ಮುಕ್ತ ಮತ್ತು ಪಾರದರ್ಶಕ ತನಿಖೆಯ ದೃಷ್ಟಿಯಿಂದ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ದ ದಾಖಲಾಗಿರುವ ಪ್ರಕರಣದ ತನಿಖೆಯ ಮೇಲೆ ನಿಗಾ ಇಡಲು ತಕ್ಷಣ ಕರ್ನಾಟಕ ಹೈಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಕೋರಿ ರಿಜಿಸ್ಟ್ರಾರ್ ಜನರಲ್ ಅವರಿಗೆ ಕೆಲವು ವಕೀಲರು ಶುಕ್ರವಾರ ಪತ್ರ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನ ವಕೀಲರಾದ ಸಿದ್ಧಾರ್ಥ್ ಭೂಪತಿ, ಶ್ರೀರಾಮ್ ಟಿ. ನಾಯ್ಕ್, ಗಣೇಶ್ ಪ್ರಸಾದ್ ಬಿ ಎಸ್., ಗಣೇಶ್ ವಿ ಮತ್ತು ಕೆ ಎ ಪೊನ್ನಣ್ಣ ಅವರು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿದ್ದಾರೆ. ಮೈಸೂರಿನ ನಜರಾಬಾದ್ ಮತ್ತು ಚಿತ್ರದುರ್ಗದ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆಗಳನ್ನು ಪತ್ರ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಚಿತ್ರದುರ್ಗದ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ, ನ್ಯಾಯ ಮತ್ತು ಪಾರದರ್ಶಕವಾಗಿ ತನಿಖೆ ನಡೆಯುತ್ತಿಲ್ಲ ಎಂದು ವಕೀಲರು ಮನವಿಯಲ್ಲಿ ಆಕ್ಷೇಪಿಸಿದ್ದಾರೆ.
ಮೊದಲ ಆರೋಪಿಯಾಗಿರುವ ಸ್ವಾಮೀಜಿ ಅವರು ಹೆಸರಾಂತ ಮುರುಘಾ ಮಠದ ಮುಖ್ಯಸ್ಥರಾಗಿದ್ದು, ಹಲವು ಬೆಂಬಲಿಗರನ್ನು ಮಠ ಹೊಂದಿದೆ. ಮಕ್ಕಳ ಪ್ರಕರಣವಾಗಿರುವುದರಿಂದ ತನಿಖಾ ಸಂಸ್ಥೆಯು ಜಾಗರೂಕತೆಯಿಂದ ಇರಬೇಕು. ಸಂತ್ರಸ್ತ ವಿದ್ಯಾರ್ಥಿನಿಯರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅತ್ಯಂತ ಪ್ರಭಾವಿಯಾಗಿರುವ ಆರೋಪಿಯನ್ನು ಬಂಧಿಸುವುದಿರಲಿ ಪೊಲೀಸರು ಇದುವರೆಗೆ ಅವರಿಗೆ ಸಮನ್ಸ್ ನೀಡದಿರುವುದು ಆಘಾತಕಾರಿ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಸ್ವಾಮೀಜಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಅವರು ಮಠದಲ್ಲಿ ಆರೋಪಿ ಸ್ವಾಮೀಜಿ ಅವರನ್ನು ಭೇಟಿ ಮಾಡುತ್ತಿದ್ದಾರೆ. ಶಾಸಕರು ಆರೋಪಿ ಸ್ವಾಮೀಜಿಗೆ ಬೆಂಬಲ ನೀಡುತ್ತಿರುವುದು ಇದರಿಂದ ಸ್ಪಷ್ಟವಾಗಿದೆ ಎಂದು ಆಕ್ಷೇಪಿಸಲಾಗಿದೆ.
ಆರೋಪಿ ಸ್ವಾಮೀಜಿ ವಿರುದ್ಧ ಮಠದಲ್ಲಿನ ಉದ್ಯೋಗಿಯೊಬ್ಬರು ಪಿತೂರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾಧ್ಯಮ ಹೇಳಿಕೆ ನೀಡಿದ್ದಾರೆ. ನ್ಯಾಯಸಮ್ಮತ ಮತ್ತು ಮುಕ್ತ ತನಿಖೆ ನಡೆಸಲು ತನಿಖಾ ಸಂಸ್ಥೆಯ ಮೇಲೆ ಇದು ಸ್ಪಷ್ಟವಾಗಿ ಪೂರ್ವಾಗ್ರಹ ಉಂಟು ಮಾಡುತ್ತದೆ ಎಂದು ವಿವರಿಸಲಾಗಿದೆ.
ಎಫ್‌ಐಆರ್ ದಾಖಲಾದ ಬೆನ್ನಿಗೇ ಮಾಧ್ಯಮ ಹೇಳಿಕೆ ನೀಡಿದ್ದ ಮೊದಲ ಆರೋಪಿ ಸ್ವಾಮೀಜಿ ಅವರು ತಮ್ಮ ವಿರುದ್ದ ಪಿತೂರಿ ನಡೆಸಲಾಗಿದ್ದು, ಮುಗ್ಧ ಎಂದು ಹೇಳಿಕೊಂಡಿದ್ದಾರೆ. ಅತ್ಯಂತ ಪ್ರಭಾವಿ ಮತ್ತು ರಾಜ್ಯದಾದ್ಯಂತ ಬೆಂಬಲಿಗರನ್ನು ಹೊಂದಿರುವ ಸ್ವಾಮೀಜಿ ಅವರ ಈ ಹೇಳಿಕೆಗಳು ತನಿಖಾ ಸಂಸ್ಥೆಯ ಮೇಲೆ ಪೂರ್ವಾಗ್ರಹ ಉಂಟು ಮಾಡಲಿದ್ದು, ತನಿಖೆ ದಿಕ್ಕುತಪ್ಪಿಸುತ್ತದೆ ಎಂದು ಹೇಳಲಾಗಿದೆ.
ಇದುವರೆಗೆ ಆರೋಪಿ ಸ್ವಾಮೀಜಿ ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಗಿಲ್ಲ. ಪೊಲೀಸರು ಅವರಿಗೆ ಸಮನ್ಸ್ ನೀಡಿಲ್ಲ. ಮೇಲೆ ಉಲ್ಲೇಖಿಸಲಾದ ಕಾರಣಗಳಿಗಾಗಿ ತನಿಖೆಯ ಮೇಲೆ ಪೂರ್ವಾಗ್ರಹ ಉಂಟಾಗಿರುವುದು ಗೋಚರಿಸುತ್ತದೆ. ಹೀಗಾಗಿ, ನ್ಯಾಯದಾನ, ಮುಕ್ತ ಮತ್ತು ಪಾರದರ್ಶಕ ತನಿಖೆಯ ದೃಷ್ಟಿಯಿಂದ ತಕ್ಷಣ ಕರ್ನಾಟಕ ಹೈಕೋರ್ಟ್ ಮಧ್ಯಪ್ರವೇಶಿಸಿ ತನಿಖೆಯ ಮೇಲೆ ನಿಗಾ ಇಡಬೇಕು ಎಂದು ಕೋರಲಾಗಿದೆ.
ಚಿತ್ರದುರ್ಗದ ಮುರುಘಾ ಮಠದಲ್ಲಿರುವ ಅಕ್ಕಮಹಾದೇವಿ ವಸತಿ ನಿಲಯದಲ್ಲಿದ್ದ ಮತ್ತು ಪ್ರಿಯದರ್ಶಿನಿ ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಸ್ವಾಮೀಜಿ ಹಾಗೂ ಇತರರು ಕೃತ್ಯ ಎಸಗಿದ್ದಾರೆ. 16 ವರ್ಷದ ವಿದ್ಯಾರ್ಥಿನಿಯ ಮೇಲೆ ಕಳೆದ ಮೂರೂವರೆ ವರ್ಷಗಳಿಂದ ಹಾಗೂ 15 ವರ್ಷದ ವಿದ್ಯಾರ್ಥಿನಿಯ ಮೇಲೆ ಮೊದಲನೇ ಆರೋಪಿಯಾಗಿರುವ ಡಾ. ಶಿವಮೂರ್ತಿ ಮುರುಘಾ ಶರಣರು ಒಂದೂವರೆ ವರ್ಷದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಸೆಕ್ಷನ್‌ಗಳಾದ 17, 5(ಎಲ್), 6 ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 376(2)(ಎನ್), 376(3), 149 ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಚಿತ್ರದುರ್ಗ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿದೆ. ಅಲ್ಲದೇ, ಅಲ್ಲಿ ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 17, 5(ಎಲ್), 6, ಐಪಿಸಿ ಸೆಕ್ಷನ್‌ಗಳಾದ 376(2)(ಎನ್), 376(3), 149 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿರ್ಮೂಲನೆ) ಕಾಯಿದೆ ಸೆಕ್ಷನ್‌ಗಳಾದ 3(1) (ಡಬ್ಲ್ಯು) (1)(2), 3(2) (V) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.