ex CM B S Yediyurappa and Karnataka HC 
ಸುದ್ದಿಗಳು

[ಪೋಕ್ಸೊ ಪ್ರಕರಣ ] ಬೆಂಗಳೂರಿನ ಹೊರಗಡೆ ಓಡಾಟಕ್ಕೆ ಮಾಜಿ ಸಿಎಂ ಬಿಎಸ್‌ವೈಗೆ ಅನುಮತಿಸಿದ ಹೈಕೋರ್ಟ್‌

ಷರತ್ತು ಸಡಿಲಿಸುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Bar & Bench

ಅಪ್ರಾಪ್ತೆಗೆ ಲೈಂಗಿಕ‌ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದ ಪೋಕ್ಸೊ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಆದೇಶದಲ್ಲಿ ಅನುಮತಿ‌ ಪಡೆಯದೆ ಬೆಂಗಳೂರಿನ ವಿಶೇಷ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳದಂತೆ ಮಾಜಿ ಮುಖ್ಯಮಂತ್ರಿ ಬಿ‌ ಎಸ್‌‌ ಯಡಿಯೂರಪ್ಪ ‌ಅವರಿಗೆ ವಿಧಿಸಲಾಗಿದ್ದ ಷರತ್ತನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ಸಡಿಲಿಸಿದೆ.

ಷರತ್ತು ಸಡಿಲಿಸುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಯಡಿಯೂರಪ್ಪ ಅವರ‌ ಪರ ವಕೀಲರು ಹಾಜರಾಗಿ, ಅರ್ಜಿದಾರರ ವಿರುದ್ಧದ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಗೆ‌ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರಾದ ವೇಳೆ ಅನುಮತಿ ಪಡೆಯದೇ ವಿಚಾರಣಾಧೀನ ನ್ಯಾಯಾಲಯದ ವ್ಯಾಪ್ತಿ (ಬೆಂಗಳೂರು) ಬಿಟ್ಟು ಹೊಗುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ. ಸುಪ್ರೀಂ ಕೋರ್ಟ್ ತಡೆ ಆದೇಶ ಪರಿಗಣಿಸಿ‌ ಈ ಷರತ್ತನ್ನು ಸಡಿಲಿಸಬೇಕು ಮಾಡಬೇಕು ಎಂದು ಕೋರಿ‌ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಅದನ್ನು ಪುರಸ್ಕರಿಸಬೇಕು ಎಂದು ಕೋರಿದರು.

ಇದರಿಂದ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿ ಹೊರಡಿಸಿರುವ ಆದೇಶ ಪರಿಗಣಿಸಿ ಯಡಿಯೂರಪ್ಪ ಅವರ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಲಯ ಆದೇಶಿಸಿತು. ಈ ಆದೇಶದಿಂದ ಯಡಿಯೂರಪ್ಪ ಅವರು ಬೆಂಗಳೂರು ಬಿಟ್ಟು ಹೊರ ಪ್ರದೇಶಕ್ಕೆ ಪ್ರಯಾಣಿಸಲು ಹಾದಿ ಸುಗಮವಾಗಿದೆ.

ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಯಡಿಯೂರಪ್ಪ ಅವರಿಗೆ ಹೈಕೋರ್ಟ್ 2025ರ ಫೆಬ್ರವರಿ 7ರಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.‌ ಈ ವೇಳೆ ‌ಅನುಮತಿ‌ ಪಡೆಯದೆ ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಪ್ರದೇಶ ಬಿಟ್ಟು ಹೊರಹೋಗುವಂತಿಲ್ಲ ಎಂದು ಷರತ್ತು ವಿಧಿಸಿತ್ತು.