Dr. Shivamurthy Murugha Sharanaru
Dr. Shivamurthy Murugha Sharanaru 
ಸುದ್ದಿಗಳು

ಪೋಕ್ಸೊ ಪ್ರಕರಣ: ಜೈಲಿನಿಂದ ಬಿಡುಗಡೆಯಾದ ಮುರುಘಾ ಶರಣರು; ನ್ಯಾಯಾಂಗ ಬಂಧನ ಕೋರಿದ್ದ ಪ್ರಾಸಿಕ್ಯೂಷನ್‌ ಅರ್ಜಿ ಅಮಾನ್ಯ

Bar & Bench

ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿದ್ದ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು 14 ತಿಂಗಳ ಬಳಿಕ ಗುರುವಾರ ಜೈಲಿನಿಂದ ಬಿಡುಗಡೆಯಾದರು.

“ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗೆ ಜಾಮೀನು ಮಂಜೂರಾಗಿ, ಒಂದೊಮ್ಮೆ ಬೇರೊಂದು ಪ್ರಕರಣದಲ್ಲಿ ಬಾಡಿ ವಾರೆಂಟ್‌ನಲ್ಲಿದ್ದರೂ ಅವರನ್ನು ಬಿಡುಗಡೆ ಮಾಡಬೇಕು” ಎಂದು ಕರ್ನಾಟಕ ಹೈಕೋರ್ಟ್‌ 2022ರಲ್ಲಿ ಬೇರೊಂದು ಪ್ರಕರಣದಲ್ಲಿ ನಿರ್ದೇಶಿಸಿತ್ತು. ಇದರ ಭಾಗವಾಗಿ ಕಾರಾಗೃಹ ಪೊಲೀಸ್‌ ಮಹಾನಿರ್ದೇಶಕರು ಹೊರಡಿಸಿರುವ ಸುತ್ತೋಲೆ ಮತ್ತು ಕಾರಾಗೃಹ ಕೈಪಿಡಿಯ ಅನುಸಾರ ಚಿತ್ರದುರ್ಗದ ಜೈಲು ಅಧೀಕ್ಷಕರು ಮುರುಘಾ ಶರಣರನ್ನು ಬಿಡುಗಡೆ ಮಾಡಿದ್ದಾರೆ.

ಇದರೊಂದಿಗೆ ಪೋಕ್ಸೊ ಆರೋಪದ ಸಂಬಂಧ ದಾಖಲಾಗಿರುವ ಎರಡನೇ ಎಫ್‌ಐಆರ್‌ನಲ್ಲಿ ಆರೋಪಿ ಶರಣರನ್ನು ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂದು ಕೋರಿ ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಅರ್ಜಿ ಅಮಾನ್ಯಗೊಂಡಿದೆ.

“ಆರೋಪಿ ಶರಣರ ಪರವಾಗಿ ವಕೀಲ ಉಮೇಶ್‌ ಅವರು ಚಿತ್ರದುರ್ಗ ಜಿಲ್ಲಾ ಜೈಲು ಅಧೀಕ್ಷಕರಿಗೆ ಮೆಮೊ ಸಲ್ಲಿಸಿದರು. ಇದರಲ್ಲಿ ಹೈಕೋರ್ಟ್‌ ಆದೇಶ, ಕಾರಾಗೃಹ ಇಲಾಖೆಯ ಮಹಾನಿರ್ದೇಶಕರ ಸುತ್ತೋಲೆ, ಜೈಲು ಕೈಪಿಡಿಯ ವಿವರಣೆ ಅಡಕಗೊಳಿಸಲಾಗಿತ್ತು. ಎರಡನೇ ಎಫ್‌ಐಆರ್‌ನಲ್ಲಿ ಆರೋಪಿ ಶರಣರನ್ನು ನ್ಯಾಯಾಂಗ ಬಂಧನಕ್ಕೆ ಕೋರಲಾಗಿದೆ. ಹೀಗಾಗಿ, ಅವರನ್ನು ಜೈಲಿನಿಂದ ಬಿಡುಗಡೆ ಮಾಡಬಾರದು ಎಂಬ ಪೊಲೀಸರ ಒತ್ತಡಕ್ಕೆ ಜೈಲು ಅಧೀಕ್ಷಕರು ಮಣಿದಿಲ್ಲ” ಎಂದು ಆರೋಪಿ ಶರಣರ ಪರ ವಕೀಲ ಸಂದೀಪ್‌ ಪಾಟೀಲ್‌ ಅವರು “ಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿದರು.

“ಎರಡನೇ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ ಮುಂದೂಡಿದೆ. ಈ ಸಂದರ್ಭದಲ್ಲಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕೋರುವುದು, ಅದಕ್ಕೆ ಆಕ್ಷೇಪಣೆ ಸಲ್ಲಿಸುವುದು, ಈ ಸಂಬಂಧ ವಿಚಾರಣಾಧೀನ ನ್ಯಾಯಾಲಯ ಆದೇಶ ಮಾಡುವುದು. ಇವೆಲ್ಲವೂ ಹೈಕೋರ್ಟ್‌ನ ಮಧ್ಯಂತರ ತಡೆಯಾಜ್ಞೆಗೆ ವಿರುದ್ಧವಾದ ನಡೆಯಾಗುತ್ತದೆ. ಇದನ್ನು ವಿಚಾರಣಾಧೀನ ನ್ಯಾಯಾಲಯ ಮಾಡಬಾರದು. ಒಂದೊಮ್ಮೆ ವಿಚಾರಣಾಧೀನ ನ್ಯಾಯಾಲಯ ಆದೇಶ ಮಾಡಿದರೂ ಅದು ಬಾಡಿ ವಾರೆಂಟ್‌ ಆಗಿ ಉಳಿಯಲಿದೆ” ಎಂದು ಅವರು ವಿವರಿಸಿದರು.

“ಸುತ್ತೋಲೆಯ ಪ್ರಕಾರ ಬಾಡಿ ವಾರೆಂಟ್‌ ಎಂದರೆ ಪ್ರೊಡಕ್ಷನ್‌ ಮತ್ತು ಟ್ರಾನ್ಸಿಟ್‌ ಆದೇಶ ಮಾತ್ರ. ಹೈಕೋರ್ಟ್‌ ನಿರ್ದೇಶನದಂತೆ ಕಾರಾಗೃಹ ಇಲಾಖೆಯ ಪೊಲೀಸ್‌ ಮಹಾನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಇದರ ಪ್ರಕಾರ ಆರೋಪಿ ವಿರುದ್ಧ ಬಾಡಿ ವಾರೆಂಟ್‌ ಇದೆ ಎಂಬ ಕಾರಣಕ್ಕೆ ಅವರನ್ನು ಜೈಲಿನಲ್ಲಿ ಡಿಟೇನ್‌ ಮಾಡಲಾಗದು. ಆರೋಪಿಯ ವಿರುದ್ಧ ಎಷ್ಟೇ ಪ್ರಕರಣ ದಾಖಲಾದರೂ ಒಂದು ಪ್ರಕರಣದಲ್ಲಿ ಮಾತ್ರ ಕಸ್ಟಡಿ ಪಡೆಯಬಹುದು. ಆನಂತರ ಬೇರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ನೆರವು ಪಡೆಯಬಹುದು. ಎಲ್ಲಾ ಪ್ರಕರಣದಲ್ಲೂ ಕಸ್ಟಡಿ ಪಡೆಯಬೇಕು ಎಂಬ ಪರಿಪಾಠ ಇಲ್ಲ. ಈಗಾಗಲೇ ಪ್ರಕರಣಗಳ ತನಿಖೆ ಮುಗಿದಿದೆ. ಆರೋಪಿಯ ಉಪಸ್ಥಿತಿಯನ್ನು ಈಗಾಗಲೇ ಖಾತರಿಪಡಿಸಲಾಗಿದೆ. ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ನ್ಯಾಯಾಲಯವು ಆರೋಪಪಟ್ಟಿಯ ಸಂಜ್ಞೇ ಪರಿಗಣಿಸಿದೆ. ಇದರ ವಿಚಾರಣೆಯನ್ನು ಹೈಕೋರ್ಟ್‌ ಮುಂದೂಡಿದೆ. ಈಗ ಮೊದಲ ಪ್ರಕರಣದಲ್ಲಿ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಪರಿಸ್ಥಿತಿ ಹೀಗಿರುವಾಗ ಪ್ರಾಸಿಕ್ಯೂಷನ್‌ ಆರೋಪಿಯನ್ನು ಕಸ್ಟಡಿಗೆ ಕೇಳಿದ್ದು ಏಕೆ?” ಎಂದು ಪ್ರಶ್ನಿಸಿದ್ದಾರೆ.

“ವಿಶೇಷ ನ್ಯಾಯಾಲಯ ಆದೇಶ ಮಾಡಿದರೂ ಆರೋಪಿ ಮತ್ತು ಜೈಲರ್ ನಡುವಿನ ವಿಚಾರ ಪ್ರಮುಖವಾಗುತ್ತದೆ. ಇಲ್ಲಿ ನ್ಯಾಯಾಲಯದ ಯಾವುದೇ ಪಾತ್ರ ಇಲ್ಲ. ಆರೋಪಿಯು ಬಾಡಿ ವಾರೆಂಟ್‌ ಮೇಲಿದ್ದರೆ ಅವರನ್ನು ಜೈಲಿನಲ್ಲಿ ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ ಕಸ್ಟಡಿ ಅಕ್ರಮವಾಗುತ್ತದೆ ಎಂದು ಹೈಕೋರ್ಟ್‌ 2022ರಲ್ಲಿ ಬೇರೊಂದು ಪ್ರಕರಣದಲ್ಲಿ ಆದೇಶಿಸಿದೆ” ಎಂದು ವಿವರಿಸಿದ್ದಾರೆ.

“ಆರೋಪಿಯ ಬಾಡಿ ವಾರೆಂಟ್‌ ವಿಸ್ತರಣೆಯನ್ನು ಪ್ರಾಸಿಕ್ಯೂಷನ್‌ ಕೇಳಿದೆ. ಆರೋಪಿ ಕಸ್ಟಡಿಯಲ್ಲಿದ್ದರೆ ಬಾಡಿ ವಾರೆಂಟ್‌. ಈಗ ಹೊರಗೆ ಬಂದಿರುವುದರಿಂದ ಬಾಡಿ ವಾರೆಂಟ್‌ ಅಪ್ರಸ್ತುತವಾಗಲಿದೆ. ಆರೋಪಿ ಸ್ವಯಂಪ್ರೇರಿತವಾಗಿ ನ್ಯಾಯಾಲಯದ ಮುಂದೆ ಹಾಜರಾಗಬೇಕು. ಮುಂದಿನ ವಿಚಾರಣೆಯಲ್ಲಿ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಹಾಜರಾಗಲಾಗುವುದು” ಎಂದರು.

“ಹೈಕೋರ್ಟ್‌ ಜಾಮೀನು ಆದೇಶದಲ್ಲಿ ಚಿತ್ರದುರ್ಗದ ವ್ಯಾಪ್ತಿಗೆ ಬರಬಾರದು ಎಂಬ ಷರತ್ತು ವಿಧಿಸಿದೆ. ಎಲ್ಲಾ ಪ್ರಕ್ರಿಯೆಯನ್ನು ವಿಡಿಯೊ ಕಾನ್ಫೆರನ್ಸ್‌ ಮೂಲಕ ಮಾಡಬೇಕು ಎಂದಿದೆ. ಹೀಗಾಗಿ, ಎರಡನೇ ಕೇಸಲ್ಲೂ ನಾನು ಇರುವ ಕಡೆಯಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಲಾಗುವುದು ಎಂದು ವಿಶೇಷ ನ್ಯಾಯಾಲಯಕ್ಕೆ ಮೆಮೊ ಸಲ್ಲಿಕೆ ಮಾಡಲಾಗಿದೆ” ಎಂದು ವಿವರಿಸಿದ್ದಾರೆ.

“ಹಾಲಿ ಪ್ರಕರಣದಲ್ಲಿ ಬಂಧನ ಅವಧಿ ಮುಗಿದಿದೆ. ಅಲ್ಲದೇ, ಬಂಧನವೂ ತನಿಖೆಯ ಭಾಗ. ಈ ಮಧ್ಯೆ, ಪ್ರಕರಣದ ವಿಚಾರಣೆ ಮುಂದೂಡುವಂತೆ ಹೈಕೋರ್ಟ್‌ ಮಧ್ಯಂತರ ಆದೇಶ ಮಾಡಿದೆ. ಹೀಗಿರುವಾಗ ಆರೋಪಿಯ ನ್ಯಾಯಾಂಗ ಬಂಧನ ಕೋರಿಕೆಯನ್ನು ವಿಚಾರಣಾಧೀನ ನ್ಯಾಯಾಲಯ ಸ್ವೀಕರಿಸುವುದು ಹೈಕೋರ್ಟ್‌ ಮಧ್ಯಂತರ ಆದೇಶಕ್ಕೆ ವಿರುದ್ಧವಲ್ಲವೇ? ಆರೋಪಿಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಕರೆತಂದರೆ ನ್ಯಾಯಾಂಗ ಬಂಧನಕ್ಕೆ ನೀಡಬಹುದು. ಈಗ ಬಂಧನವೇ ಆಗಿಲ್ಲ” ಎಂದರು.

“ಎರಡನೇ ಎಫ್‌ಐಆರ್‌ನಲ್ಲಿ ಪ್ರಾಸಿಕ್ಯೂಷನ್‌ನ ನ್ಯಾಯಾಂಗ ಬಂಧನ ಅರ್ಜಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಯಾವುದೇ ಆದೇಶ ಮಾಡಿದರೂ ಅದು ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿರುತ್ತದೆ. ಅದನ್ನು ನಾವು ಪ್ರಶ್ನಿಸುತ್ತೇವೆ” ಎಂದು ಸಂದೀಪ್‌ ಪಾಟೀಲ್ ಮಾಹಿತಿ ನೀಡಿದ್ದಾರೆ.

ಎರಡನೇ ಎಫ್‌ಐಆರ್‌ನಲ್ಲಿ ಆರೋಪಿ ಶರಣರನ್ನು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಕೋರಿ ತನಿಖಾಧಿಕಾರಿ ಪರವಾಗಿ ಅರ್ಜಿ ಸಲ್ಲಿಸಿದ್ದ ಸರ್ಕಾರಿ ಅಭಿಯೋಜಕರು ಅಭಿಪ್ರಾಯಕ್ಕೆ ಪ್ರಯತ್ನಿಸಿದರೂ ಅವರು “ಬಾರ್‌ ಅಂಡ್‌ ಬೆಂಚ್‌” ಕರೆ ಸ್ವೀಕರಿಸಲಿಲ್ಲ.