POCSO ACT 
ಸುದ್ದಿಗಳು

ಪೋಕ್ಸೊ ಕಾಯಿದೆಯ ಸಮಸ್ಯೆ ಮತ್ತು ಸವಾಲುಗಳು: 2022ರಲ್ಲಿ ನ್ಯಾಯಾಲಯಗಳು ಸ್ಪಂದಿಸಿದ ಬಗೆ

ಅಪ್ರಾಪ್ತ ವಯಸ್ಕರ ನಡುವೆ ಸಮ್ಮತಿಯ ಲೈಂಗಿಕ ಕ್ರಿಯೆ ನಡೆದು, ಅಂತಹ ಹುಡುಗರಲ್ಲಿ ಬಹುತೇಕರು ಸಂತ್ರಸ್ತೆಯರನ್ನು ಮದುವೆಯಾಗಿದ್ದರೂ ಅವರು ಸೆರೆವಾಸ ಅನುಭವಿಸುವಂತಾದ್ದರಿಂದ ಕಾಯಿದೆ ಹೆಚ್ಚು ಚರ್ಚೆಗೀಡಾಯಿತು.

Bar & Bench

ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ವಿರುದ್ಧದ ಕಾಯಿದೆ  ಬಲಪಡಿಸಲು 2012ರಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯಿದೆ) ಜಾರಿಗೊಳಿಸಲಾಯಿತು. ಈ ಕಾಯಿದೆಯನ್ನು 2019ರಲ್ಲಿ ತಿದ್ದುಪಡಿ ಮಾಡಿ ಮಕ್ಕಳ ಮೇಲೆ ಲೈಂಗಿಕ ಅಪರಾಧಗಳಿಗೆ ಮರಣದಂಡನೆ ಸೇರಿದಂತೆ ಹೆಚ್ಚು ಕಠಿಣ ಶಿಕ್ಷೆಗಳನ್ನು ಜಾರಿಗೆ ತರಲಾಯಿತು.

ಆದರೆ ಅಪ್ರಾಪ್ತ ವಯಸ್ಕರ ನಡುವೆ ಸಮ್ಮತಿಯ ಲೈಂಗಿಕ ಕ್ರಿಯೆ ನಡೆದು,  ಅಂತಹ ಹುಡುಗರಲ್ಲಿ ಬಹುತೇಕರು ಸಂತ್ರಸ್ತೆಯರನ್ನು ಮದುವೆಯಾಗಿದ್ದರೂ ಅವರು ಸೆರೆವಾಸ ಅನುಭವಿಸುವಂತಾದ್ದರಿಂದ ಕಾಯಿದೆ ಹೆಚ್ಚು ಚರ್ಚೆಗೀಡಾಯಿತು. ಅಲ್ಲದೆ ಕಾಯಿದೆಯ ಪ್ರಕ್ರಿಯೆಯಿಂದಾಗಿ ಸಂತ್ರಸ್ತ ಮಕ್ಕಳು ತಜ್ಞರ ಪರಿಭಾಷೆಯಲ್ಲಿ ಹೇಳುವ ʼಮರು ಆಘಾತʼಕ್ಕೆ ಒಳಗಾಗುವಂತಾಯಿತು.

ಭಾರತದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಕೆಲ ದಿನಗಳ ಹಿಂದೆ ನ್ಯಾಯ ವಿತರಣಾ ಪ್ರಕ್ರಿಯೆಯಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ಮರು-ಆಘಾತ ಉಂಟಾಗುವುದನ್ನು ತಡೆಯುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಜೊತೆಗೆ ಸಿಜೆಐ ಡಿ ವೈ ಚಂದ್ರಚೂಡ್ ಅವರು ʼಪೋಕ್ಸೊ ಕಾಯಿದೆಯಡಿಯ ಪ್ರಕರಣಗಳಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಿದರೆ ಸಂತ್ರಸ್ತ ಮಕ್ಕಳು ಇನ್ನಷ್ಟು ಸಂತ್ರಸ್ತರಾಗಬಹುದು ಎಂದು ಎಚ್ಚರಿಕೆ ನೀಡಿದರು. ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವಿಚಾರಣೆಯು ಸಂತ್ರಸ್ತ-ಸ್ನೇಹಿಯಾಗಿರುವ ವ್ಯವಸ್ಥೆ  ರೂಪಿಸುವ ಮತ್ತು ಸುಧಾರಿಸುವ ಗುರಿ ಕಾರ್ಯಾಂಗ ಮತ್ತು ನ್ಯಾಯಾಂಗ ಎರಡಕ್ಕೂ ಇದೆ ಎಂಬುದನ್ನು ಇದು ಸೂಚಿಸುತ್ತದೆ.

ಈ ಕಾಯಿದೆ ಮತ್ತದರ ವಿವಿಧ ಅಂಶಗಳೊಂದಿಗೆ 2022 ರಲ್ಲಿ ನ್ಯಾಯಾಲಯಗಳು ಮತ್ತು ಕಾರ್ಯಾಂಗ ತೊಡಗಿಸಿಕೊಂಡಿದ್ದು ಅವುಗಳನ್ನು ಇಲ್ಲಿ ವಿವರಿಸಲಾಗಿದೆ:

ಸಮ್ಮತಿ ವಯೋಮಿತಿ ಇಳಿಕೆ

ಪೋಕ್ಸೊ ಕಾಯಿದೆಯ ಅಡಿಯಲ್ಲಿ ಸಮ್ಮತಿಯ ವಯಸ್ಸು  ಎಂಬುದು ಬಿಸಿ ಬಿಸಿ ಚರ್ಚೆಗೆ ಒಳಗಾದ ವಿಷಯಗಳಲ್ಲಿ ಒಂದು. 

ಕಾಯಿದೆಯು ಮಗುವನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿ ಎಂದು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ನಡುವಿನ ಎಲ್ಲಾ ಲೈಂಗಿಕ ಕ್ರಿಯೆಗಳನ್ನು ಅದು ಒಪ್ಪಿಗೆಯಿಂದ  ನಡೆದಿದೆಯೇ ಎಂಬುದನ್ನು ಲೆಕ್ಕಿಸದೆ ಅಪರಾಧ ಎನ್ನುತ್ತದೆ.

ಸಮ್ಮತಿಯ ವಯೋಮಿತಿ ತುಂಬಾ ಹೆಚ್ಚಿದ್ದು ವಿವಿಧ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಸಮ್ಮತಿಯ ವಯೋಮಿತಿಯ ಬಗ್ಗೆ ಮರುಚಿಂತನೆ ನಡೆಸಬೇಕು ಎಂದು ಕರೆ ನೀಡಿದ್ದಾರೆ.

ಪೋಕ್ಸೊ ಕಾಯಿದೆಯಡಿ ಸಮ್ಮತಿಯ ವಯೋಮಿತಿಯನ್ನು ಪ್ರಸ್ತುತ 18 ವರ್ಷಗಳಿಗಿಂತ ಕಡಿಮೆ ಮಾಡಲು ಶಾಸಕಾಂಗವು "ಉತ್ಸುಕತೆಯಿಂದ ಕಾಯುತ್ತಿದೆ" ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿತು. ಆದರೆ ಆ ಕಾರ್ಯ ಪೂರ್ಣಗೊಳ್ಳುವವರೆಗೆ,  ಸಮ್ಮತಿಯ ವಯಸ್ಸನ್ನು ಬೇರೆ ರೀತಿಯಲ್ಲಿ ಅರ್ಥೈಸಲು ಸಾಧ್ಯವಿಲ್ಲ ಎಂದಿತು.

ಲೈಂಗಿಕ ಸಂಭೋಗ ನಡೆಸಿ ಮದುವೆಯಾಗುವ ಯುವ ಜೋಡಿಗಳ ವಿರುದ್ಧದ ಪೋಕ್ಸೊ ಕಾಯಿದೆಯಡಿ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ ಎಂದು ಕರ್ನಾಟಕ ಹೈಕೋರ್ಟ್‌ ಕೂಡ ಇತ್ತೀಚೆಗೆ ಹೇಳಿದೆ. ಹೀಗಾಗಿ ವಾಸ್ತವಾಂಶವನ್ನು ಗಮನಿಸಿ ವಯಸ್ಸಿನ ಮಾನದಂಡಗಳನ್ನು ಮರುಪರಿಶೀಲಿಸಬೇಕೆಂದು ಅದು ಕಾನೂನು ಆಯೋಗವನ್ನು ಕೋರಿದೆ.

ನವೆಂಬರ್ 2022ರಲ್ಲಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ʼಅಪರಾಧಗಳ ಕಡ್ಡಾಯ ವರದಿ ಮತ್ತು ಸಮ್ಮತಿಯ ವಯಸ್ಸಿನೊಂದಿಗೆ ವ್ಯವಹರಿಸುವ ಪೋಕ್ಸೊ ಕಾಯಿದೆಯ ನಿಯಮಾವಳಿಗಳನ್ನು ಮರುಪರಿಶೀಲಿಸುವಂತೆ ಕರೆ ನೀಡಿದರು.

ಇತ್ತೀಚೆಗೆ ಸಿಜೆಐ ಚಂದ್ರಚೂಡ್‌ ಅವರು ʼಪೋಕ್ಸೊ ಕಾಯಿದೆ ಅಡಿಯಲ್ಲಿ ಸಮ್ಮತಿಯ ವಯಸ್ಸು 18 ವರ್ಷಗಳಾಗಿದ್ದು, ಇದು ಅಂತಹ ಪ್ರಕರಣಗಳನ್ನು ವ್ಯವಹರಿಸುವ ನ್ಯಾಯಾಧೀಶರಿಗೆ ಕಷ್ಟಕರವಾದ ಪ್ರಶ್ನೆಗಳನ್ನು ಒಡ್ಡುತ್ತಿದೆ ಎಂಬ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಸನ ರೂಪಿಸುವವರು ಈ ಬಗ್ಗೆ ಗಮನಹರಿಸಬೇಕುʼ ಎಂದಿದ್ದರು.

ಈ ವರ್ಗದ ಪ್ರಕರಣಗಳು ಸಂಬಂಧಪಟ್ಟ ನ್ಯಾಯಾಧೀಶರಿಗೆ ಕಷ್ಟಕರ ಪ್ರಶ್ನೆ ಒಡ್ಡುತ್ತಿದ್ದುದನ್ನು ನೋಡಿದ್ದೇನೆ. ಈ ಸಮಸ್ಯೆಯ ಸುತ್ತ ಆತಂಕ ಬೆಳೆಯುತ್ತಿದ್ದು, ಹದಿಹರೆಯದ ಆರೋಗ್ಯದ ಕುರಿತ ತಜ್ಞರ ವಿಶ್ವಾಸಾರ್ಹ ಸಂಶೋಧನೆಯ ನೆಲೆಯಲ್ಲಿ ಶಾಸಕಾಂಗ ಇದನ್ನು ಪರಿಗಣಿಸಬೇಕು ಎಂದು ತಿಳಿಸಿದ್ದರು.

ಆದರೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಪೋಕ್ಸೊ ಅಡಿ ಸಮ್ಮತಿಯ ವಯೋಮಿತಿ ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಡಪಡಿಸಿತು.

ಸಮ್ಮತಿಯ ಲೈಂಗಿಕತೆ ಇರುವ ಪ್ರಕರಣಗಳಲ್ಲಿ ಕಾನೂನನ್ನು ಸರಿದೂಗಿಸಿ  ಆರೋಪಿಗಳ ಸಹಾಯಕ್ಕೆ ನ್ಯಾಯಾಲಯಗಳು ಮುಂದಾಗುತ್ತವೆಯೇ ಎಂಬುದನ್ನು ಕಾದು ನೋಓಡಬೇಕಿದೆ.

ಮುಸ್ಲಿಂ ಅಪ್ರಾಪ್ತ ಬಾಲಕಿಯ ವಿವಾಹ ಮತ್ತು ಪೋಕ್ಸೊ

ಪೋಕ್ಸೊ ಕಾಯಿದೆ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನಿನ ನಡುವಿನ ವ್ಯತ್ಯಾಸ ಕೂಡ ಚರ್ಚೆಗೊಳಗಾಗುತ್ತಿರುವ ಮತ್ತೊಂದು ವಿಚಾರ. ಮುಸ್ಲಿಂ ವಿವಾಹಗಳು ವೈಯಕ್ತಿಕ ಕಾನೂನಿನಿಂದ ನಿಯಂತ್ರಿತವಾಗಿದ್ದು 15 ವರ್ಷ ತಲುಪಿದ ಮುಸ್ಲಿಂ ಹುಡುಗಿ ಇಸ್ಲಾಂ ಕಾನೂನಿನ ಪ್ರಕಾರ ಮದುವೆಯಾಗಲು ಸಮರ್ಥಳೆಂದು ಪರಿಗಣಿಸಲಾಗುತ್ತದೆ.

ಅಪ್ರಾಪ್ತ ವಯಸ್ಕಳಾದ ಮುಸ್ಲಿಂ ಪತ್ನಿಯೊಂದಿಗಿನ ಲೈಂಗಿಕ ಕ್ರಿಯೆಗೆ ಪೋಕ್ಸೊ ಕಾಯಿದೆಯಿಂದ ವಿನಾಯಿತಿ ಇದೆಯೇ ಎಂಬುದು ಹಲವು ಪ್ರಕರಣಗಳಲ್ಲಿ ಮುನ್ನೆಲೆಗೆ ಬಂದ ಪ್ರಶ್ನೆಯಾಗಿದ್ದು ವಿವಿಧ ಹೈಕೋರ್ಟ್‌ಗಳು ವಿವಾದಾತ್ಮಕ ತೀರ್ಪು ನೀಡಿವೆ.

ವೈಯಕ್ತಿಕ ಕಾನೂನಿನಡಿಯಲ್ಲಿ ಮುಸ್ಲಿಮರ ವಿವಾಹವನ್ನು ಪೋಕ್ಸೊ ಕಾಯಿದೆಯಿಂದ ಹೊರಗಿಡಲಾಗುವುದಿಲ್ಲ. ತನ್ನ ಅಪ್ರಾಪ್ತ ವಯಸ್ಕ ಮುಸ್ಲಿಂ ಪತ್ನಿಯೊಂದಿಗೆ ಲೈಂಗಿಕ ಸಂಬಂಧ ನಡೆಸುವ ಪತಿಯು ಪೋಕ್ಸೊ ಕಾಯಿದೆಯಡಿ ಹೊಣೆಗಾರನಾಗುತ್ತಾನೆ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿತ್ತು.

ಕರ್ನಾಟಕ ಹೈಕೋರ್ಟ್ ಅಕ್ಟೋಬರ್‌ನಲ್ಲಿ ಪರಸ್ಪರ ವ್ಯತಿರಿಕ್ತವಾಗಿರುವ ಎರಡು  ತೀರ್ಪುಗಳನ್ನು ನೀಡಿತು. ಒಂದು ಪ್ರಕರಣದಲ್ಲಿ ಸಮ್ಮತಿಯ ಲೈಂಗಿಕತೆಯ ವಯೋಮಿತಿಗೆ ಸಂಬಂಧಿಸಿದಂತೆ ಪೋಕ್ಸೊ ಕಾಯಿದೆ ಮುಸ್ಲಿಂ ವೈಯಕ್ತಿಕ ಕಾನೂನಿಗಿಂತ ಮಿಗಿಲು ಎಂದಿತ್ತು. ಹೀಗಾಗಿ ಅಪ್ರಾಪ್ತ ಮುಸ್ಲಿಂ ಹುಡುಗಿಯೊಂದಿಗಿನ ಮದುವೆಯ ನಂತರದ ಲೈಂಗಿಕತೆಗೆ ಪೋಕ್ಸೊ ಕಾಯಿದೆಯಿಂದ ವಿನಾಯಿತಿ ಇರದು ಎಂದು ಅದು ಹೇಳಿತ್ತು.

ಆದರೆ ಮತ್ತೊಂದು ಪ್ರಕರಣದಲ್ಲಿ ಅಪ್ರಾಪ್ತ ಮುಸ್ಲಿಂ ಪತ್ನಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಅವಳು ಗರ್ಭ ಧರಿಸಲು ಕಾರಣವಾದ ವ್ಯಕ್ತಿಯ ವಿರುದ್ಧದ ಅತ್ಯಾಚಾರ ಪ್ರಕರಣ ಮತ್ತು ಪೋಕ್ಸೊ ಕಾಯಿದೆಯಡಿ ದಾಖಲಾಗಿದ್ದ ಪ್ರಕರಣವನ್ನು ಅದು ರದ್ದುಗೊಳಿಸಿತು.

ಇನ್ನು ದೆಹಲಿ ಹೈಕೋರ್ಟ್ ʼಮುಸ್ಲಿಂ ಕಾನೂನಿನ ಪ್ರಕಾರ, ಪ್ರೌಢಾವಸ್ಥೆ  ತಲುಪಿದ (15 ವರ್ಷಗಳು ಎನ್ನಲಾಗುವ) ಅಪ್ರಾಪ್ತ ಬಾಲಕಿಯು ತನ್ನ ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾಗಬಹುದು ಮತ್ತು ತನ್ನ ಪತಿಯೊಂದಿಗೆ ವಾಸಿಸುವ ಹಕ್ಕು ಆಕೆಗಿದೆ. ಅಂತಹ ಸಂದರ್ಭಗಳಲ್ಲಿ, ವಿವಾಹದ ನಂತರವಷ್ಟೇ ದೈಹಿಕ ಸಂಭೋಗ ಸಂಭವಿಸಿದಾಗ, ಪೋಕ್ಸೊ ಕಾಯಿದೆಯಡಿ ಅಪರಾಧ ಎನ್ನಲಾಗದು ಎಂದು ಅದು ಹೇಳಿದೆ.

ಇದೇ ರೀತಿಯ ತೀರ್ಪನ್ನು ಪಂಜಾಬ್ ಹೈಕೋರ್ಟ್ ನೀಡಿದ್ದು, ಇದನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ (ಎನ್‌ಸಿಪಿಸಿಆರ್) ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ಬಾಲ್ಯವಿವಾಹ ನಿಷೇಧ ಕಾಯಿದೆ ಮತ್ತು ಪೋಕ್ಸೋ ಕಾಯಿದೆಗೆ ವಿರುದ್ಧವಾಗಿ ಈ ತೀರ್ಪು ಬಾಲ್ಯವಿವಾಹ ಮತ್ತು ಮಕ್ಕಳೊಂದಿಗೆ ಲೈಂಗಿಕ ಸಂಭೋಗಕ್ಕೆ ಅನುಮತಿ ನೀಡುವಂತೆ ಇದೆ ಎಂದು ಎನ್‌ಸಿಪಿಸಿಆರ್ ತನ್ನ ಮೇಲ್ಮನವಿಯಲ್ಲಿ ಹೇಳಿದೆ.

ಅಕ್ಟೋಬರ್‌ನಲ್ಲಿ ಈ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, 15 ವರ್ಷ ವಯಸ್ಸಿನ ಮುಸ್ಲಿಂ ಹುಡುಗಿ ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ಮದುವೆ ಮಾಡಿಕೊಳ್ಳಲು ಸಮರ್ಥಳೇ ಎಂಬ ಪ್ರಶ್ನೆಯನ್ನು ಪರಿಶೀಲಿಸಲು ಒಪ್ಪಿಗೆ ಸೂಚಿಸಿತು.

ಮಕ್ಕಳ ಲೈಂಗಿಕ ದೌರ್ಜನ್ಯ ಬಹಿರಂಗಪಡಿಸುವಿಕೆ

ಪೋಕ್ಸೊ ಗೆ ಸಂಬಂಧಿಸಿದ ವಿವಿಧ ಅಂಶಗಳಿಗೆ 2022ರಲ್ಲಿ ನ್ಯಾಯಾಂಗ ನೀಡಿದ ಪ್ರತಿಕ್ರಿಯೆಯು ಕೆಲ ವಿರೋಧಾಭಾಸದ ಹೊರತಾಗಿಯೂ ಪ್ರೋತ್ಸಾಹದಾಯಕವಾಗಿದೆ. ಇದರ ಹೊರತಾಗಿಯೂ ಇನ್ನೂ ಅನೇಕ ಸಮಸ್ಯೆಗಳು ಮುಂದುವರೆದಿವೆ.

ಯುನಿಸೆಫ್‌ ಸಹಯೋಗದೊಂದಿಗೆ ಬಾಲ ನ್ಯಾಯ ಕುರಿತಾದ ಸುಪ್ರೀಂ ಕೋರ್ಟ್ ಸಮಿತಿ ಆಯೋಜಿಸಿದ್ದ ಪೋಕ್ಸೊ ಕಾಯಿದೆ ಕುರಿತಾದ ಎರಡು ದಿನಗಳ ರಾಷ್ಟ್ರೀಯ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಸಿಜೆಐ ಚಂದ್ರಚೂಡ್‌ ಅಪರಾಧಿ ಕುಟುಂಬ ಸದಸ್ಯನೇ ಆಗಿದ್ದರೂ ಮಕ್ಕಳ ಲೈಂಗಿಕ ದೌರ್ಜನ್ಯ ವರದಿ ಮಾಡುವಂತೆ ಕುಟುಂಬಗಳನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದ್ದರು.

ಅಪಮಾನ ಮತ್ತು ಕುಟುಂಬ ಗೌರವದ ಕಾರಣಕ್ಕೆ ಮೌನ ಸಂಸ್ಕೃತಿ ಅಸ್ತಿತ್ವದಲ್ಲಿದ್ದು ಇದು ಮಕ್ಕಳ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ವರದಿ ಮಾಡದಂತೆ ಕುಟುಂಬಗಳನ್ನು ತಡೆಯುತ್ತದೆ ಎಂದು ಅವರು ಹೇಳಿದ್ದರು.

ಆದರೆ ಕುಟುಂಬದ ಗೌರವ ಎಂಬುದು ಮಗುವಿನ ಹಿತಾಸಕ್ತಿಗೆ ಆದ್ಯತೆ ನೀಡುವುದಿಲ್ಲ ಎಂಬುದನ್ನು ಅರಿಯಬೇಕು ಮತ್ತು ಅಪರಾಧಿ ಕುಟುಂಬದ ಸದಸ್ಯರಾಗಿದ್ದರೂ ಸಹ ದೌರ್ಜನ್ಯ ಪ್ರಕರಣಗಳನ್ನು ವರದಿ ಮಾಡುವಂತೆ ಕುಟುಂಬಗಳನ್ನು ಪ್ರೋತ್ಸಾಹಿಸಬೇಕು ಎಂದು ಅವರು ಸಲಹೆ ನೀಡಿದ್ದರು.   

ಅದೇ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು ನ್ಯಾಯಾಧೀಶರನ್ನು ಹೆಚ್ಚಿಗೆ ನೇಮಿಸದೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯಿದೆ) ಅಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತ್ವರಿತ ನ್ಯಾಯಾಲಯಗಳ ಸ್ಥಾಪನೆ ಮಾಡುವುದು ನಿರರ್ಥಕ ಎಂದಿದ್ದರು.

ದೇಶದಾದ್ಯಂತ ಸುಮಾರು 2.26 ಲಕ್ಷ ಪ್ರಕರಣಗಳ ವಿಚಾರಣೆ ಬಾಕಿ ಇದ್ದು ಇದನ್ನು ನಿಭಾಯಿಸಲು ಸುಮಾರು 400 ಹೊಸ ತ್ವರಿತ ಪೋಕ್ಸೊ ನ್ಯಾಯಾಲಯಗಳನ್ನು ಸ್ಥಾಪಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಸಂಬಂಧಿಸಿದಂತೆ ಅವರು ಈ ಪ್ರತಿಕ್ರಿಯೆ ನೀಡಿದ್ದರು.

ಕಾನೂನು ಸಚಿವಾಲಯದ ನ್ಯಾಯಾಂಗ ಇಲಾಖೆಯು ವರ್ಷಾಂತ್ಯದ ಪತ್ರಿಕಾ ಪ್ರಕಟಣೆಯಲ್ಲಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಒಟ್ಟು 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 413 ಪೋಕ್ಸೊ ವಿಶೇಷ ನ್ಯಾಯಾಲಯಗಳೊಂದಿಗೆ 733 ತ್ವರಿತ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು  ಅವು 1,24,000ಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿವೆ

ಪೋಕ್ಸೊ ಕಾಯಿದೆಯನ್ನು ಪ್ರಸ್ತುತ ಒಂದೇ ಆಯಾಮದಲ್ಲಿ ಅರ್ಥೈಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಇದೇ ಸಂದರ್ಭದಲ್ಲಿ ವಿಷಾದಿಸಿದ್ದರು.

ಈ ಕಾಯಿದೆಯಡಿ  ಪರಿಣಾಮಕಾರಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಮತ್ತು ಅಪರಾಧಿಗಳು ಶಿಕ್ಷೆಗೆ ಗುರಿಯಾಗಿದ್ದಾರೆಯೇ ಎಂಬುದಕ್ಕೆ ಹೆಚ್ಚು ಗಮನ ನೀಡಬೇಕು ಎಂದು ಅವರು ಹೇಳಿದರು. ಆದರೆ, ಸಂತ್ರಸ್ತ-ಮಗುವಿನ ಪುನರ್ವಸತಿಗೆ ಅಷ್ಟೇ ಸಮಾನವಾದ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. 

ಕೇರಳದಲ್ಲಿ 2022ರಲ್ಲಿ, ಪೋಕ್ಸೊ ಕಾಯಿದೆ ಪ್ರಕರಣಗಳ ವಿಚಾರಣೆಗಾಗಿ ಮಕ್ಕಳ ಸ್ನೇಹಿ ವಿಶೇಷ ನ್ಯಾಯಾಲಯವನ್ನು ಎರ್ನಾಕುಲಂ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಉದ್ಘಾಟಿಸಲಾಯಿತು, ಕಾಯಿದೆಯ ಉದ್ದೇಶಕ್ಕೆ ಅನುಗುಣವಾಗಿ ಸರಿಯಾದ ದಿಕ್ಕಿನಲ್ಲಿ ಇರಿಸಿದ ಹೆಜ್ಜೆ ಇದಾಗಿದೆ. ಇಂತಹ ಹೆಚ್ಚಿನ ಸಕಾರಾತ್ಮಕ ಸುಧಾರಣೆಗಳನ್ನು ಜಾರಿಗೆ ತರುವ ಮತ್ತು ಕಾಯಿದೆಯ ಗುರಿ ಸಾಧಿಸುವ ನಿಟ್ಟಿನಲ್ಲಿ 2023ರಲ್ಲಿ ಹೆಚ್ಚು ಕ್ರಮ ಕೈಗೊಳ್ಳಬಹುದು ಎಂಬ ಭರವಸೆ ಇದೆ.