ಸುದ್ದಿಗಳು

ಪೋಕ್ಸೊ ಪ್ರಕರಣ: ಜಾಮೀನು ಕೋರಿ ಹೈಕೋರ್ಟ್‌ ಕದತಟ್ಟಿದ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು

ವೈದ್ಯಕೀಯ ದಾಖಲೆಗಳು ಸಲ್ಲಿಕೆಯಾಗಿವೆ. ಇದ್ಯಾವುದೂ ಪ್ರಾಸಿಕ್ಯೂಷನ್‌ ಪರವಾಗಿಲ್ಲ. ತನಿಖೆ ಪೂರ್ಣಗೊಂಡಿದ್ದು, ಆರೋಪ ಪಟ್ಟಿಯೂ ಸಲ್ಲಿಕೆಯಾಗಿದೆ. ಹತ್ತು ತಿಂಗಳಿಗೂ ಹೆಚ್ಚು ಕಾಲ ಸ್ವಾಮೀಜಿ ಜೈಲಿನಲ್ಲಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Bar & Bench

ಪೋಕ್ಸೊ ಕಾಯಿದೆ ಅಡಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಜಾಮೀನು ಕೋರಿ ಬುಧವಾರ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಮೈಸೂರಿನ ನಜರಾಬಾದ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಥಮ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಗ್ರಾಮೀಣ ಠಾಣೆಯ ಪೊಲೀಸರು ಎರಡು ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಮೊದಲ ಆರೋಪ ಪಟ್ಟಿಗೆ ಸಂಬಂಧಿಸಿದಂತೆ ಜಾಮೀನು ಕೋರಲಾಗಿದೆ. ಮತ್ತೊಂದು ಆರೋಪ ಪಟ್ಟಿಗೆ ಸಂಬಂಧಿಸಿದಂತೆಯೂ ಮುಂದಿನ ವಾರ ಜಾಮೀನು ಕೋರಿಕೆ ಸಲ್ಲಿಸುವ ಸಾಧ್ಯತೆ ಇದೆ. ಪ್ರಕರಣ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ ಎಂದು ಸ್ವಾಮೀಜಿ ಪರ ವಕೀಲರಾದ ಸಂದೀಪ್‌ ಪಾಟೀಲ್‌ ಅವರು “ಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ದಾಖಲೆಗಳು ಸಲ್ಲಿಕೆಯಾಗಿವೆ. ಇದ್ಯಾವುದೂ ಪ್ರಾಸಿಕ್ಯೂಷನ್‌ ಪರವಾಗಿಲ್ಲ. ತನಿಖೆ ಪೂರ್ಣಗೊಂಡಿದ್ದು, ಆರೋಪ ಪಟ್ಟಿಯೂ ಸಲ್ಲಿಕೆಯಾಗಿದೆ. ಹತ್ತು ತಿಂಗಳಿಗೂ ಹೆಚ್ಚು ಕಾಲ ಆರೋಪಿ ಸ್ವಾಮೀಜಿಯು ಜೈಲಿನಲ್ಲಿದ್ದಾರೆ. ಚಿತ್ರದುರ್ಗ ವಿಶೇಷ ನ್ಯಾಯಾಲಯವು ಕ್ರಿಮಿನಲ್‌ ಪ್ರಕರಣಗಳ ಸಾಕ್ಷಿ ವಿಚಾರಣಾ ಪ್ರಕ್ರಿಯೆ ನಡೆಸುವುದಕ್ಕೆ 2023ರ ಜುಲೈ 1ರವರೆಗೆ ಹೈಕೋರ್ಟ್‌ ತಡೆ ನೀಡಿದೆ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು ಎಂಬುದು ಸ್ವಾಮೀಜಿ ಅವರ ಕೋರಿಕೆಯಾಗಿದೆ.  

ಪ್ರಕರಣದ ಹಿನ್ನೆಲೆ: ಶಿವಮೂರ್ತಿ ಶರಣರ ವಿರುದ್ಧ ಪೊಕ್ಸೊ ಕಾಯಿದೆ–2012, ಭಾರತೀಯ ದಂಡ ಸಂಹಿತೆ–1860, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ-1988, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯ್ದೆ–1989 ಮತ್ತು ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯಿದೆ–2015ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದ್ದು, ಸೆಷನ್ಸ್‌ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಮೂರು ಪ್ರತ್ಯೇಕ ಅಂತಿಮ ವರದಿ ಸಲ್ಲಿಸಿದ್ದಾರೆ. ಇದರನ್ವಯ ನ್ಯಾಯಾಲಯ ಆರೋಪ ಹೊರಿಸಿ ಸಾಕ್ಷಿ ವಿಚಾರಣೆ ನಡೆಸಲು ಸಜ್ಜಾಗಿರುವ ಹಂತ ತಲುಪಿದೆ.

ಶರಣರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್‌ ಠಾಣೆಯಲ್ಲಿ 2022ರ ಆಗಸ್ಟ್‌ 26ರಂದು ದೂರು ದಾಖಲಿಸಿದ ನಂತರ ಪೊಲೀಸರು ಶರಣರನ್ನು 2022ರ ಸೆಪ್ಟೆಂಬರ್ 1ರಂದು ಚಿತ್ರದುರ್ಗದ ಮಠದಲ್ಲಿ ಬಂಧಿಸಿದ್ದರು. ಅಂದಿನಿಂದಲೂ ಅವರು ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

2022ರ ಡಿಸೆಂಬರ್‌ 1ರಂದು ಚಿತ್ರದುರ್ಗದ ವಿಶೇಷ ನ್ಯಾಯಾಲಯವು ಮುರುಘಾ ಶರಣರ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಆನಂತರ ಹೈಕೋರ್ಟ್‌ ಮೆಟ್ಟಿಲೇರಿದ್ದರೂ ಆರೋಪ ಪಟ್ಟಿ ಸಲ್ಲಿಕೆಯಾಗಿಲ್ಲ ಎಂದು ಅರ್ಜಿ ಹಿಂಪಡೆಯಲಾಗಿತ್ತು. ಈಗ ಹೊಸದಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದೆ.