆ. ಅಲ್ಲಿಯವರೆಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ನಡೆಯುವ ಎಲ್ಲಾ ವಿಚಾರಣೆಗಳನ್ನು ಮುಂದೂಡಲಾಗಿದೆ ಎಂದು ಪೀಠ ಹೇಳಿದೆ.

ಆಂಟಿಗುವಾದಲ್ಲಿ ತಾವು ನೆಲೆಸುವ ವಿಳಾಸವನ್ನು ಆಂಟಿಗುವಾ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ನೀಡಬೇಕು. ಮುನ್ಸೂಚನೆ ನೀಡದೇ ಯಾವುದೇ ಕಾರಣಕ್ಕೂ ವಿಳಾಸ ಬದಲಿಸುವಂತಿಲ್ಲ ಎಂದು ಚೋಕ್ಸಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಡೊಮಿನಿಕಾಗೆ ಮರಳಿದ ಬಳಿಕ ತಮ್ಮ ನೂತನ ವಿಳಾಸದ ಮಾಹಿತಿಯನ್ನು ಡೊಮಿನಿಕನ್‌ ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ ನೀಡುವಂತೆಯೂ ನ್ಯಾಯಾಲಯವು ಚೋಕ್ಸಿಗೆ ನಿರ್ದೇಶಿಸಿದೆ.