POCSO, Dr Sri Shivamurthy Murugha Sharanaru
POCSO, Dr Sri Shivamurthy Murugha Sharanaru 
ಸುದ್ದಿಗಳು

[ಫೋಕ್ಸೊ ಪ್ರಕರಣ] ನಿರೀಕ್ಷಣಾ ಜಾಮೀನು ಕೋರಿ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಕದ ತಟ್ಟಿದ ಮುರುಘಾ ಶರಣರು

Bar & Bench

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮೊದಲ ಆರೋಪಿಯಾಗಿರುವ ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು ನಿರೀಕ್ಷಣಾ ಜಾಮೀನು ಕೋರಿ ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂದು ವರದಿಯಾಗಿದೆ.

ಮುರುಘಾ ಶರಣರು ಸಲ್ಲಿಸಿರುವ ಜಾಮೀನು ಮನವಿಯ ವಿಚಾರಣೆಯನ್ನು ಚಿತ್ರದುರ್ಗದ 2ನೇ ಸೆಷನ್ಸ್‌ ನ್ಯಾಯಾಲಯವು ಸೆಪ್ಟೆಂಬರ್‌ 1ರಂದು ನಡೆಸಲಿದೆ ಎಂದು ತಿಳಿದು ಬಂದಿದೆ.

ಮೈಸೂರಿನ ಒಡನಾಡಿ ಸಂಸ್ಥೆಯು ನೀಡಿದ ದೂರಿನ ಅನ್ವಯ ಶರಣರು ಸೇರಿದಂತೆ ಐವರ ವಿರುದ್ಧ ಮೈಸೂರಿನ ನಜರಾಬಾದ್‌ ಠಾಣೆಯಲ್ಲಿ ಫೋಕ್ಸೊ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಮೊದಲ ಆರೋಪಿಯಾಗಿದ್ದು, ಚಿತ್ರದುರ್ಗದಲ್ಲಿನ ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್‌ ರಶ್ಮಿ ಹಾಗೂ ಮಠದ ಬಸವಾದಿತ್ಯ (ಮರಿಸ್ವಾಮಿ) ಅವರು ಕ್ರಮವಾಗಿ ಎರಡು ಮತ್ತು ಮೂರನೇ ಆರೋಪಿಗಳಾಗಿದ್ದಾರೆ. ಮಠದ ಜೊತೆಗೆ ನಿಕಟ ಸಂಪರ್ಕ ಹೊಂದಿರುವ ಮೈಸೂರಿನ ಪರಮಶಿವಯ್ಯ ಮತ್ತು ವಕೀಲ ಗಂಗಾಧರಯ್ಯ ಅವರು ನಾಲ್ಕು ಮತ್ತು ಐದನೇ ಆರೋಪಿಗಳಾಗಿದ್ದಾರೆ.

“ಸಂತ್ರಸ್ತೆಯಾಗಿರುವ ಇಬ್ಬರು ವಿದ್ಯಾರ್ಥಿನಿಯರ ಪೈಕಿ ಒಬ್ಬರನ್ನು ಸ್ವಾಮೀಜಿಯ ಮೂರೂವರೆ ವರ್ಷಗಳಿಂದ ಮತ್ತೊಬ್ಬರಿಗೆ ಒಂದೂವರೆ ವರ್ಷದಿಂದ ಲೈಂಗಿಕ ಕಿರುಕುಳ ನೀಡಿದ್ದಾರೆ. ಇದಕ್ಕೆ ಉಳಿದ ಆರೋಪಿಗಳು ಸಹಕರಿಸಿದ್ದಾರೆ ಎಂದು ಪ್ರೌಢಶಾಲೆಯ ವಿದ್ಯಾರ್ಥಿನಿಯರು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಆಪ್ತ ಸಮಾಲೋಚನೆ ಸಮಯದಲ್ಲಿ ಹೇಳಿಕೆ ನೀಡಿದ್ದಾರೆ” ಎಂದು ದೂರಿನಲ್ಲಿ ವಿವರಿಸಲಾಗಿತ್ತು.