POCSO, Dr Sri Shivamurthy Murugha Sharanaru 
ಸುದ್ದಿಗಳು

ಪೋಕ್ಸೊ ಪ್ರಕರಣ: ಡಾ. ಶಿವಮೂರ್ತಿ ಮುರುಘಾ ಶರಣರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಸಂತ್ರಸ್ತ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರ ಅಭಿಪ್ರಾಯ ಪರಿಗಣಿಸಿದ ನ್ಯಾಯಾಲಯವು ವಕೀಲ ಶ್ರೀನಿವಾಸ್‌ ಅರ್ಜಿಗೆ ಸಮ್ಮತಿಸಿತು. ಅಲ್ಲದೇ, ಶ್ರೀನಿವಾಸ್‌ ಅವರಿಗೆ ಆಕ್ಷೇಪಣೆ ಸಲ್ಲಿಸಲು ಒಂದು ದಿನ ನೀಡಿ, ವಿಚಾರಣೆಯನ್ನು ನಾಳೆಗೆ ಮುಂದೂಡಿತು.

Bar & Bench

ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರ ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯವು ಶುಕ್ರವಾರಕ್ಕೆ (ಸೆಪ್ಟೆಂಬರ್‌ 2) ಮುಂದೂಡಿದೆ.

ಡಾ. ಶಿವಮೂರ್ತಿ ಮುರುಘಾ ಶರಣರ ಪರವಾಗಿ ನಿರೀಕ್ಷಣಾ ಜಾಮೀನು ಕೋರಿ ವಕೀಲ ಕೆ ಎನ್‌ ವಿಶ್ವನಾಥಯ್ಯ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ ಕೆ ಕೋಮಲಾ ಅವರ ನೇತೃತ್ವದ ಪೀಠವು ಗುರುವಾರ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಸಂತ್ರಸ್ತ ಅಪ್ರಾಪ್ತ ಬಾಲಕಿಯರನ್ನು ಪೊಲೀಸರು ಪೀಠದ ಮುಂದೆ ಹಾಜರುಪಡಿಸಿದರು. ಸಂತ್ರಸ್ತೆಯರ ಪರವಾಗಿ ವಕೀಲ ಶ್ರೀನಿವಾಸ್‌ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವಕೀಲರು ಹಾಜರಾಗಿದ್ದರು.

ಸಂತ್ರಸ್ತ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರ ಅಭಿಪ್ರಾಯ ಪರಿಗಣಿಸಿದ ನ್ಯಾಯಾಲಯವು ವಕೀಲ ಶ್ರೀನಿವಾಸ್‌ ಅವರ ಮನವಿಗೆ ಸಮ್ಮತಿಸಿತು. ಶ್ರೀನಿವಾಸ್‌ ಅವರಿಗೆ ಆಕ್ಷೇಪಣೆ ಸಲ್ಲಿಸಲು ಒಂದು ದಿನ ಅವಕಾಶ ನೀಡಿ ವಿಚಾರಣೆಯನ್ನು ನಾಳೆಗೆ ಮುಂದೂಡಿತು.

ಡಾ. ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಐವರ ವಿರುದ್ಧ ಮೈಸೂರಿನ ನಜರಾಬಾದ್‌ ಠಾಣೆಯಲ್ಲಿ ಪೋಕ್ಸೊ ಕಾಯಿದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿತ್ತು. ಅದನ್ನು ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.

ಈ ಮಧ್ಯೆ, ಆಗಸ್ಟ್‌ 30ರಂದು ಸಂತ್ರಸ್ತ ಬಾಲಕಿಯರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆಗಸ್ಟ್‌ 29ರಂದು ಸ್ವಾಮೀಜಿ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.