ಸುದ್ದಿಗಳು

[ಪೋಕ್ಸೊ ಪ್ರಕರಣ] ಮುರುಘಾ ಶ್ರೀಗಳಿಂದ ಜಾಮೀನು ಅರ್ಜಿ ಸಲ್ಲಿಕೆ; ಇತರೆ ಮೂವರು ಆರೋಪಿಗಳಿಂದ ನಿರೀಕ್ಷಣಾ ಜಾಮೀನು ಕೋರಿಕೆ

Bar & Bench

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪೋಕ್ಸೊ ಪ್ರಕರಣದಲ್ಲಿ ಬಂಧಿತರಾಗಿರುವ ಮೊದಲನೇ ಆರೋಪಿ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಜಾಮೀನು ಕೋರಿ ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಅರ್ಜಿ ಸಲ್ಲಿಸಿದ್ದಾರೆ.

ಸಿಆರ್‌ಪಿಸಿ ಸೆಕ್ಷನ್‌ 439ರ ಅನ್ವಯ ಆರೋಪಿ ಶಿವಮೂರ್ತಿ ಮುರುಘಾ ಶರಣರು ಜಾಮೀನು ಕೋರಿರುವ ಅರ್ಜಿಯು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಬಿ ಕೆ ಕೋಮಲಾ ಅವರ ಮುಂದೆ ಪಟ್ಟಿಯಾಗಿತ್ತು. ಸೆಪ್ಟೆಂಬರ್‌ 5ರಂದು (ಸೋಮವಾರ) ಮುಕ್ತ ನ್ಯಾಯಾಲಯದಲ್ಲಿ ಅರ್ಜಿ ಮಂಡಿಸುವಂತೆ ನ್ಯಾಯಾಲಯವು ಶನಿವಾರ ಆದೇಶಿಸಿದ್ದು, ಅರ್ಜಿಯು ಆಕ್ಷೇಪಣೆಯ ಹಂತದಲ್ಲಿದೆ.

ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಎಸ್‌ ಬಸವಾದಿತ್ಯ ಮತ್ತು ನಾಲ್ಕನೇ ಆರೋಪಿ ಎ ಜೆ ಪರಮಶಿವಯ್ಯ ಮತ್ತು ಐದನೇ ಆರೋಪಿ ಎನ್‌ ಗಂಗಾಧರ ಅವರು ಸಿಆರ್‌ಪಿಸಿ ಸೆಕ್ಷನ್‌ 438ರ ಅನ್ವಯ ನಿರೀಕ್ಷಣಾ ಜಾಮೀನು ಕೋರಿದ್ದಾರೆ. ಆಗಸ್ಟ್‌ 30ರಂದು ಬಸವಾದಿತ್ಯ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದು, ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕರು ಕಾಲಾವಕಾಶ ಕೋರಿರುವುದರಿಂದ ಸೋಮವಾರಕ್ಕೆ (ಸೆ.5) ವಿಚಾರಣೆ ಮುಂದೂಡಿಕೆಯಾಗಿದೆ.

ಆರೋಪಿಗಳಾದ ಎ ಜೆ ಪರಮಶಿವಯ್ಯ ಮತ್ತು ಎನ್‌ ಗಂಗಾಧರ ಅವರು ಸೆಪ್ಟೆಂಬರ್‌ 1ರಂದು ಒಂದೇ ಅರ್ಜಿಯಲ್ಲಿ ಸಿಆರ್‌ಪಿಸಿ ಸೆಕ್ಷನ್‌ 438ರ ಅನ್ವಯ ನಿರೀಕ್ಷಣಾ ಜಾಮೀನು ಕೋರಿದ್ದಾರೆ. ಶನಿವಾರ ಈ ಅರ್ಜಿ ವಿಚಾರಣೆ ನಡೆಸಿದ ಪೀಠವು ಸಂತ್ರಸ್ತ ವಿದ್ಯಾರ್ಥಿನಿಯ ವಾದ ಆಲಿಸುವ ಸಂಬಂಧ ನೋಟಿಸ್‌ ಜಾರಿ ಮಾಡಲು ಆದೇಶಿಸಿದ್ದು, ಸೆಪ್ಟೆಂಬರ್‌ 7ಕ್ಕೆ ವಿಚಾರಣೆ ಮುಂದೂಡಿದೆ. ಎಲ್ಲಾ ಆರೋಪಿಗಳನ್ನು ವಕೀಲ ಕೆ ಎನ್‌ ವಿಶ್ವನಾಥಯ್ಯ ಪ್ರತಿನಿಧಿಸಿದ್ದಾರೆ.

ಈ ಮಧ್ಯೆ, ಡಾ. ಶಿವಮೂರ್ತಿ ಮುರುಘಾ ಶರಣರು ಸೆಪ್ಟೆಂಬರ್‌ 1ರಂದು ಬಂಧಿತರಾಗಿದ್ದು, ಸೆಪ್ಟೆಂಬರ್‌ 2ರಂದು ನ್ಯಾಯಾಲಯವು ಅವರನ್ನು ಮೂರು ದಿನಗಳ ಕಾಲ ತನಿಖೆಗಾಗಿ ಪೊಲೀಸ್‌ ವಶಕ್ಕೆ ನೀಡಿತ್ತು. ಸೋಮವಾರ ಆರೋಪಿ ಸ್ವಾಮೀಜಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಜಾಮೀನು ಅರ್ಜಿಯೂ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಮಠದ ಅಕ್ಕಮಹಾದೇವಿ ಹಾಸ್ಟೆಲ್‌ ವಾರ್ಡನ್‌ ರಶ್ಮಿ ಅವರನ್ನು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಚಿತ್ರದುರ್ಗದ ಕಾರಾಗೃಹದಲ್ಲಿ ಮಹಿಳಾ ಘಟಕ ಇಲ್ಲದಿರುವುದರಿಂದ ಅವರನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಲಾಗಿದೆ.