Karnataka HC and POCSO 
ಸುದ್ದಿಗಳು

[ಪೋಕ್ಸೊ] ಸಮ್ಮತಿ ವಿಚಾರದಲ್ಲಿ ಅಪ್ರಾಪ್ತೆ ಹೇಳಿಕೆ ಪರಿಗಣಿಸಲಾಗದು; ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಕಾನೂನು ಪ್ರಕಾರ ಜಾಮೀನು ಅರ್ಜಿ ತೀರ್ಮಾನಿಸುವಾಗ ನ್ಯಾಯಾಲಯ, ಪ್ರಕರಣದ ವಾಸ್ತವಾಂಶ ಕಂಡುಹಿಡಿಯಲು (ಮೆರಿಟ್ ಮತ್ತು ಡಿಮೆರಿಟ್) ಮಿನಿ ಟ್ರಯಲ್ (ಸಣ್ಣ ವಿಚಾರಣೆ) ಮಾಡಲು ಸಾಧ್ಯವಿಲ್ಲ ಎಂದಿರುವ ನ್ಯಾಯಾಲಯ.

Bar & Bench

ಅಪ್ರಾಪ್ತೆಯೊಂದಿಗೆ ಪ್ರೇಮ ವಿವಾಹವಾಗಿ ಸಮ್ಮತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಯುವಕನಿಗೆ ಈಚೆಗೆ ಜಾಮೀನು ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್, ಹದಿನೆಂಟು ವರ್ಷದೊಳಗಿನ ಅಪಾಪ್ತರಿಗೆ ಪ್ರೀತಿ ವ್ಯವಹಾರ ನಡೆಸುವ ಅನುಮತಿ ಇರಬಹುದೇ ವಿನಾ ದೈಹಿಕ ಸಂಪರ್ಕ ಬೆಳೆಸಲು ಅಲ್ಲ ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಬುಜ್ಜಿ ಅಲಿಯಾಸ್ ಬಾಬು (23) ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

ಸ್ವಯಂ ಪ್ರಮಾಣೀಕೃತ ಹೇಳಿಕೆಯಲ್ಲಿ ಖುದ್ದು ಸಂತ್ರಸ್ತೆಯೇ, ಆರೋಪಿ ನನಗೆ ಮಂಗಳ ಸೂತ್ರ ಕಟ್ಟಿದ್ದ. ನಾವಿಬ್ಬರು ದಂಪತಿಯಂತೆ ಜೀವಿಸಿದ್ದು, ಸ್ವಯಿಚ್ಛೆ ಮೇರೆಗೆ ಲೈಂಗಿಕ ಸಂಪರ್ಕ ಬೆಳೆಸಿರುವುದಾಗಿ ತಿಳಿಸಿದರೂ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತು.

ಪೋಕ್ಸೊ ಕಾಯಿದೆಯ ಪ್ರಕಾರ 18 ವರ್ಷದೊಳಗಿನವರು ಅಪ್ರಾಪ್ತರು. ಸಂತ್ರಸ್ತೆಯು 18 ವರ್ಷ ಒಳಗಿನವರಾಗಿದ್ದಾರೆ. ಅವರು ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡಿದರೂ ಅದು ಸಮ್ಮತಿಯಾಗುವುದಿಲ್ಲ ಎಂದು ಪೋಕ್ಸೊ ಕಾಯಿದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅದರಂತೆ ಅಪ್ರಾಪ್ತರು ಸಮ್ಮತಿ ಪಕ್ಷಕಾರರು ಆಗುವುದಿಲ್ಲ ಮತ್ತು ಅವರ ಸಮ್ಮತಿ ತಿರಸ್ಕೃತಗೊಳ್ಳಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಕಾನೂನು ಪ್ರಕಾರ ಜಾಮೀನು ಅರ್ಜಿ ತೀರ್ಮಾನಿಸುವಾಗ ನ್ಯಾಯಾಲಯ, ಪ್ರಕರಣದ ವಾಸ್ತವಾಂಶ ಕಂಡುಹಿಡಿಯಲು ಕಿರು ವಿಚಾರಣೆ (ಮಿನಿ ಟ್ರಯಲ್) ಮಾಡಲು ಸಾಧ್ಯವಿಲ್ಲ. ಅದು ಪ್ರಕರಣದ ವಿಚಾರಣೆ ಮೇಲೆ ಪೂರ್ವಾಗ್ರಹ ಉಂಟು ಮಾಡಬಹುದು. ಸ್ವಯಂ ಪ್ರಮಾಣೀಕೃತ ಹೇಳಿಕೆಯನ್ನು ಪ್ರಕರಣದ ವಿಚಾರಣೆ ವೇಳೆ ಪರೀಕ್ಷೆಗೊಳಪಡಿಸಬೇಕು. ವಿಚಾರಣಾಧೀನ ನ್ಯಾಯಾಲಯ ವಿಚಾರಣೆ ಪೂರ್ಣಗೊಳಿಸಿ, ಆದೇಶ ಮಾಡುವವರೆವಿಗೂ ಯಾವುದೇ ನ್ಯಾಯಾಲಯಕ್ಕೆ ಪೋಕ್ಸೊ ಪ್ರಕರಣದಲ್ಲಿ ಅರ್ಜಿದಾರನ ಪಾತ್ರದ ಬಗ್ಗೆ ನಿರ್ದಿಷ್ಟ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶವಿಲ್ಲ ಎಂದು ಪೀಠ ಹೇಳಿದೆ.

ಪ್ರೇಮ ವ್ಯವಹಾರವಿರುವ ಬಗ್ಗೆ ಆರೋಪ ಕೇಳಿ ಬಂದ ಪ್ರಕರಣಗಳಲ್ಲಿ ಅದು ವಿಭಿನ್ನವಾಗಿ ನಿಲ್ಲುತ್ತದೆ. 18 ವರ್ಷ ಒಳಗಿನ ಅಪಾಪ್ತರಿಗೆ ಪ್ರೀತಿ ವ್ಯವಹಾರ ನಡೆಸುವ ಅನುಮತಿ ಇರಬಹುದೇ ವಿನಾ ಖಂಡಿತವಾಗಿ ದೈಹಿಕ ಸಂಪರ್ಕ ಬೆಳೆಸಲು ಅಲ್ಲವೇ ಅಲ್ಲ. ದೈಹಿಕ ಸಂಪರ್ಕ ಬೆಳೆಸಲು ಅನುಮತಿ ಎಂದಾದರೆ ಪೋಕ್ಸೊ ಕಾಯಿದೆ ಜಾರಿ, ಪ್ರಕರಣ ದಾಖಲಾತಿ, ತನಿಖೆ ಮತ್ತು ವಿಚಾರಣೆ ನಡೆಸುವ ಉದ್ದೇಶವೇ ವಿಫಲವಾಗುತ್ತದೆ. ಈ ಉದ್ದೇಶವನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ನ್ಯಾಯಾಲಯಗಳು ತೀರ್ಪು ಕೈಗೊಳ್ಳಬಾರದು. ಅರ್ಜಿದಾರನ ವಾದ ಒಪ್ಪಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅರ್ಜಿ ವಜಾಗೊಳಿಸಿದ ನ್ಯಾಯಾಲಯವು ಪ್ರಕರಣದ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಂಡ ನಂತರ ಸಾಂದರ್ಭಿಕ ಸನ್ನಿವೇಶಗಳು ಸಕಾರಾತ್ಮಕವಾಗಿ ಬದಲಾವಣೆಯಾದರೆ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಲು ಅರ್ಜಿದಾರರು ಸ್ವತಂತ್ರವಾಗಿದ್ದಾರೆ ಎಂದಿದೆ.

ಪ್ರಮಾಣೀಕೃತ ಹೇಳಿಕೆ: ದೊಡ್ಡಬಳ್ಳಾಪುರದ ಆಂಜನೇಯ ಸ್ವಾಮಿ ದೇವಸ್ಥಾನದ ಹೊರಗಡೆ ಆರೋಪಿ ಮಂಗಳ ಸೂತ್ರ ಕಟ್ಟಿದ್ದು, ನಂತರ ನಾವಿಬ್ಬರು ಪತಿ-ಪತ್ನಿಯರಂತೆ ಜೀವನ ನಡೆಸಿದ್ದೇವೆ. ಲೈಂಗಿಕ ಸಂಪರ್ಕಕ್ಕೆ ನನ್ನ ಸಮ್ಮತಿ ಇದ್ದು, ಆರೋಪಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿಲ್ಲ ಎಂಬುದಾಗಿ ದೃಢೀಕರಿಸಿ ಅಧೀನ ನ್ಯಾಯಾಲಯದ ಮುಂದೆ ಸಂತ್ರಸ್ತೆ ಸ್ವಯಂ ಪ್ರಮಾಣಿಕೃತ ಹೇಳಿಕೆ ದಾಖಲಿಸಿದ್ದರು. ಇದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿದಾರ ಪರ ವಕೀಲರು,ಸಂತ್ರಸ್ತೆಯೊಂದಿಗೆ ಆರೋಪಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿಲ್ಲ. ಹೀಗಾಗಿ, ಪೋಕ್ಸೊ ಕಾಯಿದೆ ಅನ್ವಯಿಸುವುದಿಲ್ಲ. ಆದ್ದರಿಂದ ಆರೋಪಿಗೆ ಜಾಮೀನು ನೀಡಬೇಕು ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: 16 ವರ್ಷದ ಪುತ್ರಿಯನ್ನು (ಸಂತ್ರಸ್ತೆ) 2022ರ ಏಪ್ರಿಲ್‌ 2ರಂದು ಚರ್ಚ್‌ಗೆ ಹೋಗಿದ್ದಾಗ ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸಂತ್ರಸ್ತೆ ಮತ್ತು ಆರೋಪಿಯನ್ನು ಪತ್ತೆ ಹಚ್ಚಿದ್ದರು. ಅಧೀನ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ನಂತರ ಪೊಲೀಸರು ತನಿಖೆ ಪೂರ್ಣಗೊಳಿಸಿ, ಆರೋಪಿ ವಿರುದ್ಧ ಪೋಕ್ಸೊ ಕಾಯಿದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳ ಪ್ರಕರಣ ದಾಖಲಿಸಿ, ಆನಂತರ ಆರೋಪ ಪಟ್ಟಿ ಸಲ್ಲಿಸಿದ್ದರು.

2022ರ ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಆರೋಪಿಯು ಸಂತ್ರಸ್ತೆಯನ್ನು ನಂದಿಬೆಟ್ಟ ಕರೆದೊಯ್ದಿದ್ದ. ಬೆಟ್ಟದ ಪ್ರವೇಶ ದ್ವಾರದ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊದ್ದು, ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಏಪ್ರಿಲ್‌ 3ರಂದು ಸಂತ್ರಸ್ತೆಯನ್ನು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರೆದೊಯ್ದು ತಾಳಿ ಕಟ್ಟಿ ಮದುವೆಯಾಗಿದ್ದ. 2022ರ ಏಪ್ರಿಲ್‌ 4ರಂದು ಸಂತ್ರಸ್ತೆಯನ್ನು ಕರೆದೊಯ್ದು ಸಂಬಂಧಿಕರ ಮನೆಯಲ್ಲಿ ಬಾಡಿಗೆ ಪಡೆದು ನೆಲೆಸಿದ್ದ. ಆನಂತರ ಸತತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಧೀನ ನ್ಯಾಯಾಲಯ ತಿರಸ್ಕರಿಸಿದ್ದರಿಂದ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದನು.